ಗೋವುಗಳ ಕೆಚ್ಚಲು ಕೊಯ್ದ ಘಟನೆ ಭವಿಷ್ಯದ ಅಪಾಯದ ಸೂಚನೆ: ಪುತ್ತಿಗೆ ಶ್ರೀ

| Published : Jan 15 2025, 12:46 AM IST

ಸಾರಾಂಶ

ಚಾಮರಾಜಪೇಟೆಯಲ್ಲಿ ಹಸುವಿನ ಕೆಚ್ಚಲು ಕೊಯ್ದ ಪ್ರಕರಣವನ್ನು ಉಡುಪಿ ಕೃಷ್ಣಮಠದ ಪರ್ಯಾಯ ಪೀಠಾಧೀಶ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥರು ತೀವ್ರ ಖಂಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಉಡುಪಿಚಾಮರಾಜಪೇಟೆಯಲ್ಲಿ ಹಸುವಿನ ಕೆಚ್ಚಲು ಕೊಯ್ದ ಪ್ರಕರಣವನ್ನು ಉಡುಪಿ ಕೃಷ್ಣಮಠದ ಪರ್ಯಾಯ ಪೀಠಾಧೀಶ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥರು ತೀವ್ರ ಖಂಡಿಸಿದ್ದಾರೆ.ಈ ಘಟನೆಯ ಬಗ್ಗೆ ಕೇಳಿ ಆಘಾತವಾಗಿದೆ, ಗೋವುಗಳನ್ನು ಕ್ರೂರವಾಗಿ ಹಿಂಸೆಯನ್ನು ನೀಡಿ ಘಾಸಿಗೊಳಿಸಲಾಗಿದೆ. ಗೋವುಗಳೆಂದರೆ ದೇವರ ಸನ್ನಿಧಾನ ಇರುವ ಸ್ಥಳ ಎಂದು ಗೌರವಿಸುತ್ತೇವೆ ಹಾಗೂ ಪವಿತ್ರ ಎಂದು ಪರಿಗಣಿಸಿ ಪೂಜಿಸಲಾಗುತ್ತದೆ. ಇಂತಹ ನಮ್ಮ ದೇಶದಲ್ಲಿ ಈ ರೀತಿಯ ಪರಿಸ್ಥಿತಿ ನಿರ್ಮಾಣವಾಗಿರುವುದು ಭಯಾನಕ ಎಂದು ಶ್ರೀಗಳು ಆತಂಕ ವ್ಯಕ್ತಪಡಿಸಿದ್ದಾರೆ.ಈ ಘಟನೆಯನ್ನು ಕೇವಲ ಗೋವಿನ ಮೇಲೆ ಹಿಂಸೆ ಎಂದು ಪರಿಗಣಿಸಬಾರದು, ಇದು ನಮ್ಮ ಸನಾತನ ಧರ್ಮದ ಅಸ್ತಿತ್ವದ ಪ್ರಶ್ನೆ. ನಮ್ಮ ದೇಶದಲ್ಲೇ ಇಂತಹ ಘಟನೆಗಳು ನಡೆಯುತ್ತಿದೆ ಎಂದರೆ ಮುಂದೆ ಏನಾಗಬಹುದು ಎಂದು ಯೋಚಿಸಿದರೆ ಕತ್ತಲೆ ಕವಿದಂತಾಗಿದೆ. ಇದೊಂದು ಸಾಂಕೇತಿಕ ಘಟನೆಯಾಗಿದ್ದು, ಭವಿಷ್ಯದ ಅಪಾಯವನ್ನು ಸೂಚಿಸುತ್ತಿದೆ ಎಂದು ಶ್ರೀಗಳು ಎಚ್ಚರಿಕೆಯನ್ನೂ ನೀಡಿದ್ದಾರೆ.ಉಡುಪಿ ಗೋಪಾಲಕೃಷ್ಣ ಸನ್ನಿಧಾನದಿಂದ ನಾನು ಈ ಕೃತ್ಯವನ್ನು ಖಂಡಿಸುತ್ತೇನೆ, ಸರ್ಕಾರ ವಿಶೇಷ ಪ್ರಯತ್ನವಹಿಸಿ ಈ ಕ್ರೂರ ಘಟನೆಯ ಅಪರಾಧಿಗಳನ್ನು ಶಿಕ್ಷಿಸಬೇಕು ಎಂದವರು ಆಗ್ರಹಿಸಿದ್ದಾರೆ.