ಸಾರಾಂಶ
ಎಸ್.ಜಿ. ತೆಗ್ಗಿನಮನಿ
ನರಗುಂದ:ತಾಲೂಕಿನಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಸುರಿದ ಹಿನ್ನೆಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ ಗೋವಿನಜೋಳದ ಬೆಳೆ ಬೆಳವಣಿಗೆ ಕುಂಠಿತವಾಗಿದ್ದು, ಬೆಳೆಗಾರರಲ್ಲಿ ನಿರಾಸೆ ಮೂಡಿಸಿದೆ.ಪ್ರತಿ ವರ್ಷ ರೈತರು ಮುಂಗಾರು ಹಂಗಾಮಿನಲ್ಲಿ ಮಲಪ್ರಭಾ ಜಲಾಶಯ ನೀರಾವರಿ ಕಾಲುವೆಗಳಿಗೆ ಹೊಂದಿಕೊಂಡಿರುವ ನೀರಾವರಿ ಜಮೀನುಗಳಲ್ಲಿ ವಾಣಿಜ್ಯ ಬೆಳೆಯಾದ ಗೋವಿನ ಜೋಳ ಬಿತ್ತನೆ ಮಾಡಿ ಪ್ರತಿ 1 ಎಕರೆಗೆ 25ರಿಂದ 35 ಕ್ವಿಂಟಲ್‌ವರೆಗೆ ಬೆಳೆ ತೆಗೆಯುತ್ತಾರೆ. ಆದರೆ ಈ ವರ್ಷ ಮುಂಗಾರು ಹಂಗಾಮಿನಲ್ಲಿ ಸಮಯಕ್ಕೆ ಸರಿಯಾಗಿ ಮಳೆಯಾಗಿದೆ. ಏಕಕಾಲಕ್ಕೆ ನಿರಂತರ ಮಳೆ ಸುರಿದು ಈ ಬೆಳೆಗೆ ತೇವಾಂಶ ಹೆಚ್ಚಾಗಿ ಬೆಳವಣಿಗೆ ಕುಂಠಿತವಾಗಿದೆ. ಮೇಲಾಗಿ ಬೆಳೆಗೆ ಕೆಂಪು, ಹಳದಿ ರೋಗ, ಸೈನಿಕ ಕೀಟ ಬಾಧೆಯಿಂದ ರೈತರಲ್ಲಿ ಆತಂಕ ಹೆಚ್ಚಿದೆ.
ಸಕಾಲಕ್ಕೆ ಲಭ್ಯವಾಗದ ಗೊಬ್ಬರ:ತಾಲೂಕಿನಲ್ಲಿ 17,225 ಹೆಕ್ಟೇರ್ ಪ್ರದೇಶದಲ್ಲಿ ರೈತರು ಗೋವಿನ ಜೋಳ ಬಿತ್ತನೆ ಮಾಡಿದ್ದರು. ನಂತರ ದಿನಗಳಲ್ಲಿ ಔಷಧ ಸಿಂಪಡಣೆ ಮಾಡಿ ಎಡಿ ಹೊಡೆದು ಉತ್ತಮವಾಗಿ ಬೆಳೆ ಬೆಳೆಸಿದ್ದರು. ಬೆಳೆಗೆ ಯೂರಿಯಾ ಗೊಬ್ಬರ ನೀಡಬೇಕಾದ ಸಂದರ್ಭದಲ್ಲಿ ತಾಲೂಕಿನಲ್ಲಿ ಯೂರಿಯಾ ಸಿಗದೆ ಬೆಳವಣಿಗೆ ಕುಂಠಿತವಾಗಿದೆ.ಮಳೆ ವಿವರ:ತಾಲೂಕಿನಲ್ಲಿ ಜುಲೈ ತಿಂಗಳಲ್ಲಿ ವಾಡಿಕೆ ಪ್ರಕಾರ ನರಗುಂದ ಹೋಬಳಿಯಲ್ಲಿ 60.1 ಮಿ ಮೀಟರ್ ಮಳೆ ಆಗಬೇಕಾಗಿತ್ತು. ಆದರೆ 95.3 ಮಿ ಮೀಟರ್ ಮಳೆ ಆಗಿದೆ. ಕೊಣ್ಣೂರ ಹೋಬಳಿಗೆ ವಾಡಿಕೆ ಪ್ರಕಾರ 60.5 ಮಿಲಿ ಮೀಟರ್ ಆಗಬೇಕಾಗಿತ್ತು. ಆದರೆ 71.5 ಮಿ ಮೀಟರ್ ಮಳೆ ಆಗಿದೆ. ಆ. 1ರಿಂದ 10ರ ವರೆಗೆ 21.8 ಮಿ ಮೀಟರ್ ನರಗುಂದ ಹೋಬಳಿಗೆ ಆಗಬೇಕಾಗಿತ್ತು. 76.6 ಮಿಮೀ ಮಳೆ ಆಗಿದೆ. ಕೊಣ್ಣೂರ ಹೋಬಳಿಯಲ್ಲಿ 21.9 ಮಿಮೀ ಮಳೆ ಆಗಬೇಕಾಗಿತ್ತು. 56.7 ಮಿ ಮೀಟರ್ ಮಳೆ ಆಗಿದೆ. ಕಳೆದ ಹಲವು ದಿನಗಳಿಂದ ತಾಲೂಕಿನಲ್ಲಿ ನಿರಂತರ ಮಳೆ ಸುರಿದಿದ್ದರಿಂದ ತೇವಾಂಶ ಹೆಚ್ಚಾಗಿ ಬೆಳವಣಿಗೆ ಕುಂಠಿತವಾಗಿರುವುದು ಕಂಡು ಬಂದಿದೆ.
ತಾಲೂಕಿನ ರೈತರಿಗೆ ಈ ವರ್ಷ ಸಮಯಕ್ಕೆ ಸರಿಯಾಗಿ ಯೂರಿಯಾ ಗೊಬ್ಬರ ಸಿಕ್ಕಿಲ್ಲ. ಮೇಲಾಗಿ ನಿರಂತರ ಮಳೆಯಿಂದ ಮುಂಗಾರಿಯಲ್ಲಿ ಬಿತ್ತನೆ ಮಾಡಿದ ಬೆಳೆ ಇಂದು ತೇವಾಂಶ ಹೆಚ್ಚಾಗಿ ಅಪಾರ ಪ್ರಮಾಣದಲ್ಲಿ ಗೋವಿನ ಜೋಳ ಬೆಳೆ ಹಾನಿಯಾಗಿದೆ. ಆದ್ದರಿಂದ ಸರ್ಕಾರ ವಿಳಂಬ ನೀತಿ ಅನುಸರಿಸದೇ ಬೆಳೆ ಹಾನಿ ಮಾಡಿಕೊಂಡ ರೈತನ ಪ್ರತಿ 1 ಎಕರಿಗೆ 50 ಸಾವಿರ ಪರಿಹಾರ ನೀಡಬೇಕು. ಖಾಸಗಿ ಬೆಳೆ ವಿಮೆ ಕಂಪನಿಯವರು ಕೂಡ ಬೆಳೆ ವಿಮೆ ಹಣವನ್ನು ಬಿಡುಗಡೆ ಮಾಡಬೇಕು ಎಂದು ಜಿಲ್ಲಾ ಭಾರತೀಯ ಕಿಸಾನ್ ಸಂಘದ ಅಧ್ಯಕ್ಷ ಎಸ್.ಎಸ್. ಪಾಟೀಲ ಆಗ್ರಹಿಸಿದರು.ತಾಲೂಕಿನಲ್ಲಿ ರೈತರಿಗೆ ಬೇಕಾದಷ್ಟು ಯೂರಿಯಾ ಗೊಬ್ಬರ ಸಿಕ್ಕಿಲ್ಲ. ಹೀಗಾಗಿ ಸಕಾಲರಕ್ಕೆ ಗೊಬ್ಬರ ನೀಡದ್ದರಿಂದ ಶೇ. 50ರಷ್ಟು ಬೆಳವಣಿಗೆ ಕುಂಠಿತವಾಗಿದೆ. ಖಾಸಗಿ ಹಾಗೂ ಸಹಕಾರಿ ಸಂಘಗಳ ಮುಂದೆ ರೈತರು ದಿನಗಟ್ಟಲೇ ಸರತಿ ಸಾಲಿನಲ್ಲಿ ನಿಂತರೂ ಗೊಬ್ಬರ ಸಿಗುತ್ತಿಲ್ಲ ಹದಲಿ ರೈತ ಬಸವಣ್ಣಪ್ಪ ಸುಂಕದ ಹೇಳಿದರು.
ಪ್ರಸಕ್ತ ವರ್ಷ ಯೂರಿಯಾ ಗೊಬ್ಬರ ಪೂರೈಕೆಯಲ್ಲಿ ಸ್ವಲ್ಪ ಪ್ರಾರಂಭದಲ್ಲಿ ಅಡೆತಡೆಯಾಯಿತು. ನಂತರ ದಿನಗಳಲ್ಲಿ ನಮ್ಮ ತಾಲೂಕಿಗೆ 1000ದಿಂದ 1200 ಮೆಟ್ರಿಕ್ ಟನ್ ಯೂರಿಯಾ ಗೊಬ್ಬರ ತಾಲೂಕಿನ ರೈತರಿಗೆ ವಿತರಣೆ ಮಾಡಲಾಗಿದೆ ಎಂದು ತಾಲೂಕು ಸಹಾಯಕ ಕೃಷಿ ನಿರ್ದೇಶಕ ಎಂ.ಎಸ್. ಕುಲಕರ್ಣಿಹೇಳಿದರು.