ದೇಶಕ್ಕೆ ಮಾಹಿತಿ ತಂತ್ರಜ್ಞಾನದಂತೆ ಗೋವು, ಗೋ ಉತ್ಪನ್ನಗಳು ಮುಖ್ಯ: ನಾಗೇಶ್ ಆಂಗೀರಸ

| Published : Jun 30 2025, 12:34 AM IST

ದೇಶಕ್ಕೆ ಮಾಹಿತಿ ತಂತ್ರಜ್ಞಾನದಂತೆ ಗೋವು, ಗೋ ಉತ್ಪನ್ನಗಳು ಮುಖ್ಯ: ನಾಗೇಶ್ ಆಂಗೀರಸ
Share this Article
  • FB
  • TW
  • Linkdin
  • Email

ಸಾರಾಂಶ

ಬಾಳೆಹೊನ್ನೂರು, ಭಾರತದ ಅಸ್ಮಿತೆ, ಪರಂಪರೆಗೆ ಗೋವು ಅಗತ್ಯ, ಸನಾತನ ಧರ್ಮ ಗಟ್ಟಿಯಾಗಿ ಬೆಳೆಯಲು ಗೋವು ಅತ್ಯಂತ ಪ್ರಮುಖ ಅಂಗವಾಗಿದೆ ಎಂದು ಕಾಮಧೇನು ಗೋ ಸೇವಾ ಕೇಂದ್ರದ ನಾಗೇಶ್ ಆಂಗೀರಸ ಹೇಳಿದರು.

ದೇವಗೋಡು ನೀರ್ಕಟ್ಟು ಗ್ರಾಮದಲ್ಲಿ ಕಾಮಧೇನು ಗೋ ಸೇವಾ ಕೇಂದ್ರದ ಗೋಶಾಲೆ ವಿಸ್ತರಣಾ ಕಟ್ಟಡ ಉದ್ಘಾಟನೆ

ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ಭಾರತದ ಅಸ್ಮಿತೆ, ಪರಂಪರೆಗೆ ಗೋವು ಅಗತ್ಯ, ಸನಾತನ ಧರ್ಮ ಗಟ್ಟಿಯಾಗಿ ಬೆಳೆಯಲು ಗೋವು ಅತ್ಯಂತ ಪ್ರಮುಖ ಅಂಗವಾಗಿದೆ ಎಂದು ಕಾಮಧೇನು ಗೋ ಸೇವಾ ಕೇಂದ್ರದ ನಾಗೇಶ್ ಆಂಗೀರಸ ಹೇಳಿದರು. ದೇವಗೋಡು ನೀರ್ಕಟ್ಟು ಗ್ರಾಮದಲ್ಲಿ ಕಾಮಧೇನು ಗೋ ಸೇವಾ ಕೇಂದ್ರದಿಂದ ಆರಂಭಿಸಿರುವ ಗೋಶಾಲೆ ವಿಸ್ತರಣಾ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. ಗೋವಿದ್ದರೆ ಮಾತ್ರ ಭಾರತ ಉಳಿಯಲು ಸಾಧ್ಯ. ಧಾರ್ಮಿಕತೆ ಹೊರತು ಪಡಿಸಿ ಸಾಮಾಜಿಕವಾಗಿ ಗೋವಿನಿಂದ ಮಾತ್ರ ಭಾರತ ಕಟ್ಟಲು ಸಾಧ್ಯವಿದೆ. ಉಕ್ಕು, ಕಬ್ಬಿಣದಿಂದಲ್ಲ. ದೇಶಕ್ಕೆ ಮಾಹಿತಿ ತಂತ್ರಜ್ಞಾನ ಎಷ್ಟು ಮುಖ್ಯವೋ ಗೋವು ಮತ್ತು ಗೋ ಉತ್ಪನ್ನಗಳು ದೇಶಕ್ಕೆ ಅಷ್ಟೇ ಮುಖ್ಯ ಎಂದರು.

ನಮ್ಮ ಗೋ ಸೇವಾ ಕೇಂದ್ರದಿಂದ ಗೋವಿನ ಚಳುವಳಿ ಹುಟ್ಟು ಹಾಕಿದೆ. ಆದರೆ ಸರ್ಕಾರದ ಆದ್ಯತೆ ಗೋವು ಸಾಕಾಣಿಕೆ ದಾರರಿಗೆ ಇಲ್ಲ ಎಂಬುದು ವಿಷಾದನೀಯ. ಹಸುವಿನ ಹಾಲು ಕರೆಯುವ ಯಂತ್ರವನ್ನು ಜಾಮೀನು ನೀಡಿದರೂ ಸಹ ಸರ್ಕಾರ ಸಾಲವಾಗಿ ನೀಡುತ್ತಿಲ್ಲ. ಆದರೆ ಒಬ್ಬ ವ್ಯಕ್ತಿ ಗೋವಿನಿಂದ ಸ್ವಾವಲಂಬಿ ಜೀವನ ನಡೆಸಲು ಸಾಧ್ಯವಿದೆ. ಗೋ ಸಾಕಾಣಿಕೆ ಇಂದು ಕೈಗಾರಿಕೆಯಾಗಿ ಬದಲಾಗುತ್ತಿದೆ. ಗೋವಿನ ಉತ್ಪನ್ನದಿಂದ ಆಯುರ್ವೇದ ಔಷಧಿ, ಕೃಷಿ ಗೊಬ್ಬರ, ಸಿಎನ್‌ಜಿ ಗ್ಯಾಸ್ ಉತ್ಪಾದನೆಯನ್ನು ಸಹ ಮಾಡಲಾಗುತ್ತಿದೆ. ಇಲ್ಲಿಯವರೆಗೂ ಇದು ಮುಂದುವರಿದಿದೆ.

ಈವರೆಗೆ ಸರ್ಕಾರಗಳು ಗೋವಿನ ಮಹತ್ವ ಮುಚ್ಚಿಟ್ಟಿದ್ದವು. ಪಶು ವಿಶ್ವವಿದ್ಯಾಲಯಗಳು ಗೋವಿನ ಬಗ್ಗೆ ಸಂಶೋಧನೆ ನಡೆಸಿದ್ದರೆ ಗೋವಿನ ಮಹತ್ವ ವಿಶ್ವಕ್ಕೆ ಸಾರಬಹುದಿತ್ತು. ಈ ಹಿನ್ನೆಲೆಯಲ್ಲಿ ಮುಂದಿನ ತಲೆಮಾರಿಗೆ ಗೋವಿನ ಕುರಿತು ತಿಳಿಸಲು ಸಣ್ಣ ಪ್ರಯತ್ನ ಆರಂಭಿಸಲಾಗಿದೆ.ಸಮಾಜದಲ್ಲಿ ಎಂಜಿನಿಯರ್, ಡಾಕ್ಟರ್, ವಿಜ್ಞಾನಿ ಮುಂತಾದ ಹುದ್ದೆಯಲ್ಲಿರುವ ಯುವಜನರು ಗೋ ಸಾಕಾಣಿಗೆ ಮುಂದೆ ಬಂದಲ್ಲಿ ಅದ್ಭುತ ಕ್ರಾಂತಿ ಮಾಡಬಹುದು. ಗೋ ಸಾಕಾಣಿಕೆ ಹೊರೆ ಎಂದು ತಿಳಿಯದೆ ಕ್ರಾಂತಿ ಮಾಡಲು ಬರಬೇಕು. ಸಂಶೋಧನೆಗಳು ನಡೆಯಬಹುದು ಎಂದು ಹೇಳಿದರು.ಕಾಮಧೇನು ಗೋ ಶಾಲೆಯಿಂದ ಮುಂದಿನ ದಿನಗಳಲ್ಲಿ ಸಿಎನ್‌ಜಿ ಉತ್ಪಾದನೆ, ಎರೆಹುಳು ಗೊಬ್ಬರ ತಯಾರಿ, ಫಿನಾಯಿಲ್ ಹಾಗೂ ವಿಭೂತಿ ತಯಾರಿಸುವ ಘಟಕ ಆರಂಭಿಸುವ ಉದ್ದೇಶ ಹೊಂದಿದೆ. ಇದರಿಂದ ಗೋಶಾಲೆ ಯಾವುದೇ ಅನುದಾನ, ದೇಣಿಗೆ ಪಡೆಯದೆ ಕೈಗಾರಿಕೆ ಆರಂಭಿಸಿ ಸ್ವಾವಲಂಬಿಯಾಗುವ ಆಶಯ ಹೊಂದಿದೆ. ಹಿಂದೂಗಳು ದೇವಸ್ಥಾನ, ಮಠ ಮಂದಿರ, ಪೂಜೆಗಳಿಗೆ ಎಷ್ಟು ಆದ್ಯತೆ ನೀಡುತ್ತಾರೋ ಅಷ್ಟೇ ಮಹತ್ವವನ್ನು ಗೋವಿಗೆ ನೀಡಬೇಕು. ಬದುಕಿನ ಸಾರ್ಥಕ್ಯ ಅನುಭವಿಸಲು ತಂದೆ, ತಾಯಿಗಳ ನಂತರ ಗೋ ಸೇವೆಯೇ ಪ್ರಮುಖ ಸಾಧನವಾಗಿದೆ ಎಂದರು. ಕರ್ಣಾಟಕ ಬ್ಯಾಂಕ್ ನಿವೃತ್ತ ವ್ಯವಸ್ಥಾಪಕ ಜೆ.ಆರ್.ನಾಗಭೂಷಣ್‌ರಾವ್ ಮಾತನಾಡಿ, ಗೋ ಸೇವೆ ಮೂಲಕ ಕಾಮಧೇನು ಗೋ ಸೇವಾ ಟ್ರಸ್ಟ್ ಹಿಂದೂ ಧರ್ಮದ ಕೊಂಡಿಯನ್ನು ಬಲವಾಗಿಸುತ್ತಿದೆ. ಗ್ರಾಮೀಣ ಭಾಗದಲ್ಲಿ ಕೃಷಿಕರು ಒಂದೆರಡು ಗೋವುಗಳನ್ನು ಸಾಕಲು ಪ್ರಯಾಸ ಪಡುತ್ತಾರೆ. ಆದರೆ ಕಳೆದ ಹಲವಾರು ವರ್ಷಗಳಿಂದ ಆಂಗೀರಸ ಕುಟುಂಬಸ್ಥರು ನೂರಾರು ಗೋವುಗಳನ್ನು ಒಂದೇ ಸೂರಿನಡಿ ಸಾಕಿ ಸಲಹುತ್ತಿರುವುದು ಅತ್ಯಂತ ಶ್ಲಾಘನೀಯ. ಇಂತಹ ಗೋ ಸೇವಾ ಕಾರ್ಯಗಳಿಗೆ ಪ್ರತಿಯೊಬ್ಬರ ಸಹಕಾರ ಇರಬೇಕು ಎಂದರು.

ಪ್ರಗತಿ ಪರ ರೈತ ಮಹಿಳೆ ಶಾಂತಾ ನಾಗಭೂಷಣ, ಗೋ ಸೇವಾ ಕೇಂದ್ರದ ಸುಮಾ ನಾಗೇಶ್, ಲಲಿತಾ ಆಂಗೀರಸ ಮತ್ತಿತರರು ಹಾಜರಿದ್ದರು.೨೯ಬಿಹೆಚ್‌ಆರ್ ೧:

ಬಾಳೆಹೊನ್ನೂರು ಸಮೀಪದ ನೀರ್ಕಟ್ಟು ಗ್ರಾಮದಲ್ಲಿ ಕಾಮಧೇನು ಗೋ ಸೇವಾ ಕೇಂದ್ರದಿಂದ ಆರಂಭಿಸಿರುವ ಗೋಶಾಲೆ ವಿಸ್ತರಣಾ ಕಟ್ಟಡವನ್ನು ಜೆ.ಆರ್.ನಾಗಭೂಷಣರಾವ್ ಗೋವು ಕಟ್ಟುವ ಮೂಲಕ ಉದ್ಘಾಟಿಸಿದರು. ನಾಗೇಶ್ ಆಂಗೀರಸ, ಶಾಂತಾ ನಾಗಭೂಷಣ ಇದ್ದರು