ಸಾರಾಂಶ
- ಶ್ರೀ ಶಂಕರದೇವರ ಮಠದಲ್ಲಿ ನಿರ್ಮಾಣಗೊಂಡಿರುವ ಗೋ ಶಾಲೆ ಉದ್ಘಾಟನೆ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಭಾರತೀಯ ಪರಂಪರೆಯಲ್ಲಿ ಸರ್ವ ದೇವತೆಗಳ ಆವಾಸ ಸ್ಥಾನ ಗೋವುಗಳು. ಭಾರತೀಯರಲ್ಲಿ ಸಣ್ಣ ಉಪಕಾರ ಮಾಡಿ ದರೂ ಕೃತಜ್ಞತೆಯಿಂದ ಸ್ಮರಿಸುವ ಜೊತೆಗೆ ದೈವಿಭಾವದಿಂದ ಗೌರವಿಸುವ ವಿಶೇಷ ಗುಣವಿದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದರು.ತಾಲೂಕಿನ ಹರಿಹರದಹಳ್ಳಿ ಗ್ರಾಪಂ ವ್ಯಾಪ್ತಿಯ ಶಂಕರದೇವರ ಮಠದ ಭೂಮಿಯಲ್ಲಿ ವಿದ್ಯಾ ಕಾಫಿ ಹಾಗೂ ಸರಸ್ವತಿ ಮತ್ತು ಕೆ.ಎಂ.ಭಟ್ ಫೌಂಡೇಷನ್ ಟ್ರಸ್ಟ್ ನಿರ್ಮಿಸಿರುವ ಗೋ ಶಾಲೆಯನ್ನು ಶ್ರೀಕೃಷ್ಣ ಜಯಂತಿಯಂದು ಉದ್ಘಾಟಿಸಿ ಮಾತನಾಡಿ ದರು.ಅನಾಧಿ ಕಾಲದಿಂದಲೂ ಗೋವಿಗೆ ವಿಶಿಷ್ಟ ಸ್ಥಾನಮಾನವನ್ನು ಭಾರತೀಯರು ಕೊಡುತ್ತಿದ್ದಾರೆ. ಗೋವುಗಳು ಕಣ್ಣಿನ ಎದುರಿ ರುವ ದೇವರೆಂದು ಭಾವಿಸುತ್ತೇನೆ. ಗೋವಿನಲ್ಲಿರುವ ಪ್ರತಿಯೊಂದು ಅಂಶ ಮತ್ತು ಅಂಗಾಂಗ ದೈವಿಸ್ವರೂಪವೆಂದು ಭಾರತೀಯ ಸನಾತನ ಧರ್ಮದಲ್ಲಿದೆ ಎಂದರು.ಗೋಪಾಲನ ಕೆಲಸಕ್ಕೆ ಗೋವು ಬಾಯ್ತುಂಬ ಹರಸಲಿದೆ ಎಂಬುದು ನಂಬಿಕೆ. ಇಂಥಹ ಗೋ ಸೇವಾ ಕಾರ್ಯದಲ್ಲಿ ವಿದ್ಯಾಕಾಫಿ ಮಾಲೀಕರು ನೂರಾರು ಗೋವುಗಳಿಗೆ ಆಶ್ರಯವಾಗಲು ಗೋಶಾಲೆ ನಿರ್ಮಿಸಿ ಸಮಾಜಕ್ಕೆ ನೀಡುವ ಮೂಲಕ ಕೆರೆ ನೀರನ್ನು ಕೆರೆಗೆ ಚೆಲ್ಲುವಂತೆ ಮಾಡಿದ್ದು ಇನ್ನಷ್ಟು ಸಮಾಜಮುಖಿ ಕಾರ್ಯವಾಗಲಿ ಎಂದು ಶ್ಲಾಘಿಸಿದರು.ಸಮಾಜದಲ್ಲಿ ಉಳ್ಳವರು ಬೇಕಾದಷ್ಟು ಮಂದಿ ಇರಬಹುದು. ಆದರೆ ಉದಾರ ಮನಸ್ಸಿನ ವ್ಯಕ್ತಿತ್ವ ಎಲ್ಲರಿಗೂ ಇರುವುದಿಲ್ಲ. ಆ ಕಾರ್ಯದಲ್ಲಿ ಸಮಾಜಕ್ಕಾಗಿ ಸೇವೆ ಮಾಡಿರುವ ವಿದ್ಯಾ ಕಾಫಿ ಕುಟುಂಬಕ್ಕೆ ಭಗವಂತನು ಆರೋಗ್ಯ, ಆಯುಷ್ಯನ್ನು ಹೆಚ್ಚು ಕರುಣಿಸುವಂತಾಗಲೀ ಹಾಗೂ ಯಾವುದೇ ವಿಘ್ನಗಳಿದ್ದಲ್ಲಿ ದೂರವಾಗಿ ನೆಮ್ಮದಿ ಜೀವನ ಲಭಿಸಲಿ ಎಂದು ಆಶಿಸಿದರು.ಈ ಹಿಂದಿನ ಕಾಲದಲ್ಲಿ ರಾಕ್ಷಸರ ಅಟ್ಟಹಾಸವಿತ್ತು. ಇಂದಿನ ಯುಗದಲ್ಲಿ ರಾಕ್ಷಸಿ ಮನಸ್ಥಿತಿ ಜನರಿದ್ದಾರೆ. ರಾಕ್ಷಸರ ಸಂಹಾರಕ್ಕೆ ಶ್ರೀರಾಮ, ಶ್ರೀಕೃಷ್ಣ ಅವತಾರವೆತ್ತಿದ್ದರು. ಇಂದಿಗೂ ರಾಕ್ಷಸೀಯ ಮನೋಭಾವ ಕಡಿಮೆಯಾಗಿಲ್ಲ. ಗೋವು ಕೆಚ್ಚಲು ಕತ್ತರಿಸುವುದು, ಹಿಂಸಿಸುವ ಮೂಲಕ ಸನಾತನ ಧರ್ಮ ಪಾಲಿಸುವ ಸಜ್ಜನರನ್ನು ಕೆರಳಿಸುವ ಕೆಲಸ ದುಷ್ಟ ಮನಸ್ಥಿತಿ ಮಾಡುತ್ತಿವೆ. ಈ ಸಂತತಿ ಕೊನೆಯಾಗಿ ಅವರಲ್ಲೂ ಕೂಡ ಸನ್ನಡತೆ ಭಾವ ಮೂಡಬೇಕು ಎಂದರು.ಶಂಕರದೇವರ ಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿ, ಶ್ರೀ ಮಠದ ಪ್ರದೇಶದಲ್ಲಿ ಸುಸಜ್ಜಿತವಾಗಿ ಗೋವುಗಳ ಪಾಲನೆಗಾಗಿ ಗೋಶಾಲೆ ನಿರ್ಮಿಸಿರುವುದು ಖುಷಿಯ ಸಂಗತಿ. ಹೀಗಾಗಿ ಗೋವುಗಳನ್ನು ಸಾಕದೇ ಬೀದಿಗೆ ಬಿಡುವವರು ಅಥವಾ ಹೋರಿಕರ ಜನಿಸುವ ಕರುಗಳನ್ನು ಕೂಡಾ ಗೋ ಶಾಲೆಯಲ್ಲಿ ಬಿಟ್ಟಲ್ಲಿ ಸೂಕ್ತವಾಗಿ ನಿರ್ವಹಿಸಲಾಗುತ್ತದೆ ಎಂದು ಹೇಳಿದರು.ಗೋವುಗಳ ಅಂಗಾಂಗ ಪರೋಪಕಾರಕ್ಕಾಗಿ ಮೀಸಲಿಟ್ಟಿರುವ ಕಾರಣ ಗೋವಿನ ಎಲ್ಲಾ ಅಂಗಾಂಗಳಲ್ಲಿ ಒಂದೊಂದು ದೇವತೆಗಳು ನೆಲೆಸಿದ್ದು ಮನುಷ್ಯ ಪೂಜಿಸುವ ಗುಣ ಬೆಳೆಸಿಕೊಂಡಿದ್ದಾನೆ. ಗೋವಿನ ಪರಿಪೂರ್ಣ ಬದುಕು ದೇವತಾ ಕಾರ್ಯ ಮಾಡುವ ಉದ್ದೇಶದಿಂದ ಗೋಮಾತೆಯನ್ನು ಪುಣ್ಯಕೋಟಿಯೆಂದು ಕರೆಯಲ್ಪಡುತ್ತಾರೆ ಎಂದರು.ವಿದ್ಯಾ ಕಾಫಿ ಮಾಲೀಕ ಕೆ.ಶ್ಯಾಮ್‌ಪ್ರಸಾದ್ ಮಾತನಾಡಿ, ಶ್ರೀಕೃಷ್ಣ ಜಯಂತಿ ಪವಿತ್ರ ದಿನದಂದು ಸಾರ್ವಜನಿಕರಿಗೆ ಅನುಕೂಲವಾಗಲು ಗೋಶಾಲೆ ತೆರೆಯಲಾಗಿದೆ. ಆಸಕ್ತಿ ಇರುವವರು ಗೋವುಗಳನ್ನು ಇಲ್ಲಿಗೆ ಬಿಡಬಹುದು. ಸಾಧ್ಯವಾದಲ್ಲಿ ಮೇವುಗಳನ್ನು ಪೂರೈಸಬಹುದು. ಇದೀಗ 100 ಗೋವುಗಳಿದ್ದು ಸುಮಾರು 500 ಹಸುಗಳನ್ನು ಪಾಲನೆ ಮಾಡುವ ವಿಸ್ತೀರ್ಣ ಹೊಂದಲಾಗಿದೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ವಿದ್ಯಾ ಕಾಫಿ ಮಾಲೀಕರಾದ ವೀಣಾ ಶ್ಯಾಮ್ ಪ್ರಸಾದ್, ಮಕ್ಕಳಾದ ವಿದ್ಯಾ, ವಿನಯ, ಗೋಶಾಲೆ ನಿರ್ವಹಣೆ ಮುಖ್ಯಸ್ಥ ಪ್ರಕಾಶ್, ಮನು, ಸಿಬ್ಬಂದಿ ರಘು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಉಪಸ್ಥಿತರಿದ್ದರು.
17 ಕೆಸಿಕೆಎಂ 1ಚಿಕ್ಕಮಗಳೂರು ತಾಲೂಕಿನ ಶಂಕರದೇವರ ಮಠದ ಭೂಮಿಯಲ್ಲಿ ನಿರ್ಮಿಸಲಾದ ಗೋಶಾಲೆಯನ್ನು ಶ್ರೀಕೃಷ್ಣ ಜಯಂತಿ ದಿನದಂದು ಸಿ.ಟಿ. ರವಿ ಉದ್ಘಾಟಿಸಿದರು. ವಿದ್ಯಾ ಕಾಫಿ ಮಾಲೀಕ ಕೆ.ಶ್ಯಾಮ್‌ಪ್ರಸಾದ್, ವೀಣಾ ಶ್ಯಾಮ್‌ಪ್ರಸಾದ್, ಶ್ರೀ ಚಂದ್ರಶೇಖರ ಸ್ವಾಮೀಜಿ, ವಿದ್ಯಾ, ವಿನಯ ಇದ್ದರು.