ಹುಲಿ ದಾಳಿಗೆ ಹಸುಗಳು ಬಲಿ

| Published : Apr 24 2024, 02:18 AM IST

ಸಾರಾಂಶ

ಹುಲಿ ದಾಳಿಗೆ ಹಸುಗಳು ಬಲಿಯಾಗಿರುವ ಘಟನೆ ನಡೆದಿದೆ. ಅರಣ್ಯ ಇಲಾಖೆ ಸ್ಥಳಕ್ಕೆ ಭೇಟಿ ನೀಡಿ ಕ್ರಮ ಕೈಗೊಂಡಿದ್ದಾರೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ದಕ್ಷಿಣ ಕೊಡಗಿನ ನಿಟ್ಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹುಲಿ ಮತ್ತೆ ಕಾಣಿಸಿಕೊಂಡಿದ್ದು, ಹುಲಿ ದಾಳಿಗೆ ಹಸುಗಳು ಬಲಿಯಾಗಿರುವ ಘಟನೆ ನಡೆದಿದೆ.

ನಿಟ್ಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಡ್ಡರಮಾಡಿನ ಪಟ್ಟಡ ಬೋಪಯ್ಯ ನವರ ಎರಡು ಹಸುಗಳನ್ನು ಸೋಮವಾರ ರಾತ್ರಿ ಹುಲಿ ಬಲಿತೆಗೆದುಕೊಂಡಿದೆ.

ಅರಣ್ಯ ಇಲಾಖೆ ಸ್ಥಳಕ್ಕೆ ಭೇಟಿ ನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಪೊನ್ನಂಪೇಟೆ ತಾಲೂಕಿನ ಹಲವು ಕಡೆಗಳಲ್ಲಿ ಹುಲಿ ಹಾವಳಿ ಹೆಚ್ಚಾಗಿದ್ದು, ಈ ಭಾಗದ ಜನರು ಆತಂಕಗೊಂಡಿದ್ದಾರೆ. ಇತ್ತೀಚೆಗೆ ಈ ಭಾಗದಲ್ಲಿ ಕಾರ್ಮಿಕನೊಬ್ಬನನ್ನು ಹುಲಿ ಬಲಿ ಪಡೆದುಕೊಂಡಿತ್ತು. ಆದ್ದರಿಂದ ಅರಣ್ಯ ಇಲಾಖೆ ಕ್ರಮಕ್ಕೆ ಮುಂದಾಗಬೇಕೆಂದು ಈ ಭಾಗದ ಜನರು ಆಗ್ರಹಿಸಿದ್ದಾರೆ.

------------------

ತೋಳೂರುಶೆಟ್ಟಳ್ಳಿ ಗ್ರಾಮದಲ್ಲಿ ವಾರ್ಷಿಕ ಸುಗ್ಗಿ ಉತ್ಸವ

ಕನ್ನಡಪ್ರಭ ವಾರ್ತೆ ಸೋಮವಾರಪೇಟೆ

ಅನಾದಿ ಕಾಲದಿಂದಲೂ ಆಚರಿಸಿಕೊಂಡು ಬರುತ್ತಿರುವ ತೋಳೂರುಶೆಟ್ಟಳ್ಳಿ ಗ್ರಾಮದ ಶ್ರೀ ಸಬ್ಬಮ್ಮದೇವರ ವಾರ್ಷಿಕ ಸುಗ್ಗಿ ಉತ್ಸವ ಏ. 25 (ನಾಳೆ) ಮತ್ತು 26ರಂದು ನಡೆಯಲಿದೆ ಎಂದು ಸಮಿತಿ ಅಧ್ಯಕ್ಷ ಡಿ.ಎನ್. ರಾಜಗೋಪಾಲ್ ತಿಳಿಸಿದ್ದಾರೆ.

9 ರಿಂದಲೇ ವಾರ್ಷಿಕ ಸುಗ್ಗಿ ಆಚರಣೆಗಳು ಆರಂಭಗೊಂಡಿದ್ದು, ನಿರ್ವಾಣ ಸ್ವಾಮಿ ಮಠ ಮತ್ತು ಪುಷ್ಪಗಿರಿಯಲ್ಲಿ ಮಳೆ ಕರೆಯುವುದು, ಬೀರೇದೇವರ ಪೂಜೆ, ಗುಮ್ಮನಮಾರಿ ಪೂಜೆ, ಬಾವಿಗದ್ದೆ ಊಟ, ಊರೊಡೆಯನ ಪೂಜೆ, ಔತಣಮಕ್ಕಿ ಪೂಜೆ, ಮೊದಲ ಬೇಟೆ ಪೂಜಾ ವಿಧಿಗಳು ಮುಕ್ತಾಯಗೊಂಡಿದ್ದು, 25ರಂದು ಬೆಳಗ್ಗೆ ದೇವರ ಗಂಗಾಸ್ನಾನ, ಮುಡಿ ಹರಕೆ ಒಪ್ಪಿಸುವುದು, ಬೀದಿ ರಾಜಾಂಗಣದಲ್ಲಿ ಮೆರವಣಿಗೆ, ಸನ್ನಿಧಿ ಪ್ರವೇಶ ಕಾರ್ಯಕ್ರಮ ನಡೆಯಲಿದೆ.

26ರಂದು ಬೆಳಗ್ಗೆ 6.30ರಿಂದ 9.30ರವರೆಗೆ ಹಣ್ಣುಕಾಯಿ ಹಾಗೂ ಮಡೆ ಉತ್ಸವ ಜರುಗಲಿದೆ. ಪ್ರಸಕ್ತ ಸಾಲಿನ ಸುಗ್ಗಿ ದೇವರ ಕಾರ್ಯಗಳನ್ನು ಕರಡಿಕೊಪ್ಪ ಗ್ರಾಮಸ್ಥರು ನೆರವೇರಿಸುತ್ತಿದ್ದಾರೆ. 28ರಂದು ಹೆದ್ದೇವರ ಬನಕ್ಕೆ ಹಾಲೆರೆಯುವ ಮೂಲಕ ಪ್ರಸಕ್ತ ಸಾಲಿನ ಸುಗ್ಗಿ ಉತ್ಸವಕ್ಕೆ ತೆರೆ ಬೀಳಲಿದೆ ಎಂದು ಡಿ.ಎನ್. ರಾಜ್‍ಗೋಪಾಲ್ ತಿಳಿಸಿದ್ದಾರೆ.