ಮಳೆ ಕೊರತೆಯಿಂದ ಹೊಲಗಳಲ್ಲಿ ಹಸಿರು ಮೇವು ಮಾಯವಾಗಿದೆ. ಸಂಗ್ರಹಿಸಿಟ್ಟ ಒಣಮೇವು ಬರಿದಾಗುತ್ತಿದೆ. ದುಬಾರಿ ಬೆಲೆಗೆ ಮೇವು ಖರೀದಿಸಿ ಜಾನುವಾರು ಸಾಕುವ ಶಕ್ತಿ ರೈತರಿಗಿಲ್ಲ.
ಅಜೀಜಅಹ್ಮದ ಬಳಗಾನೂರ
ಹುಬ್ಬಳ್ಳಿ:ರೈತರ ಕೊಟ್ಟಿಗೆಯಲ್ಲಿ ಮಗಳಂತೆ ಬೆಳೆದವಳು ನಾನು. ನನ್ನ ಹಾಲು ಮನೆಯ ಮಕ್ಕಳಿಗೆ ಆಹಾರವಾದರೆ, ನನ್ನ ಕರುಗಳು ರೈತನ ಬದುಕಿಗೆ ಆಸರೆಯಾಗಿದ್ದವು. ಹೊಲದ ಕೆಲಸಕ್ಕೆ ಎತ್ತುಗಳು ಹೆಗಲು ಕೊಟ್ಟಿದ್ದವು. ಆದರೆ, ಇಂದು ಹೊಲದಲ್ಲಿ ಬೆಳೆಯಿಲ್ಲ, ಕೊಟ್ಟಿಗೆಯಲ್ಲಿ ಮೇವಿಲ್ಲ, ಕುಡಿಯಲು ನೀರೂ ಇಲ್ಲ. ಸಾಕುವ ಶಕ್ತಿಯಿಲ್ಲದೆ ಒಡೆಯ ನನ್ನನ್ನು ಸಂತೆಗೆ ತಂದಿದ್ದಾನೆ. ಖರೀದಿದಾರರು ಬೆಲೆ ಚೌಕಾಸಿ ಮಾಡುತ್ತಿದ್ದರೆ, ನನ್ನನ್ನು ಮಾರುವ ನೋವಿನಿಂದ ಆತ ಕಣ್ಣೀರು ಸುರಿಸುತ್ತಿದ್ದಾನೆ...
ಇದು ಬರದ ಹೊಡೆತಕ್ಕೆ ಸಿಲುಕಿದ ಮಾರಾಟಕ್ಕೆ ತನ್ನನ್ನು ಒಡ್ಡಿಕೊಂಡಿರುವ ರೈತರ ಗೋಮಾತೆ ಹಸುವಿನ ಮೂಕವೇದನೆ!ಕೃಷಿಯ ಬೆನ್ನೆಲುಬಾಗಿದ್ದ ಹಸು, ಎತ್ತುಗಳೇ ಇಂದು ರೈತನಿಗೆ ಹೊರೆಯಾಗುತ್ತಿವೆ. ಬರದ ಭೀಕರತೆ ಈಗ ಕೊಟ್ಟಿಗೆಯನ್ನೂ ಖಾಲಿ ಮಾಡುತ್ತಿದೆ.
ಕೊಟ್ಟಿಗೆಯಿಂದ ಸಂತೆಗೆ:ಮಳೆ ಕೊರತೆಯಿಂದ ಹೊಲಗಳಲ್ಲಿ ಹಸಿರು ಮೇವು ಮಾಯವಾಗಿದೆ. ಸಂಗ್ರಹಿಸಿಟ್ಟ ಒಣಮೇವು ಬರಿದಾಗುತ್ತಿದೆ. ದುಬಾರಿ ಬೆಲೆಗೆ ಮೇವು ಖರೀದಿಸಿ ಜಾನುವಾರು ಸಾಕುವ ಶಕ್ತಿ ರೈತರಿಗಿಲ್ಲ. ಬೆಳೆ ಕೈಕೊಟ್ಟು ಆದಾಯವಿಲ್ಲದ ಸ್ಥಿತಿಯಲ್ಲಿ ಜಾನುವಾರುಗಳ ನಿರ್ವಹಣೆಯೂ ಹೊರೆಯಾಗಿದೆ. ಪರಿಣಾಮ, ಹುಬ್ಬಳ್ಳಿಯ ಅಮರಗೋಳ ಎಪಿಎಂಸಿ ಸೇರಿದಂತೆ ಜಿಲ್ಲೆಯ ವಿವಿಧೆಡೆ ಇರುವ ಜಾನುವಾರು ಸಂತೆಯಲ್ಲಿ ಮಾರಾಟಕ್ಕೆ ಬರುತ್ತಿರುವ ಹಸು, ಎತ್ತುಗಳ ಸಂಖ್ಯೆ ಹೆಚ್ಚುತ್ತಿದೆ.
ಹಿಂದೆ ಹಾಲು ಕಡಿಮೆಯಾದ ಅಥವಾ ವಯಸ್ಸಾದ ಜಾನುವಾರುಗಳನ್ನು ಮಾತ್ರ ಮಾರುತ್ತಿದ್ದ ರೈತರು, ಈಗ ಉತ್ತಮ ಹಾಲು ನೀಡುವ ಹಸು, ದುಡಿಯುವ ಎತ್ತು ಹಾಗೂ ಎಮ್ಮೆಗಳನ್ನೂ ಮಾರುತ್ತಿದ್ದಾರೆ. ಇದು ಬರದ ತೀವ್ರತೆಗೆ ಹಿಡಿದ ಕನ್ನಡಿ.ಕುಟುಂಬ, ಗೋವು:
ಒಂದೆಡೆ ಮಕ್ಕಳ ವಿದ್ಯಾಭ್ಯಾಸ, ಕುಟುಂಬ ನಿರ್ವಹಣೆ, ಕೃಷಿ ಸಾಲದ ಹೊರೆ, ಮತ್ತೊಂದೆಡೆ ಜಾನುವಾರುಗಳಿಗೆ ಮೇವು, ನೀರು ಮತ್ತು ಆರೈಕೆಯ ವೆಚ್ಚ. ಬೆಳೆ ಇಲ್ಲದೆ ಆದಾಯದ ಮೂಲಗಳು ಬತ್ತಿರುವಾಗ ಜಾನುವಾರುಗಳ ಹೊಟ್ಟೆ ತುಂಬಿಸುವುದೂ ಕಷ್ಟವಾಗಿದೆ. ಹೀಗಾಗಿ, ವರ್ಷಗಳಿಂದ ಪ್ರೀತಿಯಿಂದ ಸಾಕಿದ ಜಾನುವಾರುಗಳನ್ನು ಕಣ್ಣೀರಿನೊಂದಿಗೆ ಮಾರಾಟಕ್ಕೆ ತರುತ್ತಿದ್ದಾರೆ.ಸಂತೆಯಲ್ಲೂ ರೈತರಿಗೆ ನೆಮ್ಮದಿಯಿಲ್ಲ. ನಿರೀಕ್ಷಿತ ಬೆಲೆ ಸಿಗದೆ, ಖರೀದಿದಾರರ ಚೌಕಾಸಿಗೆ ಒಪ್ಪಿ ಕಡಿಮೆ ದರಕ್ಕೆ ಮಾರಬೇಕಾಗಿದೆ. ತಕ್ಷಣದ ಹಣಕಾಸಿನ ಸಂಕಷ್ಟ ನೀಗಿದರೂ, ಮಳೆ ಬಂದ ಬಳಿಕ ಮತ್ತೆ ಹೈನುಗಾರಿಕೆ ಆರಂಭಿಸಲು ಜಾನುವಾರು ಖರೀದಿಸುವುದು ರೈತರಿಗೆ ಮತ್ತೊಂದು ಹೊರೆಯಾಗಲಿದೆ.
ಗ್ರಾಮೀಣ ಆರ್ಥಿಕತೆಗೂ ಪೆಟ್ಟು:ಜಾನುವಾರುಗಳ ಮಾರಾಟದಿಂದ ರೈತ ಕುಟುಂಬಗಳಿಗಷ್ಟೇ ಅಲ್ಲ, ಗ್ರಾಮೀಣ ಆರ್ಥಿಕತೆಗೂ ಹೊಡೆತ ಬೀಳಲಿದೆ. ಹಾಲು ಉತ್ಪಾದನೆ ಕುಸಿಯುವುದರ ಜತೆಗೆ, ಎತ್ತುಗಳನ್ನು ಅವಲಂಬಿಸಿರುವ ಸಣ್ಣ ರೈತರ ಕೃಷಿ ಚಟುವಟಿಕೆಗಳಿಗೂ ತೊಂದರೆಯಾಗಲಿದೆ. ಹೈನುಗಾರಿಕೆಯಿಂದ ದೊರೆಯುತ್ತಿದ್ದ ಪೂರಕ ಆದಾಯವೂ ಕೈತಪ್ಪಲಿದೆ ಎಂಬ ಆತಂಕ ಇಂದು ನಿರ್ಮಾಣವಾಗುತ್ತಿದೆ.
ಬರ ಕೇವಲ ಹೊಲದ ಬೆಳೆಗಳನ್ನಷ್ಟೇ ಒಣಗಿಸಿಲ್ಲ, ರೈತನ ಬದುಕಿನ ಜೀವಾಳವನ್ನೂ ಕಸಿಯುತ್ತಿದೆ. ಸರ್ಕಾರ ಕೂಡಲೇ ಗೋಶಾಲೆಗಳನ್ನು ಆರಂಭಿಸಿ, ಮೇವು ಬ್ಯಾಂಕ್ ಸ್ಥಾಪಿಸಿ, ರಿಯಾಯಿತಿ ದರದಲ್ಲಿ ಮೇವು ಪೂರೈಸಬೇಕು. ಇಲ್ಲದಿದ್ದರೆ ಬರದ ಹೊಡೆತಕ್ಕೆ ಕೊಟ್ಟಿಗೆಗಳು ಖಾಲಿಯಾಗಿ, ಕೃಷಿ ಮತ್ತು ಹೈನುಗಾರಿಕೆ ಎರಡೂ ಸಂಕಷ್ಟಕ್ಕೆ ಸಿಲುಕಲಿವೆ.ಜಿಲ್ಲೆಯಲ್ಲಿ ಎಂಟು ಕಡೆ ಜಾನುವಾರು ಸಂತೆ:
ಧಾರವಾಡ ಜಿಲ್ಲೆಯಲ್ಲಿ ವಾರದ ವಿವಿಧ ದಿನ ಎಂಟು ಪ್ರಮುಖ ಸ್ಥಳಗಳಲ್ಲಿ ಜಾನುವಾರು ಸಂತೆಗಳು ನಡೆಯುತ್ತವೆ. ಧಾರವಾಡ, ಕಲಘಟಗಿ ಹಾಗೂ ನವಲಗುಂದದಲ್ಲಿ ಪ್ರತಿ ಮಂಗಳವಾರ, ಅಣ್ಣಿಗೇರಿ ಮತ್ತು ಕುಂದಗೋಳದಲ್ಲಿ ಪ್ರತಿ ಬುಧವಾರ, ನೂಲ್ವಿಯಲ್ಲಿ ಪ್ರತಿ ಗುರುವಾರ ಹಾಗೂ ಹುಬ್ಬಳ್ಳಿಯ ಅಮರಗೋಳ ಎಪಿಎಂಸಿ ಆವರಣದಲ್ಲಿ ಪ್ರತಿ ಶನಿವಾರ, ಕಲಘಟಗಿ ತಾಲೂಕಿನ ಮಿಶ್ರಿಕೋಟಿಯಲ್ಲಿ ಶನಿವಾರ ಹಾಗೂ ಭಾನುವಾರ ಜಾನುವಾರು ಸಂತೆ ನಡೆಯುತ್ತದೆ. ಇಲ್ಲಿಗೆ ಸುತ್ತಮುತ್ತಲಿನ ಜಿಲ್ಲೆಗಳಾದ ಗದಗ, ಹಾವೇರಿ, ಕೊಪ್ಪಳ, ಬಾಗಲಕೋಟೆ ಸೇರಿದಂತೆ ಹಲವು ಜಿಲ್ಲೆಗಳಿಂದ ರೈತರು ಜಾನುವಾರುಗಳನ್ನು ಮಾರಾಟ, ಖರೀದಿಗೆ ಆಗಮಿಸುತ್ತಾರೆ.ಪ್ರೀತಿಯಿಂದ ಸಾಕಿದ ದನಗಳನ್ನ ಮಾರೋದಕ್ಕೆ ಕರುಳು ಚುರ್ ಅಂತೈತ್ರಿ. ಮಳೆಯಾಗ್ದ ಹೊಲದಾಗ ಬೆಳೆ ಇಲ್ಲ. ದನಗಳಿಗೆ ಹಾಕಾಕ ಮೇವು ಇಲ್ದ ಬಾಳ ತೊಂದರಿ ಆಗೈತ್ರಿ. ಸಾಕಾಕ ಆಗದ ಬಂದಿದ್ದ ರೇಟಿಗೆ ಮಾರಾಕ ಬಂದೀವ್ರಿ.
ಮೈಲಾರಪ್ಪ ಜಿಗಳೂರ, ಕೊಣ್ಣೂರು ಗ್ರಾಮದ ರೈತ