ಸಾರಾಂಶ
ಕಾರ್ಮಿಕರಿಗೆ ಕನಿಷ್ಠ ಕೂಲಿ ರು.600 ಹೆಚ್ಚಿಸುವಂತೆ ಸೇರಿಸಿ ವಿವಿಧ ಬೇಡಿಕೆ ಈಡೇರಿಸುವಂತೆ ಸಿಂಧನೂರಿನಲ್ಲಿ ಜನಾಗ್ರಹ ಚಳವಳಿ ನಡೆಸಲಾಯಿತು. ಪಕ್ಷದ ವತಿಯಿಂದ ಗ್ರೇಡ್-2 ತಹಸೀಲ್ದಾರ್ ಚಂದ್ರಶೇಖರಗೆ ಮನವಿ ಪತ್ರ ಸಲ್ಲಿಸಲಾಯಿತು.
ಕನ್ನಡಪ್ರಭ ವಾರ್ತೆ ಸಿಂಧನೂರು
ರಾಜ್ಯದ ಬಹುತೇಕ ತಾಲೂಕುಗಳು ತೀವ್ರ ಬರಗಾಲ ಎದುರಿಸುತ್ತಿರುವದರಿಂದ ಬರ ಪರಿಹಾರ ನಿಧಿಗಾಗಿ ರಾಜ್ಯ ಸರ್ಕಾರ ಸಲ್ಲಿಸಿರುವ ಪರಿಹಾರ ನಿಧಿ ಬೇಡಿಕೆ ರು. 18,171 ಕೋಟಿ ಹಣವನ್ನು ರಾಷ್ಟ್ರೀಯ ವಿಕೋಪ ಪರಿಹಾರ ನಿಧಿಯಿಂದ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಭಾರತ ಕಮ್ಯೂನಿಸ್ಟ್ ಪಕ್ಷದ ತಾಲ್ಲೂಕು ಘಟಕ ಸ್ಥಳೀಯ ಮಿನಿವಿಧಾನಸೌಧ ಮುಂದೆ ಪ್ರತಿಭಟಿಸಿತು.ನರೇಗಾ ಯೋಜನೆಯ ಸೌಕರ್ಯವನ್ನು 100 ದಿನಗಳಿಂದ 200 ದಿನಗಳವರೆಗೆ ಏರಿಕೆ ಮಾಡಿ ದುಡಿಯುವ ಕಾರ್ಮಿಕರಿಗೆ ಕನಿಷ್ಠ ಕೂಲಿಯನ್ನು ರು.600 ರವರೆಗೆ ಹೆಚ್ಚಿಸಬೇಕು. ಕರ್ನಾಟಕ ರಾಜ್ಯದಲ್ಲಿ 27 ಲಕ್ಷ ಕುಟುಂಬಗಳು ವಸತಿಹೀನವಾಗಿದ್ದು ಅವರಿಗೆ ಮನೆಗಳನ್ನು ಕಟ್ಟಿಸಿ ಕೊಡಬೇಕು. ಕಾರ್ಪೋರೇಟ್ ಪರ ಕಾರ್ಮಿಕ ಕಾಯ್ದೆಯ ತಿದ್ದುಪಡಿಗಳನ್ನು ಹಿಂಪಡೆಯಬೇಕು. ರೈತ ವಿರೋಧಿ ಕಾಯ್ದೆಯ ತಿದ್ದುಪಡಿಗಳನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಲಾಯಿತು.
ಕಾಂಗ್ರೆಸ್ ಚುನಾವಣಾ ಪ್ರಚಾರದ ಸಮಯದಲ್ಲಿ ಆರನೇ ಗ್ಯಾರಂಟಿಯಾಗಿ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಮತ್ತು ಬಿಸಿಯೂಟದ ಕಾರ್ಯಕರ್ತೆಯರಿಗೆ ನೀಡಿದ ಭರವಸೆಯನ್ನು ಅನುಷ್ಠಾನಗೊಳಿಸುವುದು ಸೇರಿದಂತೆ ಪ್ರಮುಖ 10 ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಮುಂದಾಗಬೇಕು ಎಂದು ಮನವಿ ಮಾಡಲಾಯಿತು.ಗ್ರೇಡ್-2 ತಹಸೀಲ್ದಾರ್ ಚಂದ್ರಶೇಖರ ಮನವಿ ಪತ್ರ ಸ್ವೀಕರಿಸಿದರು. ಸಿಪಿಐ ಮುಖಂಡರಾದ ಬಾಷುಮಿಯಾ, ಡಿ.ಎಚ್.ಕಂಬಳಿ, ವೆಂಕನಗೌಡ ಗದ್ರಟಗಿ, ಜಗದೀಶ, ತಿಪ್ಪಯ್ಯಶೆಟ್ಟಿ, ಜಿಲಾನಿಪಾಷಾ, ಹುಸೇನಸಾಬ, ಅನ್ವರ್ ಹುಸೇನ್, ಪ್ರಕಾಶ ಇದ್ದರು.