ಪಟ್ಟಣದ ವಾರ್ಡ್ ನಂ.10ರಲ್ಲಿ ಕಳೆದ 20 ವರ್ಷದಿಂದ ವಾಸ ಮಾಡುತ್ತಿದ್ದ ಬಡ ಮತ್ತು ಕೂಲಿ ಕಾರ್ಮಿಕ ಜನರಿಗೆ ಹಕ್ಕು ಪತ್ರ (ಪಟ್ಟಾ) ವಿತರಣೆ ಮಾಡ ಬೇಕಾದ ಸರ್ಕಾರ ಅಲ್ಲಿರುವ ಅರ್ಹ ಫಲಾನುಭವಿಗಳ ತೆರವಿಗೆ ಏಕಾಏಕಿ ಮುಂದಾಗಿರುವುದನ್ನು ಖಂಡಿಸಿ ಸಿಪಿಐಎಂ ಪಕ್ಷದ ನೇತೃತ್ವದಲ್ಲಿ ಪಪಂ ಮುಂದೆ ಧರಣಿ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ತುರ್ವಿಹಾಳ

ಪಟ್ಟಣದ ವಾರ್ಡ್ ನಂ.10ರಲ್ಲಿ ಕಳೆದ 20 ವರ್ಷದಿಂದ ವಾಸ ಮಾಡುತ್ತಿದ್ದ ಬಡ ಮತ್ತು ಕೂಲಿ ಕಾರ್ಮಿಕ ಜನರಿಗೆ ಹಕ್ಕು ಪತ್ರ (ಪಟ್ಟಾ) ವಿತರಣೆ ಮಾಡ ಬೇಕಾದ ಸರ್ಕಾರ ಅಲ್ಲಿರುವ ಅರ್ಹ ಫಲಾನುಭವಿಗಳ ತೆರವಿಗೆ ಏಕಾಏಕಿ ಮುಂದಾಗಿರುವುದನ್ನು ಖಂಡಿಸಿ ಸಿಪಿಐಎಂ ಪಕ್ಷದ ನೇತೃತ್ವದಲ್ಲಿ ಪಪಂ ಮುಂದೆ ಧರಣಿ ನಡೆಸಲಾಯಿತು.

ಇಲ್ಲಿನ ಪಪಂ ಕಚೇರಿ ಮುಂದೆ ಸೇರಿದ ಪಕ್ಷದ ಮುಖಂಡರು, ನಿವಾಸಿಗಳು ಬೇಡಿಕೆಗಳನ್ನು ಈಡೇರಿಸಬೇಕು ಎಂದು ಘೋಷಣೆ ಕೂಗಿದರು. ಈ ವೇಳೆ ಮಾತನಾಡಿದ ಸಿಪಿಐಎಂ ಜಿಲ್ಲಾ ಸಂಚಾಲಕ ಬಸವಂತ ರಾಯಗೌಡ ,ಪಟ್ಟಣದ ವಾರ್ಡ ನಂ.10ರ ಸೂಗಪ್ಪನ ಹೊಲದಲ್ಲಿನ ನಿವಾಸಿಗಳಿಗೆ ಪಟ್ಟಾ (ಹಕ್ಕು ಪತ್ರ) ನಿಡುವಂತೆ ಹಾಗೂ ವಾರ್ಡ ನಂ.11ರಲ್ಲಿನ ಲೇಔಟ್‌ನಲ್ಲಿ ಶೌಚಾಲಯ, ಚರಂಡಿ, ಮುಖ್ಯರಸ್ತೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಸಬೇಕು ಎಂದು ಒತ್ತಾಯಿಸಿದರು.

ಈಗಾಗಲೇ ಅರ್ಹ ಫಲಾನುಭವಿಗಳ ಪಟ್ಟಿಯನ್ನು ಸಿದ್ಧಪಡಿಸಲಾಗಿದ್ದು, ಅಧ್ಯಕ್ಷರು ಮತ್ತು ಮುಖ್ಯಾಧಿಕಾರಿಗಳು ಈ ಪಟ್ಟಿ ಪರಿಶೀಲಿಸಿ ಅವರಿಗೆ ಪಟ್ಟಾ (ಹಕ್ಕುಪತ್ರ) ನೀಡಬೇಕು ಹಾಗೂ ವಾರ್ಡ ನಂ 11 ಅರ್ಹ ಲೇ-ಔಟ್ ಆಗಿದ್ದು, ಅದರಲ್ಲಿ ಈಗಾಗಲೇ 180 ಕುಟುಂಬಗಳು ವಾಸಮಾಡುತ್ತಿದ್ದೆ ಆ ಲೇಔಟ್ ಗೆ ಮುಖ್ಯ ರಸ್ತೆ ಸಂಪರ್ಕ ಇಲ್ಲ ಮುಖ್ಯರಸ್ತೆಗೆ ಬರಲು ನಿವಾಸಿಗಳು ತೊಂದರೆ ಅನುಭವಿಸುವಂತಾಗಿದೆ. ಅಧಿಕಾರಿಗಳು ಕೂಡಲೇ ಲೇಔಟ್‌ಗೆ ಮುಖ್ಯರಸ್ತೆ ಕಲ್ಪಿಸಬೇಕು, ಚರಂಡಿ ನೀರು ಮುಂದೆ ಸಾಗಲು ಯಾವುದೇ ವ್ಯವಸ್ಥೆ ಇರುವುದಿಲ್ಲ. ಇದನ್ನು ಪರಿಶೀಲಿಸಿ ಲೇಔಟ್‌ನಲ್ಲಿರುವ ಚರಂಡಿ ನೀರು ಮುಂದೆ ಸಾಗುವಂತೆ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದರು.

ಕಟ್ಟಡ ಕಾರ್ಮಿಕ ಸಂಘದ ಅಧ್ಯಕ್ಷ ಅನ್ವರ್ ಪಾಷಾ ಮಾತನಾಡಿ, ಈ ಸಮಸ್ಯೆಗೆ ಅಧಿಕಾರಿಗಳು ಮುಖ್ಯಾಧಿಕಾರಿಗಳು, ಶಾಸಕರು, ತಹಸೀಲ್ದಾರರು ಕಿವಿಗೊಡದಂತೆ ಕುಳಿತಿರುವುದು ವಿಪರ್ಯಾಸ ಸಂಗತಿಯಾಗಿದೆ. ನಿತ್ಯ ನಾವೆಲ್ಲರೂ ದಿನಗೂಲಿಯನ್ನು ಬಿಟ್ಟ ಸರ್ಕಾರಿ ಕಚೇರಿಗಳಿಗೆ ಅಲಿದಾಡು ವಂತಾಗಿದೆ. ನಮ್ಮ ಸಮಸ್ಯೆಗೆ ಸ್ಪಂದಿಸಬೇಕಾದ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿದ್ದಾರೆ. ನಾವು ಕೇಳುತಿರುವುದು ಯಾರಪ್ಪನ ಆಸ್ತಿಯಲ್ಲ, ನಮಗೆ ನಮ್ಮ ಹಕ್ಕು ಪತ್ರ ಬೇಕು. ಇಲ್ಲದಿದ್ದಲ್ಲಿ ನಾವು ಉಗ್ರ ಹೋರಾಟವನ್ನು ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಧರಣಿಯಲ್ಲಿ ಮುಖಂಡರಾದ ಮುನಿಸ್ವಾಮಿ ಕಟ್ಟಿಮನಿ, ಎಂ.ಗೋಪಾಲ ಕೃಷ್ಣ, ಜನವಾದಿ ಘಟಕದ ಅಧ್ಯಕ್ಷೆ ಗಿರಿಜಾ ಕಿಲ್ಲೆದ್, ಯಂಕಪ್ಪ ಕೆಂಗಲ್, ಹೊನ್ನುರಪ್ಪ ಕುಂಬಾರ, ಭಂಡಾರೇಪ್ಪಮಳ್ಳಿ, ವಿರೇಶ ನಾಯಕ್, ಹನುಮಂತ ಕಾರ್ಯದರ್ಶಿಗಳಾದ ಇಬ್ರಾಹಿಂ ಸಾಬ್, ಮರಿಯಪ್ಪ ಕುಂಬಾರ, ವಿರೇಶ ಚೆಂಚರ ನಾಗರತ್ನ ನಾಯಕಿ ಮೌಲಾಸಾಬ್, ನೂರಾರು ಮಹಿಳೆಯರು ಇದ್ದರು.