ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಕಡಿಮೆಯಾಗುತ್ತಿದ್ದರೂ ದೇಶಾದ್ಯಂತ ಪೆಟ್ರೋಲ್, ಡೀಸೆಲ್ ಬೆಲೆ ಮತ್ತು ಆಹಾರ ಪದಾರ್ಥಗಳ ಬೆಲೆಗಳು ನಿರಂತರವಾಗಿ ಏರಿಕೆಯಾಗುತ್ತಿವೆ.

ಹಗರಿಬೊಮ್ಮನಹಳ್ಳಿ: ರಾಜ್ಯ ಕಂಡರಿಯದ ಬರಗಾಲದ ಬೇಗುದಿಗೆ ಒಳಗಾಗಿದೆ. ಬಡ ಕೂಲಿಕಾರರಿಗೆ ಕೂಲಿ ಲಭ್ಯವಾಗದೇ ಬೆಳೆ ನಷ್ಟವಾಗಿ ರೈತರು ಸಾಲ ಬಾಧಿತರಾಗಿದ್ದಾರೆ. ಆದರೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಅಗತ್ಯ ವಸ್ತುಗಳ ಬೆಲೆ ಏರಿಕೆಯ ಮೂಲಕ ಹೊಣೆಗೇಡಿಯಂತೆ ವರ್ತಿಸುತ್ತಿವೆ ಎಂದು ಸಿಪಿಐ(ಎಂ) ತಾಲೂಕು ಕಾರ್ಯದರ್ಶಿ ಬಿ. ಮಾಳಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಬೆಲೆ ಏರಿಕೆ ಖಂಡಿಸಿ ಅಗತ್ಯ ವಸ್ತುಗಳ ಬೆಲೆ ಇಳಿಸುವ ಮೂಲಕ ಬಡವರಿಗೆ ನೆರವಾಗಬೇಕು ಎಂದು ಆಗ್ರಹಿಸಿ ಮಂಗಳವಾರ ನಡೆಸಿದ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದರು.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಕಡಿಮೆಯಾಗುತ್ತಿದ್ದರೂ ದೇಶಾದ್ಯಂತ ಪೆಟ್ರೋಲ್, ಡೀಸೆಲ್ ಬೆಲೆ ಮತ್ತು ಆಹಾರ ಪದಾರ್ಥಗಳ ಬೆಲೆಗಳು ನಿರಂತರವಾಗಿ ಏರಿಕೆಯಾಗುತ್ತಿವೆ. ರಾಜ್ಯದಲ್ಲಿ ಕೂಡಾ ಹಾಲು, ಬಸ್ ದರ ಮತ್ತು ವಿದ್ಯುತ್ ದರಗಳು ಏರಿಕೆಯಾಗುತ್ತಿದ್ದು, ಬಡವರ ಹಾಗೂ ಜನ ಸಾಮಾನ್ಯರ ಬದುಕು ಮೂರಾಬಟ್ಟೆಯಾಗಿದೆ ಎಂದು ದೂರಿದರು.

ಪಶು ಆಹಾರ ದರ ನಿಯಂತ್ರಿಸಿ ಹಾಗೂ ಹೈನೋದ್ಯಮದಲ್ಲಿನ ಭ್ರಷ್ಟತೆ ಮತ್ತು ಸೋರಿಕೆ ತಡೆ ಹಿಡಿದು ಹಾಲು ಉತ್ಪಾದನಾ ವೆಚ್ಚ ತಗ್ಗಿಸಿ ಹೈನೋದ್ಯಮಕ್ಕೆ ಕಾಯಕಲ್ಪ ಮಾಡಬೇಕು ಎಂದು ಕೋರಿದರು.

ಸರ್ಕಾರಿ ಡೈರಿ ಬೆಲೆ ಏರಿಕೆಯಿಂದ ಖಾಸಗಿಯವರು ಮತ್ತು ಸರ್ಕಾರಿ ಬಸ್‌ಗಳ ಬೆಲೆ ಏರಿಕೆಯಿಂದ ಖಾಸಗಿ ಬಸ್ ಲಾಬಿ ಕೂಡಾ ಬೆಲೆ ಏರಿಸುತ್ತದೆ. ಹಾಲು ಮತ್ತು ಬಸ್ ದರ ಏರಿಕೆಯ ಹಿನ್ನೆಲೆ ಸರ್ಕಾರ ಖಾಸಗಿ ಬಂಡವಾಳದಾರರ ಹಿತಾಸಕ್ತಿ ಕಾಯುತ್ತಿದೆ. ಖಾಸಗಿಯವರ ಲೂಟಿಗೆ ನೆರವು ನೀಡುವ ದುರುದ್ದೇಶ ಹೊಂದಿದೆ ಎಂದು ಜಿಲ್ಲಾ ಮಂಡಳಿ ಸದಸ್ಯ ಎಸ್.ಜಗನ್ನಾಥ್ ಶಂಕೆ ವ್ಯಕ್ತಪಡಿಸಿದರು.

ಬರಗಾಲ ವ್ಯಾಪಕವಾಗಿರುವುದರಿಂದ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಬೆಲೆ ಏರಿಕೆ ಹಿಂಪಡೆಯುವ ಮೂಲಕ ಕಾಳ ಸಂತೆಕೋರರನ್ನು ನಿಯಂತ್ರಿಸುವ ಜೊತೆಗೆ ಬರಗಾಲ ಪರಿಹಾರ ಕಾಮಗಾರಿ ಕೈಗೆತ್ತಿಕೊಂಡು ಬಡ ದಲಿತ ಕೃಷಿ ಕೂಲಿ ಕಾರ್ಮಿಕರ ನೆಮ್ಮದಿಯ ಬದುಕಿಗೆ ಸೂಕ್ತ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

ಜಿಲ್ಲಾ ಮಂಡಳಿ ಸದಸ್ಯ ಆರ್.ಎಸ್. ಬಸವರಾಜ್ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.ತಾಲೂಕು ಕಾರ್ಯಕಾರಿ ಮಂಡಳಿಯ ಸದಸ್ಯ ಕೆ.ಗಾಳೆಪ್ಪ, ಪಿ.ಚಾಂದಬಿ, ಕೆ.ಅಂಜಿನಪ್ಪ, ಕೆ. ರಮೇಶ್, ಆನಂದಪ್ಪ, ಪಿ.ಹನಮಂತಪ್ಪ, ಮಾರುತಿ, ದುರುಗಪ್ಪ, ಗುರುಶಾಂತಪ್ಪ ಹಾಗೂ ತಟ್ನಮ್ಮ ಮತ್ತಿತರರು ಪಾಲ್ಗೊಂಡಿದ್ದರು.