ಕೇಂದ್ರ ಸರ್ಕಾರದ ವಿರುದ್ಧ ನಗರದಲ್ಲಿ ಸಿಪಿಐ(ಎಂ) ಪ್ರತಿಭಟನೆ

| Published : Feb 09 2024, 01:48 AM IST

ಕೇಂದ್ರ ಸರ್ಕಾರದ ವಿರುದ್ಧ ನಗರದಲ್ಲಿ ಸಿಪಿಐ(ಎಂ) ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯ ಸರ್ಕಾರಗಳನ್ನು ಗುರಿಯಾಗಿಸಿಕೊಂಡು ಒಕ್ಕೂಟ ಸರಕಾರ ಆದಾಯ ತೆರಿಗೆ ವಿಭಾಗಗಳನ್ನು ದುರ್ಬಳಕೆ ಮಾಡುವುದನ್ನು ನಿಲ್ಲಿಸಬೇಕು. ರಾಜ್ಯ ಸರಕಾರಗಳ ವಿಷಯಗಳಲ್ಲಿ ರಾಜ್ಯಪಾಲರ ಹಸ್ತಕ್ಷೇಪ ಹಾಗೂ ಅವರ ಸಂವಿಧಾನಾತ್ಮಕ ಸ್ಥಾನದ ದುರುಪಯೋಗವನ್ನು ತಡೆಯಬೇಕು.

ಕನ್ನಡಪ್ರಭ ವಾರ್ತೆ ಹಾಸನ

ತೆರಿಗೆ ಹಣದಲ್ಲಿ ರಾಜ್ಯಕ್ಕೆ ಸೇರಬೇಕಾದ ಪಾಲನ್ನು ಸಮರ್ಪಕವಾಗಿ ನೀಡಿಲ್ಲ ಎಂದು ದೆಹಲಿಯಲ್ಲಿ ಕರ್ನಾಟಕ ಸರ್ಕಾರ ಮತ್ತು ಕೇರಳದ ಎಲ್.ಡಿ.ಎಫ್. ಸರ್ಕಾರದಿಂದ ನಡೆಸುತ್ತಿರುವ ಹೋರಾಟವನ್ನು ಬೆಂಬಲಿಸಿ ನಗರದ ಹೇಮಾವತಿ ಪ್ರತಿಮೆ ಮುಂಭಾಗ ಸಿಪಿಐ(ಎಂ) ಪಕ್ಷದಿಂದ ಗುರುವಾರ ಪ್ರತಿಭಟನೆ ನಡೆಸಲಾಯಿತು.

ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಧರ್ಮೇಶ್ ಮಾತನಾಡಿ, ಭಾರತದ ಒಕ್ಕೂಟ ವ್ಯವಸ್ಥೆಯನ್ನು ಬಲಗೊಳಿಸಲು, ರಾಜ್ಯಗಳ ಮೇಲೆ ಒಕ್ಕೂಟ ಸರಕಾರದ ಹಸ್ತಕ್ಷೇಪಗಳನ್ನು ನಿಲ್ಲಿಸಲು ಕೆಳಕಂಡ ಹಕ್ಕೊತ್ತಾಯಗಳನ್ನು ಪರಿಗಣಿಸಬೇಕೆಂದು ಒತ್ತಾಯಿಸಿದರು. ಭಾರತ ಸಂವಿಧಾನದಂತೆ ದೇಶದಾದ್ಯಂತ ಒಕ್ಕೂಟವಾದಿ ಸ್ವರೂಪವನ್ನು ಬಲಗೊಳಿಸಲು ಈಗ ಒಕ್ಕೂಟ ಸರಕಾರ ರಾಜ್ಯ ಸರಕಾರಗಳ ಮೇಲೆ ತನ್ನ ಅಧಿಕಾರ ದುರುಪಯೋಗದ ಮೂಲಕ ಒಕ್ಕೂಟವಾದಿ ಸ್ವರೂಪಕ್ಕೆ ಭಂಗ ಉಂಟು ಮಾಡುವುದನ್ನು ಈ ಕೂಡಲೇ ನಿಲ್ಲಿಸುವಂತೆ ಹಾಗೂ ಕೆಳಕಂಡ ಹಕ್ಕೊತ್ತಾಯಗಳನ್ನು ಪರಿಗಣಿಸಿ ರಾಜ್ಯಗಳಿಗೆ ನ್ಯಾಯ ಒದಗಿಸುವಂತೆ ಈ ಮೂಲಕ ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ಸಿಪಿಐ(ಎಂ) ಹಾಸನ ಜಿಲ್ಲಾ ಸಮಿತಿ ಒತ್ತಾಯಿಸುತ್ತದೆ. ಕರ್ನಾಟಕ ಹಾಗೂ ಕೇರಳ ಸರಕಾರಗಳು, ಒಕ್ಕೂಟ ಸರಕಾರದ ಕಿರುಕುಳ ಹಾಗೂ ತಾರತಮ್ಯ ನೀತಿಯ ವಿರುದ್ದ ಇದೇ ಫೆಬ್ರವರಿ ೭ ಮತ್ತು ೮ ರಂದು ನವದೆಹಲಿಯಲ್ಲಿ ನಡೆಸುತ್ತಿರುವ ಹೋರಾಟಕ್ಕೆ ಸಂಪೂರ್ಣ ಬೆಂಬಲವನ್ನು ನೀಡುತ್ತದೆ ಎಂದರು.

ಹಕ್ಕೊತ್ತಾಯಗಳೆಂದರೆ ರಾಜ್ಯಗಳು ತಮ್ಮ ತೆರಿಗೆ ಹಾಗೂ ಸಂಪನ್ಮೂಲಗಳ ಪಾಲು ಪಡೆಯುವಲ್ಲಿ ಒಕ್ಕೂಟ ಸರಕಾರ ಅಡ್ಡಿಯಾಗಬಾರದು. ಕರ್ನಾಟಕಕ್ಕೆ ಬರಗಾಲದ ಅನುದಾನವನ್ನು ಈ ಕೂಡಲೇ ಬಿಡುಗಡೆ ಮಾಡಬೇಕು. ಒಕ್ಕೂಟದ ಸರಕಾರ ತನ್ನ ಮನಸ್ಸಿಗೆ ತೋಚಿದಂತೆ ರಾಜ್ಯ ಸರಕಾರಗಳು ಸಾಲ ಪಡೆಯುವುದನ್ನು ನಿಲ್ಲಿಸಬೇಕು. ಕೇಂದ್ರ ಪ್ರಾಯೋಜಿತ ಯೋಜನೆಗಳ ರಾಜ್ಯಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ಒಕ್ಕೂಟ ಸರಕಾರದ ಮಧ್ಯಪ್ರವೇಶ ಮಾಡಬಾರದು ಎಂದು ಆಗ್ರಹಿಸಿದರು. ರಾಜ್ಯ ಸರ್ಕಾರಗಳನ್ನು ಗುರಿಯಾಗಿಸಿಕೊಂಡು ಒಕ್ಕೂಟ ಸರಕಾರ ಆದಾಯ ತೆರಿಗೆ ವಿಭಾಗಗಳನ್ನು ದುರ್ಬಳಕೆ ಮಾಡುವುದನ್ನು ನಿಲ್ಲಿಸಬೇಕು. ರಾಜ್ಯ ಸರಕಾರಗಳ ವಿಷಯಗಳಲ್ಲಿ ರಾಜ್ಯಪಾಲರ ಹಸ್ತಕ್ಷೇಪ ಹಾಗೂ ಅವರ ಸಂವಿಧಾನಾತ್ಮಕ ಸ್ಥಾನದ ದುರುಪಯೋಗವನ್ನು ತಡೆಯಬೇಕು. ರಾಜ್ಯದ ವಿವಿಗಳ ವಿಷಯದಲ್ಲಿ ಕುಲಪತಿಗಳಾಗಿ ರಾಜ್ಯಪಾಲರ ಹಸ್ತಕ್ಷೇಪ ಮಾಡುವುದನ್ನು ತಡೆಯಬೇಕು ಹಾಗೂ ರಾಜ್ಯ ಶಾಸಕಾಂಗ ಅಂಗೀಕರಿಸಿದ ಶಾಸನಗಳನ್ನು ರಾಜ್ಯಪಾಲರು ತಡೆ ಹಿಡಿಯಬಾರದು ಮತ್ತು ವಿಳಂಬ ಮಾಡದೆ ಸಹಿ ಮಾಡುವಂತೆ ಕ್ರಮವಹಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಭಾರತ ಕಮ್ಯೂನಿಸ್ಟ್ ಪಕ್ಷ ( ಮಾರ್ಕ್ಸ್‌ವಾದಿ) ಸ್ಥಳೀಯ ಸಮಿತಿ ಕಾರ್ಯದರ್ಶಿ ಎಂ.ಜಿ. ಪೃಥ್ವಿ, ಜಿಲ್ಲಾ ಸಂಘಟನಾ ಸಮಿತಿ ಸದಸ್ಯರು ಜಿ.ಪಿ. ಸತ್ಯನಾರಾಯಣ, ಎಚ್.ಆರ್. ನವೀನ್ ಕುಮಾರ್, ಅರವಿಂದ್ ಇತರರು ಉಪಸ್ಥಿತರಿದ್ದರು.