ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಅದಾನಿ ವಿರುದ್ಧದ ಲಂಚ ಪ್ರಕರಣದ ತನಿಖೆ, ಮಣಿಪುರದಲ್ಲಿ ಶಾಂತಿ ಸ್ಥಾಪನೆಗೆ ಆಗ್ರಹಿಸಿ ಭಾರತ ಕಮ್ಯುನಿಸ್ಟ್ ಪಕ್ಷದ (ಸಿಪಿಐ) ಜಿಲ್ಲಾ ಸಮಿತಿಯವರು ಜಿಲ್ಲಾಧಿಕಾರಿ ಕಚೇರಿ ಬಳಿ ಮಂಗಳವಾರ ಪ್ರತಿಭಟಿಸಿದರು.ಕೇಂದ್ರದಲ್ಲಿ 3ನೇ ಬಾರಿಗೆ ಅಧಿಕಾರಕ್ಕೆ ಬಂದ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಪ್ರಜಾತಂತ್ರ ವಿರೋಧಿ ಆಡಳಿತ ಮುಂದುವರಿಸಿದೆ. ದೇಶದಲ್ಲಿ ರೈತ ಕಾರ್ಮಿಕರ ಸಮಸ್ಯೆಗಳ ಪರಿಹಾರಕ್ಕೆ ಪ್ರಾಮುಖ್ಯತೆ ನೀಡದೆ, ಅದಾನಿ-ಅಂಬಾನಿಯಂತಹ ಬಂಡವಾಳಶಾಹಿಗಳ ಹಿತಾಸಕ್ತಿಗಾಗಿ ಅಧಿಕಾರ ಬಳಕೆಯಾಗುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ದೇಶ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದ್ದು, ಜಿಡಿಪಿ ನಿರಂತರವಾಗಿ ಕುಸಿಯುತ್ತಿದೆ. ನಿರುದ್ಯೋಗಿಗಳ ಸಂಖ್ಯೆಯು ದಿನೇ ದಿನೇ ಹೆಚ್ಚುತ್ತಿದ್ದು ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಜನಸಾಮಾನ್ಯರು ಸಂಕಷ್ಟದಲ್ಲಿಯೇ ಬದುಕು ನಡೆಸುವಂತಾಗಿದೆ. ಸಂವಿಧಾನದ ಬಹುತ್ವದ ಆಶಯಗಳಿಗೆ ವಿರುದ್ಧವಾಗಿ ಏಕತ್ವದ ಪ್ರತಿಪಾದನೆ ಮುಂದುವರಿಸಿರುವ ಮೋದಿ ಸರ್ಕಾರ ಒಕ್ಕೂಟ ವ್ಯವಸ್ಥೆಗೆ ಮಾರಕವಾಗಲಿರುವ ಒಂದು ದೇಶ ಒಂದು ಚುನಾವಣೆ ಎಂಬ ವಿಷಯವನ್ನು ಪದೇ ಪದೇ ಮುನ್ನೆಲೆಗೆ ತರುತ್ತಿದೆ ಎಂದು ಅವರು ಕಿಡಿಕಾರಿದರು.ಮಣಿಪುರ, ಉತ್ತರಪ್ರದೇಶ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಜಾತಿ ಜನಾಂಗೀಯ ಸಂಘರ್ಷ, ಕೋಮು ಭಾವನೆ ಕೆರಳಿಸಿ ಹಿಂಸಾಚಾರ ಭುಗಿಲೇಳುತ್ತಿದ್ದರೂ ಶಾಂತಿ ಸೌಹಾರ್ದತೆ ಬಲಪಡಿಸುವಲ್ಲಿ ಕೇಂದ್ರ ವಿಫಲವಾಗಿದೆ. ಗೌತಮ್ ಅದಾನಿ ತಮ್ಮ ಸಂಸ್ಥೆಯ ಪರವಾಗಿ ವ್ಯಾಪಾರ ವಹಿವಾಟು ಒಪ್ಪಂದ ಮಾಡಿಕೊಳ್ಳಲು ಸರ್ಕಾರಿ ಅಧಿಕಾರಿಗಳು ಸೇರಿದಂತೆ ಹಲವರಿಗೆ ಸಾವಿರಾರು ಕೋಟಿ ಲಂಚ ನೀಡಿದ್ದಾರೆ ಎಂಬ ಗಂಭೀರ ಆರೋಪ ಮಾಡಿದ್ದಾರೆ. ಇದರಲ್ಲಿ ಕೇಂದ್ರ ಸರ್ಕಾರದ ಪಾತ್ರ ಸೇರಿದಂತೆ ಸಮಗ್ರ ತನಿಖೆ ನಡೆಸಲು ಸಂಸತ್ತಿನ ಜಂಟಿ ಸಂಸದೀಯ ಸಮಿತಿ ರಚಿಸಿ (ಜಿಪಿಸಿ) ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಮಣಿಪುರದಲ್ಲಿ ಮೈತೆಯಿ ಮತ್ತು ಕುಕ್ಕಿ ಸಮುದಾಯಗಳ ನಡುವೆ ನಿರಂತರವಾಗಿ ನಡೆಯುತ್ತಿರುವ ಜನಾಂಗೀಯ ಸಂಘರ್ಷ ತಡೆದು ಶಾಂತಿ ಸ್ಥಾಪಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ. ಜನಾಂಗೀಯ ಸಂಘರ್ಷದಲ್ಲಿ ಅಪಾರ ಸಂಖ್ಯೆಯ ಸಾವು ನೋವುಗಳು ಸಂಭವಿಸುತ್ತಿದ್ದು, ಸುಮಾರು 60 ಸಾವಿರಕ್ಕೂ ಹೆಚ್ಚು ಜನರು ನಿರಾಶ್ರಿತರಾಗಿದ್ದಾರೆ. ಹೀಗಾಗಿ, ಮಣಿಪುರದಲ್ಲಿ ಶಾಂತಿ ನಡೆಸಲು ಅನುಕೂಲವಾಗುವಂತೆ ಅಲ್ಲಿನ ಪರಿಸ್ಥಿತಿಯ ಕುರಿತು ಸಂಸತ್ತಿನಲ್ಲಿ ಚರ್ಚಿಸಬೇಕು. ಮಣಿಪುರದಲ್ಲಿ ಹೇರಲಾಗಿರುವ ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯ್ದೆ ಹಿಂಪಡೆದು ಶಾಂತಿ ಸ್ಥಾಪನೆಗೆ ಮುಂದಾಗಬೇಕು ಎಂದು ಅವರು ಆಗ್ರಹಿಸಿದರು.ಉತ್ತರಪ್ರದೇಶ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಕೋಮುಭಾವನೆ ಕೆರಳಿಸಿ ಹಿಂಸಾಚಾರಕ್ಕೆ ಪ್ರಚೋದಿಸುವಂತಹ ಕೃತ್ಯಗಳು ನಿರಂತರವಾಗಿ ನಡೆಯುತ್ತಿದ್ದು, ಅವುಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ದೇಶದ ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟಿದ್ದು ಜನಪರ ಆರ್ಥಿಕ ಧೋರಣೆ ಹಾಗೂ ಔದ್ಯಮಿಕ ನೀತಿ ಜಾರಿಗೊಳಿಸುವಲ್ಲಿ ಕೇಂದ್ರ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ. ನಿರುದ್ಯೋಗ ಸಮಸ್ಯೆ ಸೇರಿದಂತೆ ಮೂಲ ಹಕ್ಕುಗಳ ರಕ್ಷಣೆಗೆ ಸರ್ಕಾರ ಮುಂದಾಗಬೇಕು ಎಂದು ಅವರು ಒತ್ತಾಯಿಸಿದರು.
ಸಿಪಿಐ ಜಿಲ್ಲಾ ಕಾರ್ಯರ್ಶಿ ಎಚ್.ಬಿ. ರಾಮಕೃಷ್ಣ, ಮುಖಂಡರಾದ ಕೆ.ಜಿ. ಸೋಮಶೇಖರ್, ಎನ್.ಕೆ. ದೇವದಾಸ್, ಡಿ. ಜಗನ್ನಾಥ್, ತ್ಯಾಗರಾಜನ್ ಮೊದಲಾದವರು ಇದ್ದರು.;Resize=(128,128))
;Resize=(128,128))
;Resize=(128,128))