ಕೇಂದ್ರ ಮತ್ತು ರಾಜ್ಯ ಸರ್ಕಾರ ಅಗತ್ಯ ವಸ್ತುಗಳ ಬೆಲೆ ಏರಿಸುವ ಮೂಲಕ ಸೊಳ್ಳೆ, ತಿಗಣಿಯಂತೆ ಬಡ ಹಾಗೂ ಕೂಲಿ ಕಾರ್ಮಿಕರ ರಕ್ತ ಹೀರುತ್ತಿವೆ, ಇದರಿಂದ ಬಡವರನ್ನು ಬದುಕನ್ನು ಬೀದಿಗೆ ತಂದು ನಿಲ್ಲಿಸಿದೆ
ಹೂವಿನಹಡಗಲಿ: ಹಾಲು ಸೇರಿದಂತೆ ದೈನಂದಿನ ಬದುಕಿಗೆ ಅಗತ್ಯವಿರುವ ವಸ್ತುಗಳ ಬೆಲೆ ಸೇರಿದಂತೆ ಬಸ್ ಟಿಕೆಟ್ ದರ ಏರಿಕೆ ಖಂಡಿಸಿ ಭಾರತ ಕಮ್ಯುನಿಸ್ಟ್ ಪಕ್ಷದ ಮುಖಂಡರು ರಾತ್ರಿ ಪ್ರತಿಭಟನೆ ನಡೆಸಿದರು.
ಸಿಪಿಐ ಕಾರ್ಯಕರ್ತರು ಬೆಲೆ ಏರಿಕೆ ಖಂಡಿಸಿ ರಾಜ್ಯ ಸರ್ಕಾರದ ವಿರುದ್ಧ ಪಂಜಿನ ಮೆರವಣಿಗೆಗೆ ಸಿದ್ಧತೆ ಮಾಡಿಕೊಂಡಿದ್ದರು. ಪೊಲೀಸರು ಪಂಜಿನ ಮೆರವಣಿಗೆಗೆ ಅವಕಾಶ ನೀಡದೇ ತಡೆಯೊಡ್ಡುವ ಮೂಲಕ ಪಂಜುಗಳಿಗೆ ತಂದಿದ್ದ ಕಟ್ಟಿಗೆ ವಶಪಡಿಸಿಕೊಂಡಿದ್ದರು. ಈ ವೇಳೆ ಪೊಲೀಸರು, ಪ್ರತಿಭಟನಾಕಾರರ ಮಧ್ಯೆ ವಾಗ್ವಾದ ಮಾತಿನ ಚಕಮಕಿ ನಡೆಯಿತು.ಪ್ರತಿಭಟಿಸುವ ಸಾಂವಿಧಾನಿಕ ಹಕ್ಕನ್ನು ಹತ್ತಿಕ್ಕುವ ಕೆಲಸ ನಡೆಯುತ್ತಿದೆ ಎಂದು ಸಿಪಿಐ ಮುಖಂಡರು, ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸುತ್ತಾ, ನಂತರ ಮೇಣದ ಬತ್ತಿಗಳನ್ನು ಹಿಡಿದು ಪ್ರತಿಭಟನೆ ಮುಂದುವರಿಸಿದರು.
ಸಿಪಿಐ ಜಿಲ್ಲಾ ಕಾರ್ಯದರ್ಶಿ ಎಚ್.ಎಂ. ಸಂತೋಷ ಕುಮಾರ್ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರ ಅಗತ್ಯ ವಸ್ತುಗಳ ಬೆಲೆ ಏರಿಸುವ ಮೂಲಕ ಸೊಳ್ಳೆ, ತಿಗಣಿಯಂತೆ ಬಡ ಹಾಗೂ ಕೂಲಿ ಕಾರ್ಮಿಕರ ರಕ್ತ ಹೀರುತ್ತಿವೆ, ಇದರಿಂದ ಬಡವರನ್ನು ಬದುಕನ್ನು ಬೀದಿಗೆ ತಂದು ನಿಲ್ಲಿಸಿದೆ ಎಂದು ಕಿಡಿಕಾರಿದರು.ದೀಪಾವಳಿ ಸಂದರ್ಭದಲ್ಲಿ ಹಾಲಿನ ಬೆಲೆ, ಬಸ್ ಟಿಕೆಟ್ ದರ ಭಾರೀ ಪ್ರಮಾಣದಲ್ಲಿ ಏರಿಸುವ ಮೂಲಕ ಸರ್ಕಾರ ಬಡವರು, ಜನಸಾಮಾನ್ಯರ ಬದುಕನ್ನು ಕತ್ತಲೆಯಾಗಿಸಿದೆ. ಗ್ಯಾರಂಟಿಗಳಿಗೆ ಬೇಕಾಗುವ ಹಣ ಬಡವರ ಜೇಬಿನಿಂದಲೇ ಕಿತ್ತು ಬಡವರಿಗೆ ಹಂಚುವುದಾದರೆ ನಿಮ್ಮ ಸಾಧನೆ ಏನೆಂದು ಪ್ರಶ್ನಿಸಿದರು.
ಕೇಂದ್ರ, ರಾಜ್ಯ ಸರ್ಕಾರಗಳು ಅಗತ್ಯ ವಸ್ತುಗಳ ಬೆಲೆ ಏರಿಸಿ, ಬಡವರ ಹೊಟ್ಟೆ ಮೇಲೆ ಹೊಡೆಯುವುದನ್ನು ನಿಲ್ಲಿಸಬೇಕು. ಹಾಲು ಮತ್ತು ಬಸ್ ಟಿಕೆಟ್ ದರ ಇಳಿಸಬೇಕೆಂದು ಒತ್ತಾಯಿಸಿದರು.ಸಿಪಿಐ ಮುಖಂಡ ಗುಡಿಹಳ್ಳಿ ಹಾಲೇಶ, ಸುರೇಶ ಹಲಗಿ ಮಾತನಾಡಿದರು. ಬಾವಾಜಿ ಜಂಗ್ಲಿ ಸಾಬ್, ಬಳಿಗಾರ ಪಕೃದ್ದೀನ್ ಇತರರು ಇದ್ದರು. ದ್ವಾರಕೀಶ ಕ್ರಾಂತಿಗೀತೆ ಹಾಡಿದರು.