40 ಲಕ್ಷ ಸೂರು ಕಲ್ಪಿಸಲು ಸಿಪಿಐ ಶೀಘ್ರ ರಾಜ್ಯಾದ್ಯಂತ ಹೋರಾಟ

| Published : Jan 14 2025, 01:01 AM IST

ಸಾರಾಂಶ

ರಾಜ್ಯದ 40 ಲಕ್ಷಕ್ಕೂ ಅಧಿಕ ವಸತಿ ಮತ್ತು ನಿವೇಶನರಹಿತ ಕುಟುಂಬಗಳಿಗೆ ರಾಜೀವ್ ಗಾಂಧಿ ವಸತಿ ನಿಗಮ ಸೇರಿದಂತೆ ಕೇಂದ್ರ, ರಾಜ್ಯ ಸರ್ಕಾರಗಳ ವಿವಿಧ ಯೋಜನೆಗಳಡಿ ಶಾಶ್ವತ ಸೂರು ಕಲ್ಪಿಸಲು ಒತ್ತಾಯಿಸಿ ಭಾರತೀಯ ಕಮ್ಯುನಿಸ್ಟ್‌ ಪಕ್ಷದಿಂದ ರಾಜ್ಯವ್ಯಾಪಿ ಹೋರಾಟ ಹಮ್ಮಿಕೊಳ್ಳುವುದಾಗಿ ಎಐವೈಎಫ್‌ ರಾಜ್ಯ ಕಾರ್ಯದರ್ಶಿ ಎಚ್.ಎಂ. ಸಂತೋಷ್ ದಾವಣಗೆರೆಯಲ್ಲಿ ಹೇಳಿದ್ದಾರೆ.

- ಕೇಂದ್ರ, ರಾಜ್ಯ ಸರ್ಕಾರಗಳ ವಸತಿ ಯೋಜನೆಗಳ ಬಗ್ಗೆ ಜನರಿಗೆ ಮಾಹಿತಿಯೇ ಇಲ್ಲ: ಎಚ್.ಎಂ.ಸಂತೋಷ

- - - ಕನ್ನಡಪ್ರಭ ವಾರ್ತೆ ದಾವಣಗೆರೆ

ರಾಜ್ಯದ 40 ಲಕ್ಷಕ್ಕೂ ಅಧಿಕ ವಸತಿ ಮತ್ತು ನಿವೇಶನರಹಿತ ಕುಟುಂಬಗಳಿಗೆ ರಾಜೀವ್ ಗಾಂಧಿ ವಸತಿ ನಿಗಮ ಸೇರಿದಂತೆ ಕೇಂದ್ರ, ರಾಜ್ಯ ಸರ್ಕಾರಗಳ ವಿವಿಧ ಯೋಜನೆಗಳಡಿ ಶಾಶ್ವತ ಸೂರು ಕಲ್ಪಿಸಲು ಒತ್ತಾಯಿಸಿ ಭಾರತೀಯ ಕಮ್ಯುನಿಸ್ಟ್‌ ಪಕ್ಷದಿಂದ ರಾಜ್ಯವ್ಯಾಪಿ ಹೋರಾಟ ಹಮ್ಮಿಕೊಳ್ಳುವುದಾಗಿ ಎಐವೈಎಫ್‌ ರಾಜ್ಯ ಕಾರ್ಯದರ್ಶಿ ಎಚ್.ಎಂ. ಸಂತೋಷ್ ಹೇಳಿದರು.

ನಗರದ ಅಶೋಕ ರಸ್ತೆಯ ಸಿಪಿಐ ಜಿಲ್ಲಾ ಕಚೇರಿಯಲ್ಲಿ ಸೋಮವಾರ ವಸತಿ ಮತ್ತು ನಿವೇಶನರಹಿತರ ಮಾಹಿತಿ ಕಾರ್ಯಾಗಾರವನ್ನು ತಮಟೆ ಬಾರಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ಕೇಂದ್ರ, ರಾಜ್ಯ ಸರ್ಕಾರಗಳ ವಿವಿಧ ವಸತಿ ಯೋಜನೆಯಡಿ ರಾಜ್ಯದ ವಸತಿ ಮತ್ತು ನಿವೇಶನರಹಿತರಿಗೆ ಸೂರು ಕಲ್ಪಿಸುವಂತೆ ರಾಜ್ಯವ್ಯಾಪಿ ಹೋರಾಟ ಶೀಘ್ರದಲ್ಲೇ ಆರಂಭವಾಗಲಿದೆ ಎಂದರು.

ಸರ್ಕಾರಗಳ ವಸತಿ ಯೋಜನೆ ಸೌಲಭ್ಯ ಪಡೆಯಲು ಸಾಕಷ್ಟು ಅವಕಾಶವಿದ್ದರೂ, ಜನರಿಗೆ ಸರಿಯಾದ ಮಾಹಿತಿ ಇಲ್ಲ. ಇದರಿಂದ ವಸತಿ ಸೌಲಭ್ಯ ನಿಜವಾದ ವಸತಿ ರಹಿತರು, ನಿವೇಶನ ರಹಿತರಿಗೆ ಸಿಗುತ್ತಿಲ್ಲ. ಈ ಹಿನ್ನೆಲೆ ನಮ್ಮ ಹೋರಾಟ. ನಿವೇಶನಗಳನ್ನು ಸಿಪಿಐ ಕೊಡಿಸುವುದಿಲ್ಲ. ಬದಲಿಗೆ ಮನೆ, ನಿವೇಶನಗಳನ್ನು ಹೇಗೆ ಪಡೆಯಬೇಕೆಂಬ ಮಾಹಿತಿ ನೀಡುವುದು. ಅಲ್ಲದೆ, ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳ ಬಗ್ಗೆ ಕಾರ್ಯಾಗಾರದಲ್ಲಿ ವಿವರಿಸಲಿದೆ. ಸರ್ಕಾರದ ಮೇಲೆ ಒತ್ತಡ ಹೇರಲು ಹೋರಾಟವನ್ನೂ ನಡೆಸಲಿದೆ ಎಂದು ಸ್ಪಷ್ಟಪಡಿಸಿದರು.

ಪಕ್ಷದ ರಾಜ್ಯ ಕಾರ್ಯದರ್ಶಿ ಸಾತಿ ಸುಂದರೇಶ ಮಾತನಾಡಿ, ದೇಶದಲ್ಲಿ ನಿವೇಶನ ಮತ್ತು ವಸತಿ ರಹಿತರ ಸಮಸ್ಯೆ ಅನೇಕ ವರ್ಷದಿಂದಲೂ ನನೆಗುದಿಗೆ ಬಿದ್ದಿದೆ. ರೋಟಿ, ಕಪಡಾ ಔರ್ ಮಕಾನ್ ಅಂತಾ ಹೇಳಿಯೇ ಸರ್ಕಾರಗಳು ಅಧಿಕಾರಕ್ಕೆ ಬಂದು ಹೋಗುತ್ತಿವೆ. ಯಾವುದೇ ಸರ್ಕಾರಗಳು ಸೂರು ಕಲ್ಪಿಸುವ ಬಗ್ಗೆ ನಿಜ ಕಾಳಜಿ ತೋರುತ್ತಿಲ್ಲ. ಇನ್ನಾದರೂ ವಸತಿ ರಹಿತರು, ನಿವೇಶನ ರಹಿತರಿಗೆ ಉಭಯ ಸರ್ಕಾರಗಳು ಸೂರು ಕಲ್ಪಿಸಲು ಮುಂದಾಗಲಿ ಎಂದು ಒತ್ತಾಯಿಸಿದರು.

ದಲಿತ ಆಂದೋಲನ ರಾಜ್ಯಾಧ್ಯಕ್ಷ ಕೆ.ಎಸ್. ಜನಾರ್ದನ ಮಾತನಾಡಿ, ಹಳ್ಳಿ, ಪಟ್ಟ, ನಗರ, ಮಹಾನಗರ ವ್ಯಾಪ್ತಿಗಳ ಸ್ಲಂ ನಿವಾಸಿಗಳು ವಾಸಿಸುವ ಮನೆಗಳಲ್ಲಿ ಜೀವನ ನಿರ್ವಹಣೆ ಶೋಚನೀಯ ಸ್ಥಿತಿಯಲ್ಲಿದೆ. ಅಂತಹವರಿಗೆ ಪರ್ಯಾಯ ನಿವೇಶನ, ವಸತಿ ದೊರೆಯದ ಕಾರಣ ಹೀನ ಸ್ಥಿತಿಗಳಲ್ಲಿ ಬದುಕಿನ ಬಂಡಿ ಮುನ್ನಡೆಸುತ್ತಿದ್ದಾರೆ. ಈ ನಿಟ್ಟಿನಲ್ಲಿ ವಸತಿ ರಹಿತರನ್ನು ಗುರುತಿಸಿ ಹೋರಾಟಗಳ ಮೂಲಕ ನ್ಯಾಯ ದೊರಕಿಸಿಕೊಡಲು ಕಾರ್ಯಕರ್ತರು ಮುಂದಾಗಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಸಿಪಿಐ ಜಿಲ್ಲಾ ಕಾರ್ಯದರ್ಶಿ ಆವರಗೆರೆ ಚಂದ್ರು ಮಾತನಾಡಿ, ಪ್ರತಿಯೊಬ್ಬರಿಗೂ ಸೂರು ಕಲ್ಪಿಸುವುದು ಸರ್ಕಾರಗಳ ಆದ್ಯ ಕರ್ತವ್ಯವಾಗಿದೆ. ಸಿಪಿಐ ಅರ್ಹರಿಗೆ ನಿವೇಶನ ಅಥವಾ ಮನೆ ಕೊಡಿಸಲು ಸೇತುವೆಯಾಗಿ ಕೆಲಸ ಮಾಡಲಿದೆ. ಗ್ರಾಪಂ, ಪುರಸಭೆ, ಪಟ್ಟಣ ಪಂಚಾಯಿತಿ, ನಗರಸಭೆ, ಮಹಾನಗರ ಪಾಲಿಕೆ ಹೀಗೆ ಸ್ಥಳೀಯ ಆಡಳಿತದಲ್ಲಿ ಹೇಗೆ ಅರ್ಜಿ ಸಲ್ಲಿಸಬೇಕೆಂಬ ಬಗ್ಗೆ ಮಾಹಿತಿ ನೀಡಲಾಗುವುದು ಎಂದರು.

ಸಿಪಿಐ ಜಿಲ್ಲಾ ಸಂಚಾಲಕ ಆವರಗೆರೆ ಎಚ್.ಜಿ.ಉಮೇಶ, ಖಜಾಂಚಿ ಮಹಮ್ಮದ್ ರಫೀಕ್, ಜಗಳೂರು ಕಾರ್ಯದರ್ಶಿ ಮಹಮ್ಮದ್ ಬಾಷಾ, ಹರಿಹರ ಕಾರ್ಯದರ್ಶಿ ಟಿ.ಎಚ್. ನಾಗರಾಜ. ನರೇಗಾ ರಂಗನಾಥ, ರಮೇಶ ದಾಸರ, ಐರಣಿ ಚಂದ್ರು ಇತರರು ಇದ್ದರು.

- - - -13ಕೆಡಿವಿಜಿ13, 14.ಜೆಪಿಜಿ:

ದಾವಣಗೆರೆ ಸಿಪಿಐ ಕಚೇರಿಯಲ್ಲಿ ಸೋಮವಾರ ಎಐವೈಎಫ್‌ ರಾಜ್ಯ ಕಾರ್ಯದರ್ಶಿ ಎಚ್.ಎಂ.ಸಂತೋಷ ವಸತಿ ಮತ್ತು ನಿವೇಶನ ರಹಿತರ ಮಾಹಿತಿ ಕಾರ್ಯಾಗಾರವನ್ನು ತಮಟೆ ಬಾರಿಸುವ ಮೂಲಕ ಉದ್ಘಾಟಿಸಿದರು.