ಬೆಲೆ ಏರಿಕೆ ತಡೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಸಿಪಿಎಂ ಒತ್ತಾಯ

| Published : Jun 30 2024, 12:46 AM IST

ಬೆಲೆ ಏರಿಕೆ ತಡೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಸಿಪಿಎಂ ಒತ್ತಾಯ
Share this Article
  • FB
  • TW
  • Linkdin
  • Email

ಸಾರಾಂಶ

ಪೆಟ್ರೋಲ್, ಡೀಸೆಲ್, ಹಾಲು ಮತ್ತಿತರ ವಸ್ತುಗಳ ಬೆಲೆಗಳನ್ನು ಏರಿಸಿರುವುದು ಬರಗಾಲದಿಂದ ತತ್ತರಿಸಿರುವ ಜನತೆಗೆ ಗಾಯದ ಮೇಲೆ ಬರೆ ಎಳೆದಂತಾಗುತ್ತದೆ.

ಸಂಡೂರು: ಬೆಲೆ ಏರಿಕೆ ತಡೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸಿಪಿಎಂ ಪಕ್ಷದ ಮುಖಂಡರು ಬುಧವಾರ ತಹಶೀಲ್ದಾರ್ ಜಿ. ಅನಿಲ್‌ಕುಮಾರ್ ಮುಖಾಂತರ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

ಮನವಿ ಸಲ್ಲಿಸಿ ಮಾತನಾಡಿದ ಸಂಘಟನೆಯ ತಾಲೂಕು ಘಟಕದ ಕಾರ್ಯದಶಿ ಎ. ಸ್ವಾಮಿ, ಪೆಟ್ರೋಲ್, ಡೀಸೆಲ್, ಹಾಲು ಮತ್ತಿತರ ವಸ್ತುಗಳ ಬೆಲೆಗಳನ್ನು ಏರಿಸಿರುವುದು ಬರಗಾಲದಿಂದ ತತ್ತರಿಸಿರುವ ಜನತೆಗೆ ಗಾಯದ ಮೇಲೆ ಬರೆ ಎಳೆದಂತಾಗುತ್ತದೆ. ರಾಜ್ಯ ಸರ್ಕಾರದ ಆದಾಯವನ್ನು ಹೆಚ್ಚಿಸಿಕೊಳ್ಳಲು ಜನತೆಯ ಮೇಲೆ ಕರಭಾರ ಹೇರುತ್ತಿರುವುದು ಖಂಡನೀಯ. ಸರ್ಕಾರ ಪೆಟ್ರೋಲ್, ಡೀಸೆಲ್ ಹಾಗೂ ಹಾಲಿನ ಬೆಲೆ ಏರಿಕೆಯ ನಿರ್ಧಾರವನ್ನು ಹಿಂದಕ್ಕೆ ಪಡೆಯಬೇಕು. ಬಸ್ ದರ, ಕುಡಿಯುವ ನೀರಿನ ದರ ಹಾಗೂ ಕಸ ವಿಲೇವಾರಿ ದರ ಏರಿಕೆಗಳ ಪ್ರಸ್ತಾವ ಮತ್ತು ನಗದೀಕರಣದ ಹೆಸರಿನ ಸಾರ್ವಜನಿಕ ಭೂಮಿ ಮತ್ತಿತರ ಆಸ್ತಿಗಳ ಮಾರಾಟವನ್ನು ಕೈಬಿಡಬೇಕು ಎಂದರು.

ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ನೂರು ಕೋಟಿ ಹಗರಣವನ್ನು ನ್ಯಾಯಾಂಗ ತನಿಖೆಗೆ ಕೊಡಬೇಕು. ಇತರೆ ಸಮುದಾಯಗಳ ಅಭಿವೃದ್ಧಿ ನಿಗಮಗಳಲ್ಲಿನ ಹಣಕಾಸು ನಿರ್ವಹಣೆಯನ್ನು ತನಿಖೆಗೆ ಒಳಪಡಿಸಬೇಕು. ಭೂಹಂಚಿಕೆಯನ್ನು ಭೂ ಸ್ವಾಧೀನ ಕ್ರಮಗಳ ಮೂಲಕ ಮತ್ತು ಈ ಸಮುದಾಯಗಳ ಫಲಾನುಭವಿಗಳಿಗಾಗಿ ಪ್ರತಿ ವರ್ಷ ಅರ್ಜಿ ಕರೆಯುವುದನ್ನು ನಿಲ್ಲಿಸಬೇಕು. ಇದಕ್ಕಾಗಿ ಪ್ರತಿ ತಾಲ್ಲೂಕಿನಲ್ಲಿ ಕನಿಷ್ಠ ೫೦೦ ಎಕರೆ ಜಮೀನು ಒದಗಿಸಬೇಕು. ಪೂರ್ವ ಪ್ರಾಥಮಿಕ ಶಾಲೆಗಳನ್ನು ಅಂಗನವಾಡಿಗಳ ಮೂಲಕವೇ ನಡೆಸಬೇಕು ಎಂದರು.

ಅಕಾಡೆಮಿ ಮತ್ತು ಪ್ರಾಧಿಕಾರಗಳ ಸ್ವಾಯತ್ತತೆ ಬಲಪಡಿಸಬೇಕು. ಎಲ್ಲ ರೀತಿಯ ಗುತ್ತಿಗೆ, ಗೌರವಧನ, ಅತಿಥಿ ಹೆಸರಿನ ಪದ್ಧತಿಯನ್ನು ರದ್ದುಗೊಳಿಸಬೇಕು. ಅವರ ಉದ್ಯೋಗವನ್ನು ಖಾಯಂಗೊಳಿಸಬೇಕು. ಸರ್ಕಾರದಲ್ಲಿ ಖಾಲಿ ಇರುವ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಬೇಕು. ಶಿಕ್ಷಣ ಪೂರೈಸಿದ ನಿರುದ್ಯೋಗಿಗಳಿಗೆ ಉದ್ಯೋಗ ಸಿಗುವವರೆಗೆ ಮಾಸಿಕ ಕನಿಷ್ಠ ₹೧೦,೦೦೦ ನಿರುದ್ಯೋಗ ಭತ್ಯೆ ನೀಡಬೇಕು. ಸತತ ಬರಗಾಲ ಹಾಗೂ ಅತಿವೃಷ್ಟಿಯ ಹಿನ್ನೆಲೆಯಲ್ಲಿ ರೈತರ, ಕೂಲಿಕಾರರ, ದಲಿತರ ಹಾಗೂ ಮಹಿಳೆಯರ ಎಲ್ಲ ಸಾಲಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು.

ಕರ್ನಾಟಕ ಪ್ರಾಂತ ರೈತ ಸಂಘದ ತಾಲೂಕು ಕಾರ್ಯದರ್ಶಿ ಖಲಂದರ್ ಬಾಷ, ಮುಖಂಡರಾದ ಮಾರಪ್ಪ, ಪಕ್ಕೀರಪ್ಪ ಹಾಗೂ ಕುಮಾರಸ್ವಾಮಿ ಉಪಸ್ಥಿತರಿದ್ದರು.