ಸಾರಾಂಶ
ಅಜ್ಜರಕಾಡು ಜಿಲ್ಲಾ ಆಸ್ಪತ್ರೆಯಲ್ಲಿ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ಸಮುದಾಯ ವೈದ್ಯಕೀಯ ವಿಭಾಗದ ಸಹಯೋಗದೊಂದಿಗೆ ಕಾರ್ಡಿಯಾಕ್ ಪಲ್ಮನರಿ ರಿಸಪಿಟೇಶನ್ (ಸಿಪಿಆರ್ - ಹೃದಯ ಮತ್ತು ಶ್ವಾಸಕೋಶಗಳ ಪುನಶ್ಚೇತನ) ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಉಡುಪಿ: ನಗರದ ಅಜ್ಜರಕಾಡು ಜಿಲ್ಲಾ ಆಸ್ಪತ್ರೆಯಲ್ಲಿ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ಸಮುದಾಯ ವೈದ್ಯಕೀಯ ವಿಭಾಗದ ಸಹಯೋಗದೊಂದಿಗೆ ತುರ್ತು ಪರಿಸ್ಥಿತಿಗಳನ್ನು ನಿಭಾಯಿಸಲು ಆಸ್ಪತ್ರೆಯ ಶೂಶ್ರಷಕ ಅಧಿಕಾರಿಗಳಿಗೆ, ಭದ್ರತಾ ಸಿಬ್ಬಂದಿ ಮತ್ತು ಆಸ್ಪತ್ರೆಯ ಇತರೆ ಸಿಬ್ಬಂದಿಗೆ ಜ್ಞಾನ ಮತ್ತು ಕೌಶಲ್ಯಗಳನ್ನು ಸುಧಾರಿಸುವ ಗುರಿಯನ್ನು ಹೊಂದಿರುವ ಕಾರ್ಡಿಯಾಕ್ ಪಲ್ಮನರಿ ರಿಸಪಿಟೇಶನ್ (ಸಿಪಿಆರ್ - ಹೃದಯ ಮತ್ತು ಶ್ವಾಸಕೋಶಗಳ ಪುನಶ್ಚೇತನ) ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ಸರ್ಜನ್ ಡಾ. ಎಚ್. ಅಶೋಕ್ ಅವರು, ಸಿ.ಪಿ.ಆರ್. ಒಂದು ಜೀವ ಉಳಿಸುವ ನಿರ್ಣಾಯಕ ತಂತ್ರವಾಗಿದ್ದು ತುರ್ತು ಸಂದರ್ಭಗಳಲ್ಲಿ ಇದು ಅತ್ಯಗತ್ಯವಾಗಿದೆ. ಯಾವುದೇ ತುರ್ತು ಸಂದರ್ಭಗಳಲ್ಲಿ ಈ ಸಿ.ಪಿ.ಆರ್.ನ್ನು ಬಳಸುವುದಕ್ಕೆ ಜಿಲ್ಲಾ ಆಸ್ಪತ್ರೆಯ ಎಲ್ಲಾ ಸಿಬ್ಬಂದಿಗೆ ಅರಿವು ಇರಬೇಕು ಎಂಬ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಇದನ್ನು ಸರಿಯಾಗಿ ತಿಳಿದುಕೊಂಡರೇ ಅಗತ್ಯ ಸಂದರ್ಭದಲ್ಲಿ ಜನರ ಅಮೂಲ್ಯ ಜೀವಗಳನ್ನು ಉಳಿಸಲು ಸಾಧ್ಯವಾಗುತ್ತದೆ ಎಂದರು. ಕೆಎಂಸಿಯ ಡಾ. ದಿವ್ಯ ಮತ್ತು ಡಾ. ಹೊಳ್ಳ ಇವರ ತಂಡವು ರೋಗಿಯೊಬ್ಬರು ಹೃದಯ ಸ್ತಂಭನಕ್ಕೂಳಗಿದಾಗ ಸಿ.ಪಿ.ಆರ್. ಮಹತ್ವದ ಬಗ್ಗೆ ಕುರಿತು ಉಪಾನ್ಯಾಸ ಹಾಗೂ ಪ್ರಾಯೋಗಿಕವಾಗಿ ಹೇಗೆ ಸಿ.ಪಿ.ಆರ್. ಮಾಡಬೇಕು ಎಂದು ತಿಳಿಸಿಕೊಟ್ಟರು.ಜಿಲ್ಲಾ ಆಸ್ಪತ್ರೆಯ ಆರ್.ಎಂ.ಒ. ಡಾ. ವಾಸುದೇವ್, ಡಾ. ರತ್ನ ಮತ್ತು ಡಾ. ಮೇರಿ ಇದ್ದರು.