ಸಾರಾಂಶ
ಮಾಜಿ ಸಚಿವ ಸಿ.ಪಿ.ಯೋಗೇಶ್ವರ ನಮ್ಮವರೇ ಆಗಿದ್ದರು. ಬಳಿಕ ಎಲ್ಲ ಕಡೆ ಹೋಗಿ ಮರಳಿ ಗೂಡಿಗೆ ಬಂದಿದ್ದಾರೆ. ಅವರ ಆಗಮನದಿಂದ ಕಾಂಗ್ರೆಸ್ ಪಕ್ಷಕ್ಕೆ ಆನೆ ಬಲ ಬಂದಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಹೇಳಿದರು.
ಕನ್ನಡಪ್ರಭ ವಾರ್ತೆ ಬೆಳಗಾವಿ
ಮಾಜಿ ಸಚಿವ ಸಿ.ಪಿ.ಯೋಗೇಶ್ವರ ನಮ್ಮವರೇ ಆಗಿದ್ದರು. ಬಳಿಕ ಎಲ್ಲ ಕಡೆ ಹೋಗಿ ಮರಳಿ ಗೂಡಿಗೆ ಬಂದಿದ್ದಾರೆ. ಅವರ ಆಗಮನದಿಂದ ಕಾಂಗ್ರೆಸ್ ಪಕ್ಷಕ್ಕೆ ಆನೆ ಬಲ ಬಂದಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಹೇಳಿದರು.ಚನ್ನಮ್ಮನ ಕಿತ್ತೂರಿನಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಯೋಗೇಶ್ವರ ಅವರಿಗೆ ಟಿಕೆಟ್ ಕೊಟ್ಟರೇ ಒಳ್ಳೆಯದು. ಅವರು ಸ್ಪರ್ಧೆ ಮಾಡಿದರೆ ಚನ್ನಪಟ್ಟಣ ಕ್ಷೇತ್ರವನ್ನು ನಾವು ಗೆಲ್ಲುತ್ತೇವೆ. ಶಿಗ್ಗಾವಿಯಲ್ಲಿ ಟಿಕೆಟ್ ನೀಡುವ ವಿಚಾರದಲ್ಲಿ ಜಾತಿ ನೋಡುವುದಿಲ್ಲ. ಗೆಲ್ಲುವ ಮಾನದಂಡ ಒಂದೇ ಗಣನೆಗೆ ತೆಗೆದುಕೊಂಡು ಪಕ್ಷವು ಟಿಕೆಟ್ ನೀಡಲಿದೆ ಎಂದರು.
ವೀರರಾಣಿ ಕಿತ್ತೂರು ಚನ್ನಮ್ಮನ ವಿಜಯೋತ್ಸವ 200ನೇ ವರ್ಷಾಚರಣೆ ಕಾರ್ಯಕ್ರಮವನ್ನು ಅದ್ಧೂರಿಯಿಂದ ಮಾಡಲಾಗುತ್ತಿದೆ. ಕಾಂಗ್ರೆಸ್ ಪಕ್ಷವೇ ಕಿತ್ತೂರು ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿದೆ. ಕಿತ್ತೂರಿನ ಬಗ್ಗೆ ನಮ್ಮ ಸರ್ಕಾರಕ್ಕೆ ವಿಶೇಷ ಕಾಳಜಿ ಇದೆ. ಇತಿಹಾಸವನ್ನು ನೋಡಿದಾಗ ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ್ದ ಚನ್ನಮ್ಮ ಎಲ್ಲರೂ ಮಾದರಿ ಆಗಿದ್ದಾರೆ ಎಂದು ತಿಳಿಸಿದರು.ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಚನ್ನಮ್ಮನ ಅಧ್ಯಯನ ಪೀಠಕ್ಕೆ ಅನುದಾನದ ಕೊರತೆ ಎದುರಾದ ಪ್ರಶ್ನೆಗೆ ಗರಂ ಆದ ಸಚಿವೆ ಹೆಬ್ಬಾಳಕರ, ಈ ರೀತಿಯ ಪ್ರಶ್ನೆ ಕೇಳಿದ್ದು ಸರಿಯಲ್ಲ. ಚನ್ನಮ್ಮ ವಿವಿ ಸ್ಥಾಪನೆ ಮಾಡಿದ್ದು ಕಾಂಗ್ರೆಸ್ ಸರ್ಕಾರ ಎಂದರು.