ಶೆಟ್ಟಿಹಳ್ಳಿ ಕೆರೆ ಒತ್ತುವರಿ ತೆರವಿಗೆ ಸಿಪಿವೈ ಸೂಚನೆ

| Published : Aug 02 2025, 12:00 AM IST

ಸಾರಾಂಶ

ಚನ್ನಪಟ್ಟಣ: ನಗರದ ಹೃದಯ ಭಾಗದಲ್ಲಿನ ಶೆಟ್ಟಿಹಳ್ಳಿ ಕೆರೆ ಒತ್ತುವರಿ ಜಮೀನನ್ನು ತೆರವುಗೊಳಿಸುವಂತೆ ಶಾಸಕ ಸಿ.ಪಿ.ಯೋಗೇಶ್ವರ್ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಚನ್ನಪಟ್ಟಣ: ನಗರದ ಹೃದಯ ಭಾಗದಲ್ಲಿನ ಶೆಟ್ಟಿಹಳ್ಳಿ ಕೆರೆ ಒತ್ತುವರಿ ಜಮೀನನ್ನು ತೆರವುಗೊಳಿಸುವಂತೆ ಶಾಸಕ ಸಿ.ಪಿ.ಯೋಗೇಶ್ವರ್ ಅಧಿಕಾರಿಗಳಿಗೆ ತಾಕೀತು ಮಾಡಿದರು.

ನಗರದ ಶೆಟ್ಟಿಹಳ್ಳಿ ಕೆರೆಯಲ್ಲಿ ನಡೆಯುತ್ತಿರುವ ಶೆಟ್ಟಿಹಳ್ಳಿ ಕೆರೆ ಪುನಶ್ಚೇತನ ಕಾಮಗಾರಿಯನ್ನು ನಗರಸಭೆ ಅಧ್ಯಕ್ಷರು, ಸದಸ್ಯರು ಹಾಗೂ ಅಧಿಕಾರಿಗಳೊಂದಿಗೆ ವೀಕ್ಷಣೆ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರದ ಹೃದಯ ಭಾಗದಲ್ಲಿನ ಶೆಟ್ಟಿಹಳ್ಳಿ ಕೆರೆಯ ಸುಮಾರು ೩ ಎಕರೆಗೂ ಹೆಚ್ಚು ಜಮೀನು ಒತ್ತುವರಿಯಾಗಿದೆ ಎನ್ನಲಾಗಿದೆ. ನಗರಸಭಾ ಅಧ್ಯಕ್ಷರು, ಪೌರಾಯುಕ್ತರು ಹಾಗೂ ತಹಸೀಲ್ದಾರ್ ಮತ್ತು ಸಂಬಂಧಪಟ್ಟ ಅಧಿಕಾರಿಗಳು ತ್ವರಿತವಾಗಿ ಈ ಬಗ್ಗೆ ಅಗತ್ಯ ಕ್ರಮ ಕೈಗೊಂಡು ಕೆರೆ ಒತ್ತುವರಿ ಜಮೀನನ್ನು ತೆರವು ಮಾಡಿಸಬೇಕು ಎಂದು ಖಡಕ್ ಸೂಚನೆ ನೀಡಿದರು.

ಹಿಂದೆ ಈ ಭಾಗದ ಜನತೆ ಮತ್ತು ಜಮೀನುಗಳಿಗೆ ನೀರಾವರಿ ಸೌಲಭ್ಯವನ್ನು ಕಲ್ಪಿಸಿಕೊಡುತ್ತಿದ್ದ ಶೆಟ್ಟಿಹಳ್ಳಿ ಕೆರೆ ನಗರೀಕರಣದ ಪ್ರಭಾವದಿಂದ ಕೊಳಚೆ ಗುಂಡಿಯಾಗಿ ಮಾರ್ಪಟ್ಟು ಈ ಭಾಗದ ಜನತೆಗೆ ಬಾರೀ ಅನನುಕೂಲವಾಗಿದೆ. ಜೊತೆಗೆ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿತ್ತು. ಈ ಕೆರೆಗೆ ಕಾಯಕಲ್ಪ ಮಾಡಿ ಜನತೆಗೆ ಅನುಕೂಲ ಮಾಡಿಕೊಡಬೇಕು ಎಂದು ಚಿಂತನೆ ಮಾಡಿ ಸುಮಾರು ೧.೨೦ ಕೋಟಿ ರು.ವೆಚ್ಚದಲ್ಲಿ ಕೆರೆಯಲ್ಲಿನ ಕೊಳಚೆಯನ್ನು ತೆಗೆದು ಕೆರೆಯನ್ನು ಪುನಶ್ಚೇತನ ಮಾಡುವ ಕಾರ್ಯ ಭರದಿಂದ ನಡೆಯುತ್ತಿದೆ ಎಂದು ತಿಳಿಸಿದರು.

ಕೆಲವರು ವಸತಿ ಮತ್ತು ನಿವೇಶನದ ಉದ್ದೇಶದಿಂದ ಶೆಟ್ಟಿಹಳ್ಳಿ ಕೆರೆ ಜಮೀನನ್ನು ಒತ್ತುವರಿ ಮಾಡಿಕೊಂಡು, ನ್ಯಾಯಾಲಯಕ್ಕೆ ಹೋಗಿದ್ದಾರೆ ಎನ್ನಲಾಗಿದ್ದು, ಸರ್ಕಾರದಿಂದ ೩-೪ ಕಡೆ ವಸತಿ ಮತ್ತು ನಿವೇಶನ ರಹಿತರಿಗೆ ಮನೆ ಮತ್ತು ನಿವೇಶನ ಕೊಡಲು ಪ್ರಯತ್ನ ಮಾಡಲಾಗುತ್ತಿದೆ. ಯಾರಿಗೆ ಮನೆ, ನಿವೇಶನ ಇಲ್ಲ ಅಂತಹವರನ್ನು ಗುರುತಿಸಿ ಅವರಿಗೆ ಅಲ್ಲಿ ಅವಕಾಶ ಮಾಡಿಕೊಡಲಾಗುವುದು. ಒತ್ತುವರಿದಾರರು ಕೆರೆ ಪುನಶ್ಚೇನ-ಅಭಿವೃದ್ಧಿ ದೃಷ್ಟಿಯಿಂದ ಸ್ವಯಂ ಪ್ರೇರಣೆಯಿಂದ ಒತ್ತುವರಿ ಜಾಗವನ್ನು ತೆರವು ಮಾಡಿ ಸಹಕರಿಸಬೇಕು ಎಂದು ಹೇಳಿದರು.

ಅಧಿಕಾರಿಗಳು ಕೆರೆ ಒತ್ತುವರಿ ಜಾಗ ತೆರವಿಗೆ ಸಕ್ರಿಯವಾಗಬೇಕು. ನಗರಸಭೆಯ ಕಾನೂನು ವಿಭಾಗ ಈ ವಿಚಾರದಲ್ಲಿ ಕ್ರಿಯಾತ್ಮಕವಾಗಿ ಕೆಲಸ ಮಾಡಬೇಕು. ಯಾರ್‍ಯಾರು ನ್ಯಾಯಾಲಯಕ್ಕೆ ಹೋಗಿದ್ದಾರೆ ಅವರೊಂದಿಗೆ ಮಾತಕತೆ ನಡೆಸಿ ಅವರ ಮನವೊಲಿಸಬೇಕು. ಇಲ್ಲ ನ್ಯಾಯಾಲಯದ ಹೋರಾಟದ ಮೂಲಕ ಜಮೀನು ಒತ್ತುವರಿ ತೆರವಿಗೆ ಮುಂದಾಗಬೇಕು ಎಂದು ತಿಳಿಸಿದ ಅವರು, ಎಲ್ಲವೂ ಅಂದು ಕೊಂಡಂತೆ ಆದರೆ ಒಂದು ವರ್ಷದಲ್ಲಿ ಕೆರೆಯನ್ನು ಪುನಶ್ಚೇನಗೊಳಿಸಿ ಆಧುನಿಕವಾಗಿ ಅಭಿವೃದ್ಧಿ ಮಾಡಿ ಸಾರ್ವಜನಿಕ ಬಳಕೆಗೆ ಸಮರ್ಪಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ನಗರಸಭಾ ಅಧ್ಯಕ್ಷ ವಾಸಿಲ್ ಆಲಿ ಖಾನ್, ಪೌರಾಯುಕ್ತ ಮಹೇಂದ್ರ, ಸದಸ್ಯರಾದ ಸತೀಶ್‌ಬಾಬು, ಸರ್ವಮಂಗಳ ಲೋಕೇಶ್, ನಗರಸಭಾ ಎಂಜಿನಿಯರ್ ಪುಷ್ಟ, ಜಯಣ್ಣ, ಸ್ನೇಹ ಹಾಗೂ ಇತರರು ಹಾಜರಿದ್ದರು.

ಪೊಟೋ೧ಸಿಪಿಟಿ೨: ಚನ್ನಪಟ್ಟಣದ ಶೆಟ್ಟಿಹಳ್ಳಿ ಕೆರೆಯಲ್ಲಿ ನಡೆಯುತ್ತಿರುವ ಕೆರೆ ಪುನಶ್ಚೇತನ ಕಾಮಗಾರಿಯನ್ನು ಶಾಸಕ ಸಿ.ಪಿ.ಯೋಗೇಶ್ವರ್ ವೀಕ್ಷಿಸಿದರು.