ಸಾರಾಂಶ
ಮುಂಡಗೋಡ: ತಾಲೂಕಿನ ಮಳಗಿ ಗ್ರಾಮದ ಕೊರ್ಲಕಟ್ಟೆ ಕೆರೆಯ ಒಡ್ಡಿನಲ್ಲಿ ಸೋಮವಾರ ಡೊಂಬು ಕಾಣಿಸಿಕೊಂಡು ನೀರು ಪೋಲಾಗುತ್ತಿದೆ. ಸುತ್ತಮುತ್ತ ಪ್ರದೇಶದ ಗದ್ದೆಗಳಿಗೆ ನುಗ್ಗುತ್ತಿದೆ. ಇದರಿಂದ ರೈತರಲ್ಲಿ ಬೆಳೆ ಹಾನಿಯ ಆತಂಕ ಮನೆ ಮಾಡಿದೆ.
ಮಳಗಿ ಗ್ರಾಮದ ಸಿದ್ದಾಪುರ ಓಣಿ ಸರ್ವೇ ನಂ.೧೮ರಲ್ಲಿರುವ ಸುಮಾರು ೫ ಎಕರೆ ಪ್ರದೇಶವನ್ನೊಳಗೊಂಡಿರುವ ಈ ಕೆರೆಯ ಒಡ್ಡಿನಲ್ಲಿ ಬಿರುಕು ಕಾಣಿಸಿಕೊಂಡು ನೀರು ರೈತರ ಗದ್ದೆಗಳಿಗೆ ಹರಿಯುತ್ತಿದೆ. ಇದರಿಂದ ಸುತ್ತಮುತ್ತ ಪ್ರದೇಶದ ನಾಟಿ ಭತ್ತ ಗದ್ದೆಗಳು ಜಲಾವೃತವಾಗುತ್ತಿವೆ. ಬೆಳೆ ನಾಶವಾಗುವ ಲಕ್ಷಣಗಳು ಕಾಣುತ್ತಿವೆ. ಇದರಿಂದ ರೈತರು ಕಂಗಾಲಾಗಿದ್ದಾರೆ.ಗ್ರಾಪಂಗೆ ಸಂಬಂಧಪಟ್ಟ ಈ ಕೊರ್ಲಕಟ್ಟೆ ಕೆರೆ ಸಮರ್ಪಕ ನಿರ್ವಹಣೆ ಇಲ್ಲದ್ದರಿಂದ ಒಡ್ಡಿನಲ್ಲಿ ಬಿರುಕು ಕಾಣಿಸಿಕೊಳ್ಳಲು ಕಾರಣವಾಗಿದೆ. ಇದರಿಂದ ನಿರಂತರ ನೀರು ಪೋಲಾಗುತ್ತಿದೆ. ಒಂದು ವೇಳೆ ಇದೇ ರೀತಿ ನೀರು ಪೋಲಾಗಿ ಒಡ್ಡು ಒಡೆದಲ್ಲಿ ಸುತ್ತಮುತ್ತ ಪ್ರದೇಶದ ನೂರಾರು ಎಕರೆ ನಾಟಿ ಭತ್ತ ಗದ್ದೆಗಳು ಜಲಾವೃತಗೊಂಡು ಬೆಳೆ ಸಂಪೂರ್ಣ ಹಾನಿಗೊಳಗಾಗಲಿವೆ ಎನ್ನಲಾಗುತ್ತಿದೆ.
ತಕ್ಷಣ ಸಂಬಂಧಪಟ್ಟ ಗ್ರಾಪಂನವರು ಸ್ಥಳಕ್ಕೆ ಧಾವಿಸಿ ತಕ್ಷಣ ದುರಸ್ತಿ ಕಾರ್ಯ ಕೈಗೊಂಡು ರೈತರ ಭೂಮಿಗೆ ಭದ್ರತೆ ಒದಗಿಸಬೇಕು ಎಂಬುವುದು ರೈತರ ಆಗ್ರಹವಾಗಿದೆ.ಕೆರೆಯನ್ನು ಬೇಸಿಗೆಯಲ್ಲಿ ರಿಪೇರಿ ಮಾಡಲಾಗಿದೆ. ಒಡ್ಡಿನಲ್ಲಿ ಉಡಗಳು ತಿರುಗಾಡಿದ್ದರಿಂದ ಡೊಂಬು ಕಾಣಿಸಿಕೊಂಡು ನೀರು ಪೋಲಾಗುತ್ತಿದೆ. ಸದ್ಯ ಮಳೆ ಇರುವುದರಿಂದ ದುರಸ್ಥಿಗೆ ತೊಂದರೆಯಾಗುತ್ತಿದ್ದು, ಮಂಗಳವಾರ ಬೆಳಿಗ್ಗೆ ಕೆರೆಗೆ ಬೇಟಿ ನೀಡಿ ತಾತ್ಕಾಲಿಕವಾಗಿ ಮಣ್ಣು ಹಾಕಿ ಡೊಂಬು ಮುಚ್ಚುವ ಕ್ರಮ ಕೈಗೊಳ್ಳಲಾಗುವುದು ಎನ್ನುತ್ತಾರೆ ಮಳಗಿ ಪಿಡಿಒ ಶ್ರೀನಿವಾಸ ಮರಾಠೆ.