ಮಣಿನಾಗಕ್ಕೆ ತೆರಳುವ ಮಾರ್ಗದ ಗುಡ್ಡದಲ್ಲಿ ಬಿರುಕು

| Published : Jul 28 2025, 12:35 AM IST

ಸಾರಾಂಶ

ಧರೆ ಕುಸಿಯುವ ಆತಂಕ ಎದುರಾಗಿದೆ. ಗುಡ್ಡದಲ್ಲಿ ೧೦ ಮೀಟರ್‌ಗೂ ಹೆಚ್ಚು ದೂರ ಬಾಯಿ ತೆರೆದಿದೆ.

ಗೋಕರ್ಣ: ಇಲ್ಲಿನ ಮುಖ್ಯ ಕಡಲತೀರದಲ್ಲಿರುವ ರಾಮಮಂದಿರ ಹಿಂಭಾಗದಿಂದ ಮಣಿನಾಗಕ್ಕೆ ತೆರಳುವ ಮಾರ್ಗದಲ್ಲಿ ಕಳೆದ ವರ್ಷ ಗುಡ್ಡ ಕುಸಿತವಾದ ಜಾಗದಲ್ಲೇ ಈಗ ಭಾರಿ ಬಿರುಕು ಮೂಡಿದೆ. ಧರೆ ಕುಸಿಯುವ ಆತಂಕ ಎದುರಾಗಿದೆ. ಗುಡ್ಡದಲ್ಲಿ ೧೦ ಮೀಟರ್‌ಗೂ ಹೆಚ್ಚು ದೂರ ಬಾಯಿ ತೆರೆದಿದೆ. ಕಳೆದ ವರ್ಷ ಇದೇ ಗುಡ್ಡದ ರಾಮಮಂದಿರದ ಬಳಿ ಬೃಹತ್ ಪ್ರಮಾಣದಲ್ಲಿ ಕುಸಿತವಾಗಿತ್ತು. ದೊಡ್ಡ ಬಂಡೆ, ಬೃಹತ್ ಪ್ರಮಾಣದಲ್ಲಿ ಮಣ್ಣಿನ ರಾಶಿ ಬಿದ್ದಿತ್ತು. ಮಂದಿರದ ಚಾವಣಿಯ ಅಲ್ಪಭಾಗ ಹಾಗೂ ರಾಮತೀರ್ಥದ ಬಳಿಯ ಚಿಕ್ಕ ಕಟ್ಟಡಕ್ಕೆ ಹಾನಿಯಾಗಿತ್ತು. ಆದರೆ ಮಂದಿರಕ್ಕೆ ಯಾವುದೇ ಅಪಾಯವಾಗಿರಲಿಲ್ಲ.

ಒಂದು ವೇಳೆ ಕುಸಿತವಾದರೂ ಮಣ್ಣಿನ ರಾಶಿ ಸಮುದ್ರಕ್ಕೆ ಸೇರಲಿದೆ. ಯಾವುದೇ ಅಪಾಯ ಉಂಟಾಗದಿದ್ದರೂ ಮೇಲ್ಭಾಗದ ವಿಶಾಲ ಬಯಲಿನಲ್ಲಿರುವ ಹೊಟೇಲ್, ರೆಸಾರ್ಟ್‌, ವಸತಿ ಪ್ರದೇಶಗಳ ಮಣ್ಣು ಸಡಲಿಕೆಯಿಂದ ಮುಂದೊಂದು ದಿನ ತೊಂದರೆಯಾಗಬಹುದು ಎನ್ನಲಾಗುತ್ತಿದೆ.

ಸಂಬಂಧಿಸಿದ ಇಲಾಖೆಯವರು ಪರಿಶೀಲನೆ ನಡೆಸಿ ಸೂಕ್ತ ಕ್ರಮ ತೆಗೆದುಕೊಳ್ಳದಿದ್ದರೆ ಅವಘಡ ನಡೆಯುವ ಆತಂಕವಿದೆ ಎಂಬುದು ಸ್ಥಳೀಯ ಅಭಿಪ್ರಾಯವಾಗಿದೆ.

ಚಿರೆಕಲ್ಲು ಗಣಿಗಾರಿಕೆಯಿಂದ ಅಪಾಯ:

ಈ ಹಿಂದೆ ಈ ಪರ್ವತ ಪ್ರದೇಶದಲ್ಲಿ ಚಿರೆಕಲ್ಲು ಗಣಿಗಾರಿಕೆ ನಡೆಸಲಾಗಿತ್ತು. ಇದರಿಂದ ದೊಡ್ಡ ಕೆರೆ ರೀತಿ ಕಂದಕ ನಿರ್ಮಾಣವಾಗಿತ್ತು. ಈಗ ಇದರಲ್ಲಿ ನೀರು ತುಂಬುತ್ತಿದೆ. ಈ ನೀರಿನ ಒತ್ತಡಕ್ಕೆ ಗುಡ್ಡ ಕುಸಿಯಲು ಕಾರಣ ಎನ್ನಲಾಗುತ್ತಿದೆ.