ರಾಮ್ ರಹೀಮ್ ನಗರದ ಆಸುಪಾಸಿನ ಹಲವು ಕಡೆಗಳಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡಲಾಗುತ್ತಿದೆ ಎಂದು ದೂರು ಸಾರ್ವಜನಿಕರಿಂದಲೂ ಕೇಳಿ ಬಂದಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ಸ್ಥಳೀಯ ಪೊಲೀಸರಿಗೆ ಕಟ್ಟು ನಿಟ್ಟಿನ ಸೂಚನೆ ನೀಡಲಾಗಿದೆ.
ಕನ್ನಡಪ್ರಭ ವಾರ್ತೆ ಮದ್ದೂರು
ತಾಲೂಕಿನ ಶಿಂಷಾ ನದಿ ಪಾತ್ರದಲ್ಲಿ ಎಗ್ಗಿಲ್ಲದೆ ನಡೆಯುತ್ತಿರುವ ಅಕ್ರಮ ಮರಳುಗಾರಿಕೆ ಹಾಗೂ ಗಾಂಜಾ ಸೇರಿದಂತೆ ಮಾದಕ ವಸ್ತುಗಳಿಗೆ ಕಡಿವಾಣ ಹಾಕಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶೋಭಾರಾಣಿ ತಿಳಿಸಿದರು.ನಗರದ ತಾಪಂ ಸಭಾಂಗಣದಲ್ಲಿ ನಡೆದ ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಕುಂದುಕೊರತೆ ಸಭೆ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಮದ್ದೂರು ತಾಲೂಕಿನ ಕೆಸ್ತೂರು ಪೊಲೀಸ್ ಠಾಣೆ ವ್ಯಾಪ್ತಿಯ ತುಮಕೂರು ಹೆದ್ದಾರಿಯಲ್ಲಿ ಕಳೆದ ತಿಂಗಳು ಅಕ್ರಮವಾಗಿ ಸಾಗಿಸುತ್ತಿದ್ದ 111 ಕೆ.ಜಿ. ಗಾಂಜಾವನ್ನು ಖಚಿತ ಮಾಹಿತಿ ಮೇರೆಗೆ ವಶಪಡಿಸಿಕೊಳ್ಳಲಾಗಿದೆ ಎಂದರು.
ರಾಮ್ ರಹೀಮ್ ನಗರದ ಆಸುಪಾಸಿನ ಹಲವು ಕಡೆಗಳಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡಲಾಗುತ್ತಿದೆ ಎಂದು ದೂರು ಸಾರ್ವಜನಿಕರಿಂದಲೂ ಕೇಳಿ ಬಂದಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ಸ್ಥಳೀಯ ಪೊಲೀಸರಿಗೆ ಕಟ್ಟು ನಿಟ್ಟಿನ ಸೂಚನೆ ನೀಡಲಾಗಿದೆ ಎಂದರು.ಕಳೆದ 6 ತಿಂಗಳಿಂದೀಚೆಗೆ ಅಕ್ರಮ ಮದ್ಯ ಮಾರಾಟ ಸಂಬಂಧ 414 ಪ್ರಕರಣ ದಾಖಲು ಮಾಡಿದ್ದೇವೆ. 80ಕ್ಕೂ ಅಧಿಕ ಡ್ರಗ್ಸ್ ಪೆಡ್ಲರ್‌ಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದರು.
ಇತ್ತೀಚೆಗೆ ಹೆದ್ದಾರಿಯಲ್ಲಿ ವಾಹನ ಸವಾರರ ಮೇಲೆ ಹಲ್ಲೆ ಪ್ರಕರಣ ಹಿನ್ನೆಲೆಯಲ್ಲಿ ಹೆಚ್ಚಿನ ಗಸ್ತು ವಾಹನವನ್ನು ಮತ್ತಷ್ಟು ಸಕ್ರಿಯಗೊಳಿಸುವುದು ಸೇರಿದಂತೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.ನಗರದ ಪೊಲೀಸ್ ಠಾಣೆಯಲ್ಲಿ ಹಲವು ತಿಂಗಳಿನಿಂದ ಲ್ಯಾಂಡ್ ಲೈನ್ ದೂರವಾಣಿ ಸಂಪರ್ಕ ಇಲ್ಲದಿರುವುದರಿಂದ ದೂರು ನೀಡಲು ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಪ್ರತ್ಯೇಕ ಮಹಿಳಾ ಕೊಠಡಿ ಇಲ್ಲ. ಮಹಿಳೆಯರ ದೂರುಗಳನ್ನು ಮಹಿಳಾ ಪೊಲೀಸರು ವಿಚಾರಣೆ ನಡೆಸಬೇಕೆಂದು ಸಭೆಯಲ್ಲಿ ಸಾರ್ವಜನಿಕರೊಬ್ಬರು ಆರೋಪಿಸಿದರು. ಇದಕ್ಕೆ ಎಸ್ಪಿಯವರು ಸಿಪಿಐ ನವೀನ್ ಕುಮಾರ್ ಅವರಿಂದ ಮಾಹಿತಿ ಪಡೆದು ಅಗತ್ಯ ಕ್ರಮ ಕೈಗೊಳ್ಳಲು ಸೂಚನೆ ನೀಡಿದರು.
ದಸಂಸ ಸಂಚಾಲಕ ಆನಂದ್ ಮಾತನಾಡಿ, ನಗರದ ಚನ್ನೇಗೌಡ ಬಡಾವಣೆ, ರಾಂ ರಹಿಂ ನಗರ, ಸಿದ್ಧಾರ್ಥ ನಗರಗಳಲ್ಲಿ ಈಗಾಗಲೇ ಕಳೆದ ವರ್ಷ ಕೋಮು ಗಲಭೆ ನಡೆದು ರಾಜ್ಯ ಮಟ್ಟದಲ್ಲಿ ಸುದ್ದಿಯಾಗಿದೆ. ಅತಿ ಸೂಕ್ಷ್ಮದಲ್ಲಿ ಅಕ್ರಮ ಮದ್ಯ ಮಾರಾಟ ಹಾಗೂ ಚಟುವಟಿಕೆಗಳು ಎಗ್ಗಿಲ್ಲದೇ ನಡೆಯುತ್ತಿದೆ ಎಂದರು.ಮಧ್ಯರಾತ್ರಿವರೆಗೂ ಪೆಟ್ಟಿ ಅಂಗಡಿಗಳಲ್ಲಿ ಮದ್ಯ ಮಾರಾಟದಿಂದ ಅಹಿತಕರ ಘಟನೆಗಳು ಆಗಿಂದಾಗ್ಗೆ ಜರುಗುತ್ತಿವೆ. ನಗರದಲ್ಲಿ ಸೂಕ್ತ ಪೊಲೀಸ್ ಚೌಕಿ ನಿರ್ಮಿಸಬೇಕು. ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಪೊಲೀಸರು ಹೆಚ್ಚಿನ ನಿಗಾ ಇಡಬೇಕು ಎಂದು ಮುಖಂಡ ವಿಜೇಂದ್ರ ಕುಮಾರ್ ಮನವಿ ಮಾಡಿದರು.
ಈ ಕುರಿತು ಸಿಪಿಐ ನವೀನ್ ಮಾತನಾಡಿ, ನಗರದ ಅತ್ಯಂತ ಸೂಕ್ಷ್ಮ ಪ್ರದೇಶವಾಗಿರುವ ರಾಂ ರಹೀಂ ನಗರ, ಚನ್ನೇಗೌಡ ಬಡಾವಣೆ, ಸಿದ್ಧಾರ್ಥ ನಗರ ಈ ಮೂರು ಬಡಾವಣೆಗಳ ಮೇಲೆ ನಿಗಾ ಇಡಲು ಪ್ರತ್ಯೇಕ ವಜ್ರ ಪೊಲೀಸರನ್ನು ನಿಯೋಜಿಸಲಾಗಿದೆ. ಅವರು ದಿನದ 24 ಗಂಟೆಯೂ ಗಸ್ತಿನಲ್ಲಿರುತ್ತಾರೆ. ಯಾವುದೇ ಸಮಸ್ಯೆ ಘಟಿಸಿದರೂ ತಕ್ಷಣಕ್ಕೆ ಸ್ಪಂದಿಸುತ್ತಾರೆ ಎಂದರು.ಇನ್ನು ನಗರದ ಪ್ರವಾಸಿ ಮಂದಿರ, ಕೊಲ್ಲಿ ವೃತ್ತ, ಕೊಪ್ಪ ವೃತ್ತ ಹಾಗೂ ತಿಮ್ಮದಾಸ್ ಹೋಟೆಲ್ ವೃತ್ತಗಳಲ್ಲಿ ಸಿಗ್ನಲ್ ದೀಪಗಳ ಇರದೆ ಸಾಕಷ್ಟು ಅಪಘಾತಗಳು ಸಂಭವಿಸುತ್ತಿದ್ದು, ಆದಷ್ಟು ಬೇಗ ಸಿಗ್ನಲ್ ದೀಪಗಳನ್ನು ಅಳವಡಿಸುವಂತೆ ಸಭೆಯಲ್ಲಿ ಮನವಿ ಮಾಡಲಾಯಿತು. ಈಗಾಗಲೇ ಈ ಸಂಬಂಧ ಮೇಲಾಧಿಕಾರಿಗಳಿಗೆ ಮನವಿ ಮಾಡಲಾಗಿದ್ದು, ಇನ್ನು ಕೆಲವು ದಿನಗಳಲ್ಲೆ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಸಭೆಯಲ್ಲಿ ಡಿವೈಎಸ್ಪಿ ಯಶವಂತ್ ಕುಮಾರ್, ಸಿಪಿಐ ನವೀನ್ ಕುಮಾರ್, ನಾರಾಯಣ್, ಸಮಾಜ ಕಲ್ಯಾಣಾಧಿಕಾರಿ ನಾಗರಾಜು. ಮುಖಂಡರಾದ ಚಿದಾನಂದ ಮೂರ್ತಿ, ಮರಳಿಗ ಶಿವರಾಜು, ಮಹದೇವಯ್ಯ, ಮಾದೇಶ, ವೆಂಕಟಾಚಲಯ್ಯ, ರಮಾನಂದ, ಕೃಷ್ಣ, ಮೂರ್ತಿ, ಸಿದ್ದರಾಜು, ರಾಜೇಂದ್ರ ಸೇರಿದಂತೆ ಹಲವರು ಮಾತನಾಡಿದರು.