ಸಾರಾಂಶ
ಕರ್ನಾಟಕವು ಹಿಂದೂಸ್ತಾನಿ ಗಾಯನ ಮತ್ತು ಕರ್ನಾಟಕ ಸಂಗೀತದ ತೊಟ್ಟಿಲಾಗಿದ್ದು, ಸಂಗೀತ ಪ್ರಪಂಚಕ್ಕೆ ಅನೇಕ ಅತ್ಯುತ್ತಮ ಸಾಂಪ್ರದಾಯಿಕ ಸಂಗೀತಗಾರರನ್ನು ನೀಡಿದೆ.
ಕನ್ನಡಪ್ರಭ ವಾರ್ತೆ ಕಲಬುರಗಿ
ಕರ್ನಾಟಕವು ಹಿಂದೂಸ್ತಾನಿ ಗಾಯನ ಮತ್ತು ಕರ್ನಾಟಕ ಸಂಗೀತದ ತೊಟ್ಟಿಲಾಗಿದ್ದು, ಸಂಗೀತ ಪ್ರಪಂಚಕ್ಕೆ ಅನೇಕ ಅತ್ಯುತ್ತಮ ಸಾಂಪ್ರದಾಯಿಕ ಸಂಗೀತಗಾರರನ್ನು ನೀಡಿದೆ ಎಂದು ಖ್ಯಾತ ಹಿಂದೂಸ್ತಾನಿ ಗಾಯಕ ಹಾಗೂ ಕಲಬುರಗಿ ಜಿಲ್ಲೆಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ, ಸಂಗೀತ ವಿಭಾಗದ ಬೋಧಕ ಡಾ. ಸ್ವಪ್ನಿಲ್ ಚಾಪೇಕರ್ ಹೇಳಿದರು.ಶರಣಬಸವ ವಿವಿ ಸಂಗೀತ ವಿಭಾಗ ವತಿಯಿಂದ ಆಯೋಜಿಸಿದ್ದ “ವಿಶ್ವ ಸಂಗೀತ ದಿನಾಚರಣೆ” ಕಾರ್ಯಕ್ರಮದಲ್ಲಿ ಮಾತನಾಡಿದ ಡಾ. ಚಾಪೇಕರ್, ಭಾರತ ರತ್ನ ಪಂಡಿತ್ ಭೀಮಸೇನ್ ಜೋಶಿ, ಪಂಡಿತ್ ಗಂಗೂಬಾಯಿ ಹಾನಗಲ್, ಪಂಡಿತ್ ಮಲ್ಲಿಕಾರ್ಜುನ ಮನ್ಸೂರ್ ಸೇರಿದಂತೆ ಕರ್ನಾಟಕದ ಅನೇಕ ಸಂಗೀತಗಾರರನ್ನು ಹೆಸರಿಸಬಹುದು ಎಂದರು.
ಅನಾದಿ ಕಾಲದಿಂದಲೂ ಸಂಗೀತವು ಸಾರ್ವಜನಿಕ ಜೀವನದಲ್ಲಿ ಪ್ರಮುಖ ಸ್ಥಾನವನ್ನು ಪಡೆದಿದೆ. ದೇಶವನ್ನು ಆಳಿದ ರಾಜರು ಮತ್ತು ಚಕ್ರವರ್ತಿಗಳ ಆಸ್ಥಾನಗಳಲ್ಲಿ ಸಂಗೀತಗಾರರು ಪ್ರಧಾನ ಸ್ಥಾನವನ್ನು ಪಡೆದಿದ್ದರೆಂದು ತಾನಸೇನ್ ಕುರಿತಂತೆ ಅನೇಕ ಕುತೂಹಲದ ಸಂಗತಿಗಳನ್ನು ಪ್ರಸ್ತಾಪಿಸಿದರು.ಪತ್ರಿಕೋದ್ಯಮ ವಿಭಾಗದ ಡೀನ್ ಟಿ ವಿ ಶಿವಾನಂದನ್ ಮಾತನಾಡಿ, ಸಂಗೀತಕ್ಕೆ ಯಾವುದೇ ಅಡೆತಡೆಗಳಿಲ್ಲ, ಗಡಿಗಳಿಲ್ಲ ಮತ್ತು ಸಂಗೀತವನ್ನು ಆನಂದಿಸಲು ಯಾವುದೇ ಭಾಷೆಗಳು ತಿಳಿದಿರಬೇಕಾಗಿಲ್ಲ. ಇವನ್ನೆಲ್ಲ ಮೀರಿ ಪ್ರಪಂಚದಾದ್ಯಂತ ಜನರನ್ನು ಒಂದುಗೂಡಿಸುವ ಒಂದು ಮಾಧ್ಯಮವೆಂದರೆ ಅದು ಸಂಗೀತವೆಂದರು.
ಡಾ. ಚಾಪೇಕರ್ ಅವರು ಸಂಗೀತ ವಿಭಾಗದ ವಿದ್ಯಾರ್ಥಿಗಳಿಗೆ ಹಿಂದೂಸ್ತಾನಿ ಸಂಗೀತದ ಕಛೇರಿಯನ್ನು ಪ್ರಸ್ತುತಪಡಿಸಿದರು. ಸಂಗೀತ ವಿಭಾಗದ ಡೀನ್ ಪ್ರೊ. ರೇವಯ್ಯ ವಸ್ತ್ರದಮಠ ಅಧ್ಯಕ್ಷತೆ ವಹಿಸಿದ್ದರು.