ಸಾರಾಂಶ
- ನ್ಯಾ.ನಾಗಮೋಹನ ದಾಸ್ ಆಯೋಗಕ್ಕೆ ಸಮಾಜದ ಮುಖಂಡ ಮಲ್ಲೇಶ ನಾಯ್ಕ ಒತ್ತಾಯ
- - -ಕನ್ನಡಪ್ರಭ ವಾರ್ತೆ ದಾವಣಗೆರೆ
ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ವರ್ಗೀಕರಣಕ್ಕೆ ರಚಿಸಲಾದ ನ್ಯಾ. ಎಚ್.ಎನ್. ನಾಗಮೋಹನ ದಾಸ್ ಏಕಸದಸ್ಯ ಆಯೋಗ ಕೈಗೊಂಡಿರುವ ಜನಗಣತಿಯಲ್ಲಿ 101 ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿರುವ ಬಂಜಾರ (ಲಂಬಾಣಿ) ಜನರ ಗಣತಿ ಬಗ್ಗೆ ವಿಶೇಷ ಕಾಳಜಿ ವಹಿಸುವ ಜೊತೆಗೆ ಆಯೋಗ, ಸರ್ಕಾರ ದತ್ತಾಂಶ ಸಂಗ್ರಹಿಸಲು ವಿಶೇಷ ಮಾನದಂಡ ಹಾಕಿಕೊಳ್ಳಬೇಕು ಎಂದು ಸಮಾಜದ ಮುಖಂಡ, ವಕೀಲ ಕೆ.ಆರ್. ಮಲ್ಲೇಶ ನಾಯ್ಕ ಒತ್ತಾಯಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ 7 ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠವು ನೀಡಿದ ಪರಿಶಿಷ್ಟ ಜಾತಿಗಳಲ್ಲಿ ಒಳಮೀಸಲಾತಿ ಸಾಧ್ಯ, ಇದು ಸಂವಿಧಾನದ ಅನುಚ್ಚೇದ-14ರಂತೆ ಮಾಡಬಹುದಾಗಿದ್ದು, ಒಳಮೀಸಲಾತಿ ಅಧಿಕಾರ ಆಯಾ ರಾಜ್ಯ ಸರ್ಕಾರಕ್ಕೆ ಇದೆ ಎಂಬ ತೀರ್ಪು ನೀಡಿದೆ ಎಂದರು.
ಮೀಸಲಾತಿ ವರ್ಗೀಕರಣಕ್ಕೂ ಮುಂಚೆ ಜನಗಣತಿ ಮಾಡಿ, ಅದರ ವೈಜ್ಞಾನಿಕ ದತ್ತಾಂಶ ಪಡೆಯುವುದೂ ಮುಖ್ಯ ಎಂದು ಪೀಠ ಹೇಳಿದೆ. ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ತೀರ್ಪಿನ ನಿರ್ದೇಶನದಂತೆ ಪರಿಶಿಷ್ಟ ಜಾತಿಗಳಲ್ಲಿ ಒಳಮೀಸಲಾತಿ ಜಾರಿಗೊಳಿಸಲು ಮುಂದಾಗಿದೆ. ಅದಕ್ಕಾಗಿ ನ್ಯಾ. ಎಚ್.ಎನ್. ನಾಗಮೋಹನ ದಾಸ್ ನೇತೃತ್ವದ ಏಕಸದಸ್ಯ ಆಯೋಗ ರಚಿಸಿದೆ. ಆಯೋಗದಡಿ ಮೇ 5ರಿಂದ ಪರಿಶಿಷ್ಟ ಜಾತಿಗಳ ಜನಗಣತಿ ಮಾಡಿ, ವೈಜ್ಞಾನಿಕ ದತ್ತಾಂಶ ಕಲೆ ಹಾಕಲು ಮುಂದಾಗಿದೆ. ಈ ವೇಳೆ ಸಮಗ್ರ ಮಾಹಿತಿ ನೀಡುವಂತೆ ಮನವಿ ಮಾಡಿದರು.ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರವೇ ತಾವು ಕೆಲಸ ಮಾಡಬೇಕೆಂದು ಆಯೋಗ ಹೇಳಿದೆ. ಶೈಕ್ಷಣಿಕ, ಸರ್ಕಾರಿ ನೌಕರಿ, ಸಾಮಾಜಿಕ, ರಾಜಕೀಯ ಪ್ರಾತಿನಿದ್ಯತೆ ಜೊತೆಗೆ ಭೂ ಒಡೆತನ, ವಸತಿ, ಕಸುಬು, ವರಮಾನ ಸೇರಿದಂತೆ ಹೆಚ್ಚುವರಿ ಮಾಹಿತಿಯೆಂದರೆ ವಿ.ವಿ.ಗಳಲ್ಲಿ ಬೋಧಕ-ಬೋಧಕೇತರ ಸರ್ಕಾರದ-43 ಇಲಾಖೆಗಳು, ನಿಗಮ ಮಂಡಳಿಗಳು, ನಗರ ಸ್ಥಳೀಯ ಸಂಸ್ಥೆಗಳು, ಗ್ರಾಮೀಣ ಸ್ಥಳೀಯ ಸಂಸ್ಥೆಗಳಲ್ಲಿ ವಿವಿಧ ಗುಂಪಿನ ನೌಕರರಲ್ಲಿರುವ ಪರಿಶಿಷ್ಟ ಜಾತಿಯವರ ವಿವರ ಪಡೆಯುವುದಾಗಿದೆ ಎಂದು ಮಲ್ಲೇಶ ನಾಯ್ಕ ತಿಳಿಸಿದರು.
ಗಣತಿ ವೇಳೆ ಕಡೆಗಣಿಸದಿರಿ: ರಾಜ್ಯಾದ್ಯಂತ ಮೇ 5ರಿಂದ 17ರವರೆಗೆ ಮನೆ ಮನೆಗಣತಿ, ಮೇ19ರಿಂದ 21ರವರೆಗೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಶಿಬಿರ ನಡೆಸಿ, ಮಾಹಿತಿ ಸಂಗ್ರಹಿಸಲಾಗುತ್ತದೆ. ಮೇ19ರಿಂದ 23ರವರೆಗೆ ಮೊಬೈಲ್ ಆ್ಯಪ್‌ನಲ್ಲಿ ಸ್ವಯಂ ಮಾಹಿತಿ ದಾಖಲಿಸಲು ಅವಕಾಶವಿದೆ ಎಂದು ಆಯೋಗ ಹೇಳಿಕೊಂಡಿದೆ. ಆಯೋಗದ ಮುಂದೆ ರಾಜ್ಯದ ಬಂಜಾರ (ಲಂಬಾಣಿ) ಜನಾಂಗದ ಪರವಾಗಿ ಮನವಿಯೇನೆಂದರೆ, ನಮ್ಮ ಸಮುದಾಯದ ಜನರ ಹಿಂದುಳಿದಿದ್ದಾರೆ. ಅವರನ್ನು ಗಣತಿ ವೇಳೆ ಕಡೆಗಣಿಸಬಾರದು ಎಂದರು.ರಾಜ್ಯದ ಅನೇಕ ಜಿಲ್ಲೆಗಳ ತಾಂಡಾಗಳಿಂದ ಜೀವನೋಪಾಯಕ್ಕಾಗಿ ಕಾಫಿತೋಟ, ಘಟ್ಟ ಪ್ರದೇಶ, ದೊಡ್ಡ ದೊಡ್ಡ ನಗರ, ಮಹಾನಗರ, ಕಬ್ಬು ಕಡೆಯಲು, ಗೋವಾ, ಮಹಾರಾಷ್ಟ್ರ ಸೇರಿದಂತೆ ಅನ್ಯ ಜಿಲ್ಲೆಗಳಿಗೆ ಕೂಲಿ ಕೆಲಸಗಳಿಗೆ ಗುಳೆ ಹೋಗಿದ್ದಾರೆ. ಪರಿಣಾಮ ದತ್ತಾಂಶ ಸಂಗ್ರಹಿಸುವುದು ಸರಿಯಾಗಿ ಆಗದಿರುವ ಬಗ್ಗೆ ಈ ಜನಾಂಗದ ಸಂಘಟನಗಳಿಗೆ, ನಾಯಕರಿಗೆ ಆತಂಕ ಇದೆ. ಈ ಹಿನ್ನೆಲೆ ವಿಶೇಷ ಗಮನ ನೀಡಿ, ಯಾರನ್ನೂ ಬಿಡದಂತೆ ಜನಗಣತಿ ಮಾಡಿ, ದತ್ತಾಂಶ ಸಂಗ್ರಹಿಸಲು ಏನಾದರೂ ವಿಶೇಷ ಮಾನದಂಡಗಳನ್ನು ಆಯೋಗ ಹಾಕಿಕೊಳ್ಳಬೇಕು ಎಂದು ಮಲ್ಲೇಶ ನಾಯ್ಕ ಮನವಿ ಮಾಡಿದರು.
ಸಮಾಜದ ಮುಖಂಡರಾದ ಮಾರುತಿ ರಾಥೋಡ್, ಪರಸಪ್ಪ, ಗಣೇಶ ನಾಯ್ಕ, ಅಂಜುನಾಯ್ಕ, ಪ್ರಸನ್ನ ಇದ್ದರು.- - -
-5ಕೆಡಿವಿಜಿ9.ಜೆಪಿಜಿ:ದಾವಣಗೆರೆಯಲ್ಲಿ ಲಂಬಾಣಿ ಸಮಾಜದ ಮುಖಂಡ, ವಕೀಲ ಕೆ.ಆರ್.ಮಲ್ಲೇಶ ನಾಯ್ಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.