ಸಾರಾಂಶ
ಸಾಗರ ತಾಲೂಕಿನ ನೀನಾಸಂನಲ್ಲಿ ಆಯೋಜಿಲಾಗಿದ್ದ ‘ಕಲೆಗಳ ಸಂಗಡ ಮಾತುಕತೆ’ ಕಾರ್ಯಕ್ರಮದ ಸಮಾರೋಪದಲ್ಲಿ ಮುಂಬೈನ ಹಿರಿಯ ರಂಗಕರ್ಮಿ ಸುನಿಲ್ ಶಾನಭಾಗ್ ಭಾಗವಹಿಸಿ, ಹೊಸ ತಲೆಮಾರಿನ ಕಲಾವಿದರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಿಕೊಡಬೇಕು ಎಂದು ಸಲಹೆಯಿತ್ತರು.
ಕನ್ನಡಪ್ರಭ ವಾರ್ತೆ ಸಾಗರ
ಅನಿಶ್ಚಿತತೆ, ಹಣಕಾಸಿನ ನೆರವಿಲ್ಲದೆ ಥಿಯೇಟರ್ಗಳತ್ತ ಬರುತ್ತಿರುವ ಸುಶಿಕ್ಷಿತ ಯುವ ಜನತೆಯನ್ನು ಕಾಪಾಡಿಕೊಳ್ಳುವುದು, ಅವರಿಗೆ ಸೂಕ್ತ ಅವಕಾಶ ಕಲ್ಪಿಸಿಕೊಡುವುದು ಇವತ್ತಿನ ಅಗತ್ಯವಾಗಿದೆ ಎಂದು ಮುಂಬೈನ ಹಿರಿಯ ರಂಗಕರ್ಮಿ ಸುನಿಲ್ ಶಾನಭಾಗ್ ಅಭಿಪ್ರಾಯಪಟ್ಟರು.ತಾಲೂಕಿನ ನೀನಾಸಂನಲ್ಲಿ ಆಯೋಜಿಲಾಗಿದ್ದ ಕಲೆಗಳ ಸಂಗಡ ಮಾತುಕತೆ ಕಾರ್ಯಕ್ರಮದ ಸಮಾರೋಪದಲ್ಲಿ ಮಾತನಾಡಿದ ಅವರು, ಹೊಸ ತಲೆಮಾರು ವಿನೂತನ ಆಲೋಚನೆಗಳೊಂದಿಗೆ ಬರುತ್ತಿದ್ದಾರೆ. ಪ್ರೇಕ್ಷಕರಿಗೆ ಹೊಸತನ್ನು ಕಟ್ಟಿಕೊಡಲು ಶ್ರಮಿಸುತ್ತಿದ್ದಾರೆ. ಅದಕ್ಕೆ ವೇದಿಕೆ ಒದಗಿಸುವುದು, ಇಲ್ಲಿನ ಅಸಹಾಯಕತೆಗಳ ಹೊರತಾಗಿಯೂ ಅವರನ್ನು ಉಳಿಸಿ, ಬೆಳೆಸುವುದು ಹಿರಿಯರ ಆದ್ಯತೆಯಾಗಬೇಕು ಎಂದರು.
ಗುಣಮಟ್ಟದ ಆಲೋಚನೆಯ ಕೆಲಸಗಳಿಗೆ ದೇಶದಲ್ಲಿ ವೇದಿಕೆಗಳಿವೆ. ಹೊಸ ತಲೆಮಾರಿನ ಕಲಾವಿದರು ನಾಟಕ ಕ್ಷೇತ್ರಕ್ಕೆ ಆಸಕ್ತಿಯಿಂದ ಬರುತ್ತಿದ್ದು, ಅಂಥವರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಿಕೊಡಬೇಕು. ಥಿಯೇಟರ್ ಕೂಡ ಒಟ್ಟಾರೆ ಜೀವನ ಆಗಿದೆ ಎನ್ನುವಂತೆ ಕಟ್ಟಿಕೊಡುವುದು ನಮ್ಮ ಜವಾಬ್ದಾರಿ ಎಂದ ಅವರು, ನಾಟಕ ವೀಕ್ಷಿಸುವ ಜನರಿಂದ ಕಲಿಯುವುದು ಸಾಕಷ್ಟಿರುತ್ತದೆ. ಅದಕ್ಕಾಗಿ ಸಣ್ಣ ಜಾಗದಲ್ಲಿ (ರೆಸಿಡೆನ್ಸ್ ಥಿಯೇಟರ್) ನಡೆಯುವ ನಾಟಕದಿಂದ ನಮ್ಮ ವೀಕ್ಷಕರು ಯಾರು, ಅವರ ಬೇಡಿಕೆಗಳೇನು? ಅವರ ಪ್ರತಿಸ್ಪಂದನೆ ಗಳೇನು? ಎನ್ನುವುದನ್ನು ಅರಿಯಲು ಸಹಕಾರಿಯಾಗುತ್ತದೆ ಎಂದರು.ಯುವ ಸಮುದಾಯ ಸಣ್ಣಸಣ್ಣ ನಾಟಕದ ತಂಡಗಳಿಗೆ ಸೇರಿಕೊಳ್ಳುತ್ತಿದ್ದಾರೆ. ಮುಂಬೈನಲ್ಲಿ ತಿಂಗಳಿಗೆ ೫ ಭಾಷೆಯ ೧೫೦೦ಕ್ಕೂ ಹೆಚ್ಚು ನಾಟಕಗಳು ನಡೆಯುತ್ತವೆ. ದೇಶದ ಹಲವೆಡೆ ಜನಿಸಿರುವ ಇಂಥ ರೆಸಿಡೆನ್ಸ್ ಥಿಯೇಟರ್‌ನತ್ತ ಬರುತ್ತಿರುವವರ ಸಂಖ್ಯೆಯೂ ಅಧಿಕವಾಗಿದೆ. ಡಿಜಿಟಲ್ ವ್ಯವಸ್ಥೆಯೂ ದೇಶದ ನಾಟಕ ಕ್ಷೇತ್ರದ ಬೆಳವಣಿಗೆಗೆ ಪ್ರಮುಖ ಕೊಡುಗೆ ನೀಡುತ್ತಿವೆ ಎಂದು ವಿಶ್ಲೇಷಿಸಿದರು.
ಸಂಸ್ಥೆಯ ಅಧ್ಯಕ್ಷ ಸಿದ್ಧಾರ್ಥ ಭಟ್, ಕಾರ್ಯದರ್ಶಿ ಶರತ್ ಬಾಬು, ಕೆ.ವಿ.ಅಕ್ಷರ, ಟಿ.ಪಿ.ಅಶೋಕ, ಜಸವಂತ ಜಾಧವ್, ಜಯಂತ್ ಕಾಯ್ಕಿಣಿ, ವೆಂಕಟರಮಣ ಐತಾಳ, ಎಂ. ಗಣೇಶ ಮೊದಲಾದವರು ಉಪಸ್ಥಿತರಿದ್ದರು.