ಮಕ್ಕಳಿಗೆ ಸಕಾರಾತ್ಮಕ ವಾತಾವರಣ ಸೃಷ್ಟಿಸಿ: ಆರ್.ಬಿ. ತಿಮ್ಮಾಪೂರ

| Published : Nov 12 2025, 03:15 AM IST

ಮಕ್ಕಳಿಗೆ ಸಕಾರಾತ್ಮಕ ವಾತಾವರಣ ಸೃಷ್ಟಿಸಿ: ಆರ್.ಬಿ. ತಿಮ್ಮಾಪೂರ
Share this Article
  • FB
  • TW
  • Linkdin
  • Email

ಸಾರಾಂಶ

ಲೋಕಾಪುರ ಸಮೀಪದ ದಾದನಟ್ಟಿ ಗ್ರಾಮದಲ್ಲಿ ಬಸವೇಶ್ವರ ಗ್ರಾಮೀಣ ವಿದ್ಯಾವರ್ಧಕ ಸಂಘದ ನೂತನ ಶಾಲಾ ಕೊಠಡಿಗಳು, ಆದಿಗುರು ಶಂಕರಾಚಾರ್ಯ ಸಭಾಭವನ ಮತ್ತು ಶ್ರೀ ಸಿದ್ದೇಶ್ವರ ಬಯಲು ರಂಗಮಂದಿರವನ್ನು ಸಚಿವ ಆರ್‌.ಬಿ. ತಿಮ್ಮಾಪೂರ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಲೋಕಾಪುರ

ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಲು ಪೋಷಕರು ಚಿಕ್ಕಂದಿನಿಂದಲೇ ಮನೆಯಲ್ಲಿ ಸಕಾರಾತ್ಮಕ ವಾತಾವರಣ ಸೃಷ್ಟಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಸಲಹೆ ನೀಡಿದರು.

ಸಮೀಪದ ದಾದನಟ್ಟಿ ಗ್ರಾಮದಲ್ಲಿ ಬಸವೇಶ್ವರ ಗ್ರಾಮೀಣ ವಿದ್ಯಾವರ್ಧಕ ಸಂಘದ ನೂತನ ಶಾಲಾ ಕೊಠಡಿಗಳು, ಆದಿಗುರು ಶಂಕರಾಚಾರ್ಯ ಸಭಾಭವನ ಮತ್ತು ಶ್ರೀ ಸಿದ್ದೇಶ್ವರ ಬಯಲು ರಂಗಮಂದಿರ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಪೋಷಕರು ಮಕ್ಕಳಿಗೆ ಮಾದರಿಯಾಗಿರಬೇಕು. ಪ್ರಾಮಾಣಿಕತೆ, ಸ್ನೇಹ, ಗೌರವ ಮುಂತಾದ ಸದ್ಗುಣಗಳನ್ನು ಮಕ್ಕಳಿಗೆ ಕಲಿಸಬೇಕು. ಕುಟುಂಬದ ಹಿರಿಯರೊಂದಿಗೆ ಉತ್ತಮ ಸಂಬಂಧ ಕಾಯ್ದುಕೊಳ್ಳುವುದು, ಸಾಮರ್ಥ್ಯ, ಹೊಂದಾಣಿಕೆ ಮತ್ತು ಸಂಬಂಧಗಳನ್ನು ಬೆಳೆಸುವುದು ಮುಖ್ಯವಾಗಿದೆ. ಮಕ್ಕಳ ಭೋಜನಾಲಯ ಕಟ್ಟಡಕ್ಕೆ ₹೨೦ ಲಕ್ಷ ಅನುದಾನ ನೀಡುವುದಾಗಿ ಭರವಸೆ ನೀಡಿದರು.

ಮಾಜಿ ಉಪಮುಖ್ಯಮಂತ್ರಿ ಹಾಗೂ ಚಿತ್ರದುರ್ಗ ಸಂಸದ ಗೋವಿಂದ ಎಂ. ಕಾರಜೋಳ ಮಾತನಾಡಿ, ಗ್ರಾಮೀಣ ಭಾರತ, ನಿಜವಾದ ಭಾರತ ಎನ್ನುತ್ತೇವೆ. ಗ್ರಾಮೀಣ ಶಿಕ್ಷಣ ಬಲಪಡಿಸುವುದು ಗ್ರಾಮೀಣ ಅಭಿವೃದ್ಧಿಯ ಪ್ರಮುಖ ಅಂಶಗಳಲ್ಲಿ ಒಂದಾಗಿದೆ. ಕೇಂದ್ರ ಸರ್ಕಾರ ಸರಕಾರಿ ಶಾಲೆಗಳ ಮೂಲಕ ಗುಣಮಟ್ಟದ ಗ್ರಾಮೀಣ ಶಿಕ್ಷಣ ನೀಡಲು ಪ್ರಯತ್ನ ಮಾಡುತ್ತಿವೆ. ನಾನಾ ಕಾರಣಗಳಿಂದ ಇಂದಿನ ದಿನಗಳಲ್ಲಿ ಸರಕಾರಿ ಶಾಲೆಗಳಿಗೆ ಹೋಗುವ ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣಿಸುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ವಿಧಾನ ಪರಿಷತ್‌ ಸದಸ್ಯ ಪಿ.ಎಚ್. ಪೂಜಾರ ಮಾತನಾಡಿ, ದಾದನಟ್ಟಿ ಗ್ರಾಮಕ್ಕೆ ನನಗೂ ಅವಿನಭಾವ ಸಂಬಂಧ ಇದೆ. ಗ್ರಾಮದ ಬಗ್ಗೆ ಅಪಾರ ಪ್ರೀತಿ ಇದೆ. ಗ್ರಾಮೀಣ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ, ಪ್ರತಿಭೆಗಳು ಸಿಗುವುದೇ ಗ್ರಾಮೀಣ ಭಾಗದಲ್ಲಿ. ಪಾಲಕರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಪ್ರೋತ್ಸಾಹಿಸಬೇಕು ಎಂದರು.

ಬಸವೇಶ್ವರ ಗ್ರಾಮೀಣ ವಿದ್ಯಾವರ್ಧಕ ಸಂಘದ ನೂತನ ಅಧ್ಯಕ್ಷ ವೆಂಕಣ್ಣ ಕಮಕೇರಿ, ಉಪಾಧ್ಯಕ್ಷ ರಾಮಪ್ಪ ತುಬಾಕಿ, ಕಾರ್ಯದರ್ಶಿ ಶೇಷನಗೌಡ ಪಾಟೀಲ ಅವರನ್ನು ಸಚಿವ ಆರ್.ಬಿ. ತಿಮ್ಮಾಪೂರ ಅವರು ಸನ್ಮಾನಿಸಿದರು. ತೊಂಡಿಕಟ್ಟಿ ಅವಧೂತ ಗಾಳೇಶ್ವರಮಠದ ಸದ್ಗುರ ವೆಂಕಟೇಶ ಮಹಾರಾಜರು, ಶಿವಾನಂದ ಆಶ್ರಮದ ಸದ್ಗುರು ನಿಜಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಂಸ್ಥೆಯ ಅಧ್ಯಕ್ಷ ಮಲ್ಲನಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಗ್ರಾಪಂ ಅಧ್ಯಕ್ಷ ಶೇಷವ್ವ ದಾಸರ, ನಿವೃತ್ತ ಪ್ರಾಚಾರ್ಯ ಎಸ್.ಬಿ. ಕೃಷ್ಣಗೌಡರ, ಬಿ.ವಿ. ಹಲಕಿ, ಎಲ್.ಜಿ. ಕೊಪ್ಪದ, ಕಾಶಿನಾಥ ಹುಡೇದ, ಲೋಕಣ್ಣ ಕತ್ತಿ, ಎಸ್.ಆರ್. ಯಾದವಾಡ, ಎ.ಡಿ. ಸಂಗನ್ನವರ, ಮಾಜಿ ಜಿಪಂ ಅಧ್ಯಕ್ಷ ಶಿವಕುಮಾರ ಮಲಘಾಣ, ಸಂಗನಗೌಡ ಕಾತರಕಿ ಇತರರು ಇದ್ದರು.

ಜನಪದ ಕಲೆಯಲ್ಲಿ ಅಪಾರ ಸೇವೆ ಸಲ್ಲಿಸಿದ ಕಾಶಿಬಾಯಿ ದಾದನಟ್ಟಿ, ಮಲ್ಲಿಕಾರ್ಜುನ ಮುದಕವಿ, ನಾರಾಯಣ ಪತ್ತಾರ, ಸಿದ್ದಪ್ಪ ಕುರಿ, ಚಿದಾನಂದ ಕಾಡಪ್ಪನವರ ಹಾಗೂ ಪ್ರತಿಭಾವಂತ ವಿದ್ಯಾರ್ಥಿ-ವಿದ್ಯಾರ್ಥಿನಿಯರನ್ನು ಸನ್ಮಾನಿಸಲಾಯಿತು. ಈ ವೇಳೆ ದಾದನಟ್ಟಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಶಾಲಾ ಆಡಳಿತ ಮಂಡಳಿ, ಸಿಬ್ಬಂದಿ ಇದ್ದರು.