ಸಾರಾಂಶ
ಶಿರಹಟ್ಟಿ: ವಿದ್ಯಾರ್ಹತೆ ಮತ್ತು ಪಾಲಕರ ಇಚ್ಛೆಯಂತೆ ಸರ್ಕಾರಿ ನೌಕರಿ ಸಿಗುವುದು ದುರ್ಲಭ. ಸರ್ಕಾರ ಮತ್ತು ಖಾಸಗಿ ಕಂಪನಿಯವರು ಹತ್ತಾರು ಹೊಸ ಯೋಜನೆಗಳನ್ನು ಜಾರಿಗೆ ತರುತ್ತಿದ್ದು, ತಂತ್ರಜ್ಞಾನ ಬದಲಾದಂತೆ ಎಲ್ಲ ರಂಗದಲ್ಲಿಯು ಬದಲಾವಣೆ ಕಾಣುತ್ತಿದ್ದು, ಸಹಾಯಧನಕ್ಕಾಗಿ ಸ್ವ ಉದ್ಯೋಗ ಕೈಗೊಳ್ಳದೆ ನಮ್ಮ ಅಭಿವೃದ್ಧಿಗಾಗಿ ಉದ್ಯೋಗ ಆರಂಭಿಸಬೇಕು ಎಂದು ತಹಸೀಲ್ದಾರ್ ಅನಿಲ ಬಡಿಗೇರ ಹೇಳಿದರು.
ಕೇಂದ್ರ ಸರ್ಕಾರದ ಜವಳಿ ಮಂತ್ರಾಲಯದ ಸಮರ್ಥ ಯೋಜನೆ ಹಾಗೂ ಆಸರೆ ಕೌಶಲ್ಯಾಭಿವೃದ್ಧಿ ತರಬೇತಿ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ನಡೆಯುತ್ತಿರುವ ಉಚಿತ ತರಬೇತಿ ಕಾರ್ಯಕ್ರಮದಡಿ ಪೂರೈಸಲಾದ ಉಚಿತ ಕಲಿಕಾ ಕಿಟ್ ವಿತರಿಸಿ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.ಕೌಶಲ್ಯ ಕೇಂದ್ರಗಳ ಮೂಲಕ ತರಬೇತಿ ಹಾಗೂ ನುರಿತ ಶಿಕ್ಷಣ ತಜ್ಞರಿಂದ ಶಿಕ್ಷಣ ಪಡೆಯುವ ಮೂಲಕ ಮಹಿಳೆಯರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಸಾಧ್ಯವಿದೆ. ಸಮಾಜದಲ್ಲಿ ತಲೆದೋರಿದ ನಿರುದ್ಯೋಗ ಸಮಸ್ಯೆಯನ್ನು ಹೊಡೆದೋಡಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮಹಿಳೆಯರನ್ನು ಸ್ವಾವಲಂಬಿಗಳಾಗಿಸಲು ವಿವಿಧ ಕೌಶಲ್ಯ ತರಬೇತಿಗಳನ್ನು ಅನುಷ್ಠಾನಗೊಳಿಸುತ್ತಿದ್ದು, ಎಲ್ಲರೂ ನಿಮ್ಮ ಕುಟುಂಬಗಳ ನಿರ್ವಹಣೆಗಾಗಿ ವಿವಿಧ ಕೌಶಲ್ಯಗಳನ್ನು ಹೊಂದಿ ಸ್ವಾವಲಂಬಿ ಜೀವನ ನಡೆಸಿ ಎಂದು ಕರೆ ನೀಡಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರದಡಿ ವಿವಿಧ ಕೌಶಲ್ಯ ಅಭಿವೃದ್ಧಿ ಯೋಜನೆ ಕಾರ್ಯಕ್ರಮಗಳು ಗುಣಮಟ್ಟದ ಶಿಕ್ಷಣ ಮತ್ತು ವೃತ್ತಿಪರ ಕೌಶಲ್ಯಗಳನ್ನು ಒದಗಿಸುವುದಾಗಿದ್ದು, ಈ ಮೂಲಕ ಎಲ್ಲ ಕೌಶಲ್ಯಗಳನ್ನು ಪಡೆದು ಬಡ, ದುರ್ಬಲ ಮತ್ತು ಹಿಂದುಳಿದ ಕುಟುಂಬಗಳು ಮುಖ್ಯವಾಹಿನಿಗೆ ಬರಲು ಸಾಧ್ಯ ಎಂದು ಹೇಳಿದರು. ವಿದ್ಯಾವಂತರು, ಪದವೀಧರರು, ವೈದ್ಯರು ಕೂಡ ಆಧುನಿಕ ಯುಗದಲ್ಲಿ ಉದ್ಯಮಿಗಳಾಗಿದ್ದು, ಬೇಸಾಯ ಮಾಡುತ್ತಿದ್ದಾರೆ. ವಿದ್ಯಾವಂತರು ಶ್ರೇಷ್ಠವಾದ ವಿಚಾರದೊಂದಿಗೆ ಸಂಕಲ್ಪ ಮಾಡಿ ಒಳ್ಳೆಯ ನಿರ್ಧಾರ ತೆಗೆದುಕೊಂಡು ಉದ್ಯೋಗ ಸೃಷ್ಟಿಗೆ ಮುಂದಾಗುವ ವ್ಯಕ್ತಿಗಳಾಗಬೇಕು ಎಂದು ಸಲಹೆ ನೀಡಿದರು.ಸರ್ಕಾರಿ ನೌಕರಿಗಾಗಿ ಅಲಿಯದೆ ಸ್ವಉದ್ಯೋಗದತ್ತ ಹೆಜ್ಜೆಯಿಡಿ. ಗ್ರಾಮೀಣ ಪ್ರದೇಶದಿಂದ ಬಂದಂತಹ ವಿದ್ಯಾರ್ಥಿಗಳು ಸ್ವ ಉದ್ಯೋಗ ಕೈಗೊಳ್ಳಲು ಮುಂದೆ ಬರುತ್ತಿಲ್ಲ. ಭವಿಷ್ಯದ ವೃತ್ತಿ ಜೀವನದ ಕುರಿತು ಅರಿತುಕೊಂಡು ಕಲಿಕೆ ಹಂತ ಮುಗಿದ ನಂತರ ಸ್ವ ಉದ್ಯೋಗ ಕೈಗೊಳ್ಳುವುದರ ಜತೆಗೆ ಯಶಸ್ವಿ ಉದ್ಯಮಶೀಲರಾಗಬೇಕು ಎಂದು ತಿಳಿಸಿದರು. ಭಾರತದ ಯಶಸ್ವಿ ಉದ್ಯಮಶೀಲರಾದ ಸುಧಾ ಮುರ್ತಿ, ಧೀರುಭಾಯಿ ಅಂಬಾನಿ, ಲಕ್ಷ್ಮೀ ಮಿತ್ತಲ, ಡಾ. ಕರಸನ್ ಪಟೇಲ್ ಉದ್ಯೋಗಸ್ಥರಾಗುವುದರ ಜತೆಗೆ ಉದ್ಯೋಗ ನೀಡುವಂತಹ ನಿಟ್ಟಿನಲ್ಲಿ ಬೆಳೆದರು. ಸ್ಪರ್ಧಾತ್ಮಕ ಯುಗದಲ್ಲಿ ಕಾಲ ಕಳೆಯುತ್ತಿದ್ದು, ಉದ್ಯಮಶೀಲತಾ ಗುಣ ಹೊಂದಬೇಕು.
ದಿಧೀರನೆ ಶ್ರೀಮಂತರಾಗುವ ಉದ್ದೇಶ ಇಟ್ಟುಕೊಂಡು ಉದ್ಯೋಗ ಆರಂಭಿಸದೇ ಇಚ್ಛಾಶಕ್ತಿಯೊಂದಿಗೆ ಸಂಯಮ, ಶ್ರದ್ಧೆಯಿಂದ ಸಣ್ಣ, ಅತಿ ಸಣ್ಣ ಉದ್ಯೋಗ ಕೈಗೊಳ್ಳಲು ಸಾಕಷ್ಟು ಹಣಕಾಸಿನ ನೆರವು ಸಿಗುತ್ತಿದ್ದು ಇದರ ಸದುಪಯೋಗಪಡೆದುಕೊಳ್ಳಬೇಕು ಎಂದು ತಿಳಿಸಿದರು.ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಶರಣಯ್ಯ ಕುಲಕರ್ಣಿ ಮಾತನಾಡಿ, ವಿದ್ಯಾವಂತ, ಪದವೀಧರರು ನಂಬಿಕೆ ಜತೆಗೆ ಸಂಘಟನಾ ಶಕ್ತಿಯನ್ನು ಬೆಳೆಸಿಕೊಳ್ಳಬೇಕು. ಅವಶ್ಯಕತೆಗೆ ಅನುಗುಣವಾಗಿ ವೃತ್ತಿ ಕೈಗೊಂಡು ಬದುಕುವುದನ್ನು ಕಲಿಯುವುದರ ಜತೆಗೆ ಉದ್ಯಮಶೀಲತೆಗೆ ಬೇಕಾದಂತಹ ತಾಂತ್ರಿಕ ಜ್ಞಾನ ಕೌಶಲ್ಯ, ಗುಣಮಟ್ಟ ಆರ್ಥಿಕ ಜ್ಞಾನವನ್ನು ಅರ್ಥೈಸಿಕೊಳ್ಳಿ ಎಂದು ಹೇಳಿದರು.
ಭಾರತ ದೇಶ ಅಭಿವೃದ್ಧಿ ಹೊಂದುತ್ತಿರುವ ದೇಶವಾಗಿದೆ. ಮಹಿಳೆಯರು, ಸ್ವ-ಉದ್ಯೋಗ ಕೆಲಸದಲ್ಲಿ ಹೆಚ್ಚು ಗಮನ ನೀಡಿದರೆ ದೇಶಕ್ಕೆ ಒಳ್ಳೆಯ ಕೊಡುಗೆ ನೀಡಬಹುದು. ಎಲ್ಲದರ ಸದುಪಯೋಗಪಡೆದುಕೊಳ್ಳಬೇಕು ಎಂದರು.ಒಂದು ಸಮಾಜ ಉತ್ತಮ ರೀತಿಯಲ್ಲಿ ಅಭಿವೃದ್ಧಿ ಹೊಂದಬೇಕಾದರೆ ಮಹಿಳೆಯರಿಗೆ ಮೊದಲು ಸುಶಿಕ್ಷಿತವಾದ ಶಿಕ್ಷಣ ಹಾಗೂ ವಿವಿಧ ಕೌಶಲ್ಯಗಳನ್ನು ಹೊಂದಬೇಕು. ಅಂದಾಗ ಮಾತ್ರ ಉತ್ತಮ ಸಮಾಜ ನಿರ್ಮಾಣವಾಗಲು ಸಾಧ್ಯ. ಆದ್ದರಿಂದ ಪ್ರತಿಯೊಬ್ಬರೂ ವಿವಿಧ ಕೌಶಲ್ಯಗಳನ್ನು ಹೊಂದಿ ಅತ್ಯುತ್ತಮ ಸಮಾಜ ಹಾಗೂ ಉತ್ತಮ ಕುಟುಂಬದ ಆರ್ಥಿಕ ನಿರ್ವಹಣೆ ಮಾಡಿಕೊಳ್ಳಿ ಎಂದರು.
ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಮುತ್ತಣ್ಣ ಸಂಕನೂರ, ಸಂಸ್ಥೆಯ ಕಾರ್ಯದರ್ಶಿ ಶಶಿಧರ ಶಿರಸಂಗಿ, ಸಂಸ್ಥೆಯ ಶಿಬಿರಾರ್ಥಿಗಳು, ಶಿಕ್ಷಕಿಯರ ವೃಂದ ಉಪಸ್ಥಿತರಿದ್ದರು.