ಪ್ರತಿಭೆ ಎನ್ನುವುದು ಪ್ರತಿಯೊಂದು ಮಗುವಿನಲ್ಲೂ ಇರುತ್ತದೆ. ಅದನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸವಾಗಬೇಕಿದೆ. ಮನೆಯಲ್ಲಿ ಪೋಷಕರು ಸಹ ಮಕ್ಕಳ ಆಸಕ್ತಿ ಇರುವ ಕಡೆಗೆ ಮುನ್ನಡೆಯಲು ಸಹಕಾರ ನೀಡಬೇಕು. ಮಕ್ಕಳ ಪ್ರತಿಭೆಯನ್ನು ಗುರುತಿಸಿ ಉತ್ತೇಜನ ನೀಡುವ ಕೆಲಸ ಮಾಡಬೇಕು.

ಕನ್ನಡಪ್ರಭ ವಾರ್ತೆ ಪಾಂಡವಪುರ

ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆ ಮಕ್ಕಳಲ್ಲಿರುವ ಪ್ರತಿಭೆ ಗುರುತಿಸಿ ಹೊರತೆಗೆಯಲು ಸೂಕ್ತ ವೇದಿಕೆ ಕಲ್ಪಿಸಬೇಕಿದೆ ಎಂದು ಕನಗನಮರಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಚ್.ಎನ್.ರಾಮಕೃಷ್ಣ ಹೇಳಿದರು.

ತಾಲೂಕಿನ ಮಾಡರಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿ, ಪ್ರತಿಭೆ ಎನ್ನುವುದು ಪ್ರತಿಯೊಂದು ಮಗುವಿನಲ್ಲೂ ಇರುತ್ತದೆ. ಅದನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸವಾಗಬೇಕಿದೆ ಎಂದರು.

ಮನೆಯಲ್ಲಿ ಪೋಷಕರು ಸಹ ಮಕ್ಕಳ ಆಸಕ್ತಿ ಇರುವ ಕಡೆಗೆ ಮುನ್ನಡೆಯಲು ಸಹಕಾರ ನೀಡಬೇಕು. ಮಕ್ಕಳ ಪ್ರತಿಭೆಯನ್ನು ಗುರುತಿಸಿ ಉತ್ತೇಜನ ನೀಡುವ ಕೆಲಸ ಮಾಡಬೇಕು ಎಂದು ತಿಳಿಸಿದರು.

ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಸಂಖ್ಯೆ ಕಡಿಮೆಯಾಗಿ ಶಾಲೆಗಳು ಮುಚ್ಚುವ ಹಂತಕ್ಕೆ ಬಂದಿವೆ. ಪೋಷಕರು ಎಚ್ಚೆತ್ತುಕೊಂಡು ಶಾಲೆಗಳನ್ನು ಉಳಿಸಿ ಬಡ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಸಹಕಾರ ನೀಡಬೇಕು ಎಂದರು.

ಉದ್ಯಮಿ ಶಿವಕುಮಾರ್ ಮಾತನಾಡಿ, ಶಾಲಾ ವಾರ್ಷಿಕೋತ್ಸವ ವಿಜೃಂಭಣೆಯಿಂದ ಆಚರಣೆ ಮಾಡುವ ಮೂಲಕ ಮಕ್ಕಳನ್ನು ಪ್ರೋತ್ಸಾಹಿಸುವ ಕೆಲಸ ಮಾಡುತ್ತಿದ್ದಾರೆ. ಪೋಷಕರು ಖಾಸಗಿ ಶಾಲೆಗಳ ಮೇಲಿನ ವ್ಯಾಮೋಹ ಬಿಟ್ಟು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರುವ ಮೂಲಕ ಶಾಲೆಗಳ ಉಳಿವಿಗೆ ಸಹಕರಿಸಬೇಕು ಎಂದರು.

ಇದೇ ವೇಳೆ ಶಾಲಾ ಮಕ್ಕಳಿಂದ ಹಲವು ನೃತ್ಯ ಪ್ರದರ್ಶನಗಳು ಮೂಡಿಬಂದವು. ಸಮಾರಂಭದಲ್ಲಿ ಗ್ರಾಪಂ ಮಾಜಿ ಅಧ್ಯಕ್ಷರಾದ ಜೆ.ದೇವೇಗೌಡ, ನಲ್ಲಹಳ್ಳಿ ಮಹೇಶ್, ನಳಿನಾಕ್ಷಿ, ಮಾಜಿ ಉಪಾಧ್ಯಕ್ಷೆ ಶೀಲಾ, ಬಿಇಓ ಧರ್ಮಶೆಟ್ಟಿ, ಎಸ್‌ಡಿಎಂಸಿ ಅಧ್ಯಕ್ಷ ದೈತೇಗೌಡ, ಉಪಾಧ್ಯಕ್ಷೆ ಸ್ವಾತಿ, ಶಿಕ್ಷಣ ಆಸಕ್ತ ಚಲುವೇಗೌಡ, ಮುಖ್ಯಶಿಕ್ಷಕರು ಪ್ರಕಾಶ್, ಸಹ ಶಿಕ್ಷಕ ಸುರೇಶ್ ಸೇರಿದಂತೆ ಎಸ್‌ಡಿಎಂಸಿ ಸದಸ್ಯರು, ಯಜಮಾನರು, ಮುಖಂಡರು, ಗ್ರಾಮಸ್ಥರು ಇದ್ದರು.