ಸಾರಾಂಶ
ಕನ್ನಡಪ್ರಭ ವಾರ್ತೆ ದಾಬಸ್‌ಪೇಟೆ
ಜಾಗತಿಕ ವಿದ್ಯಮಾನಗಳನ್ನು ಸಮಾಜಕ್ಕೆ ತಿಳಿಸುವ ಕೆಲಸವನ್ನು ಮಾಧ್ಯಮಗಳು ಮಾಡುತ್ತವೆ. ಜಗತ್ತಿನಲ್ಲಿ ನಡೆಯುವ ಸಕಲವೂ ಮಾಧ್ಯಮಗಳ ಮೂಲಕವೇ ಜನರನ್ನು ತಲುಪುತ್ತವೆ. ಇಂತಹ ಮಾಧ್ಯಮಗಳಿಗೂ ಸ್ವಾತಂತ್ರ‍್ಯ ಬೇಕು ಎಂದು ತುಮಕೂರಿನ ಹಿರೇಮಠದ ಡಾ.ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಹೇಳಿದರು.ಪಟ್ಟಣದ ಮಾರಮ್ಮ ದೇವಾಲಯದ ಸಮೀಪ ದಾಬಸ್‌ಪೇಟೆ ವಾಯ್ಸ್ ಮಾಸಪತ್ರಿಕೆಯ ದಶಮಾನೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮಾಧ್ಯಮವನ್ನು ಸಂವಿಧಾನದ ೪ನೇ ಆಯಾಮ ಎಂದು ಕರೆಯಲಾಗುತ್ತದೆ. ಜಗತ್ತಿನಲ್ಲಿ ನಡೆಯುವ ವಿಚಾರಗಳನ್ನು, ಸತ್ಯವನ್ನು ಸಮಾಜಕ್ಕೆ ತಿಳಿಸುವ ಕಾರ್ಯವನ್ನು ಮಾಧ್ಯಮಗಳು ಮಾಡುತ್ತಿವೆ. ಆದರೂ ಕೆಲವೊಮ್ಮೆ ಮಾಧ್ಯಮಗಳು ತಮ್ಮ ಕಾರ್ಯನಿರ್ವಹಿಸುವಾಗ ಬೆದರಿಕೆಗಳು, ಹಿಂಸೆ, ಸೆನ್ಸಾರ್‌ನಂತಹ ಸವಾಲುಗಳು ಎದುರಾಗುತ್ತವೆ. ಸರ್ಕಾರ ಹಾಗೂ ಸಾರ್ವಜನಿಕರು ಮಾಧ್ಯಮಗಳು ಮತ್ತು ಪತ್ರಕರ್ತರಿಗೆ ನ್ಯಾಯಮಾರ್ಗದಲ್ಲಿ ತಮ್ಮ ಕರ್ತವ್ಯ ನಿರ್ವಹಿಸಲು ಪೂರಕ ವಾತಾವರಣ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಮಾಜಿ ಸಚಿವ ವೀರಣ್ಣ ಮಾತನಾಡಿ, ಪ್ರಸ್ತುತ ದಿನಮಾನದಲ್ಲಿ ಪತ್ರಕರ್ತರ ಜೀವನ ಬಹಳ ಕಷ್ಟಕರವಾಗಿದೆ. ಕೈಯಲ್ಲಿ ಪೆನ್ನು ಹಿಡಿದು ಬರೆಯಬೇಕು ಎಂಬ ಹಂಬಲವಿರುತ್ತದೆ. ಆದರೆ, ಜೀವನದ ನಾನಾ ಸಮಸ್ಯೆಗಳು ಅವರಿಗೆ ಎದುರಾಗುತ್ತವೆ. ಉತ್ತಮ ಪತ್ರಕರ್ತರನ್ನು ಗುರುತಿಸಿ ಬೆನ್ನು ತಟ್ಟುವ ಕೆಲಸ ಎಲ್ಲರಿಂದ ಆಗಬೇಕಿದೆ ಎಂದು ಹೇಳಿದರು.ಸಂಪಾದಕ ರಾಜೇಶ್ ಕುಮಾರ್ ಮಾತನಾಡಿ, ಸಾರ್ವಜನಿಕರ ಸಮಸ್ಯೆ, ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಲು ನಮ್ಮ ಪತ್ರಿಕೆಯ ಹಿರಿಯ ಸಂಪಾದಕರಾದ ವೆಂಕಟೇಶ್ ಅವರ ಮಾರ್ಗದರ್ಶನದಲ್ಲಿ ಪತ್ರಿಕೆ ಆರಂಭಿಸಿದ್ದು, ನೂರಾರು ಸಮಸ್ಯೆಗಳು, ಜೀವ ಬೆದರಿಕೆಗಳು ಬಂದರೂ ಅಂತಹ ಬೆದರಿಕೆಗಳಿಗೆ ಹೆದರದೇ ಜನರ ಸಹಕಾರದಿಂದ ಪತ್ರಿಕೆ ಬೆಳೆಸುವ ಕೆಲಸ ಮಾಡುತ್ತಿದ್ದು, ನಿಮ್ಮೆಲ್ಲರ ಸಹಕಾರ ಹೀಗೆ ಇರಲಿ ಎಂದರು.
ನಿವೃತ್ತ ನ್ಯಾಯಾಧೀಶ ಡಾ.ಬಾಬಾ ಸಾಹೇಬ್ ಜಿನರಾಳ್ಕರ್ ಮಾತನಾಡಿದರು.ಕಾರ್ಯಕ್ರಮದಲ್ಲಿ ನಿವೃತ್ತ ನ್ಯಾಯಧೀಶ ಶ್ರೀನಿವಾಸಯ್ಯ, ರೈತ ಮುಖಂಡರಾದ ಹಳ್ಳಿಕೆರೆ ಉಂಡಿ ಭಾಗ್ಯರಾಜ್, ತೇಜಸ್ವಿ ಪಟೇಲ್, ವಿಠಲ್ ಗಣಚಾರಿ, ನಾಗರಾಜು, ಹೈಕೋರ್ಟ್ ವಕೀಲ ಜಗದೀಶ್, ಡಾ.ಕಿಶನ್, ರಾಜ್ಯ ಕಬ್ಬು ಬೆಳೆಗಾರರ ಸಂಘದ ಪದಾಧಿಕಾರಿಗಳಾದ ಶಿವಕುಮಾರ್, ಗುರುಮೂರ್ತಿ ರವೀಂದ್ರಕುಮಾರ್, ಮುಖಂಡರಾದ ಗಟ್ಟಿಬೈರಪ್ಪ, ವಿಜಯಕುಮಾರ್ ಮತ್ತಿತರರಿದ್ದರು.