ಸಾರಾಂಶ
ದೈವದತ್ತವಾಗಿರುವ ಪ್ರಕೃತಿಯನ್ನು ರಕ್ಷಿಸದಿದ್ದರೆ ಮಾನವ ಕುಲ ಸಂಕಷ್ಟ ಎದುರಿಸಬೇಕಾಗುತ್ತದೆ. ಈಗಾಗಲೇ ಪ್ರಕೃತಿ ವಿಕೋಪದಿಂದ ಅತಿವೃಷ್ಟಿ, ಅನಾವೃಷ್ಟಿ ಉಂಟಾಗಿ ಸಾವು- ನೋವುಗಳು ಸಂಭವಿಸುತ್ತಿವೆ.
ಕನ್ನಡಪ್ರಭ ವಾರ್ತೆ ಪಾಂಡವಪುರ
ಮಕ್ಕಳು ಮಾನಸಿಕ ಮತ್ತು ದೈಹಿಕವಾಗಿ ಸದೃಢರಾಗಲು ಹಾಗೂ ಏಕಾಗ್ರತೆಯಿಂದ ಕಲಿಕೆಗೆ ಶಾಲೆಯ ಸುತ್ತಲಿನ ಪರಿಸರ ಪೂರಕ ವಾತಾವರಣ ನಿರ್ಮಿಸಬೇಕು ಎಂದು ತಹಸೀಲ್ದಾರ್ ಎಸ್.ಸಂತೋಷ್ ತಿಳಿಸಿದರು.ತಾಲೂಕಿನ ಹುಲ್ಕೆರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಪರಿಸರ ಪ್ರೇಮಿ ಲವಕುಮಾರ್ ಸಸಿ ನೆಟ್ಟು ಪೋಷಿಸಿದ ಹಿನ್ನಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅರಣ್ಯ ಮಾದರಿ ಶಾಲೆ ಎಂದು ಘೋಷಿಸಿದ ಬಳಿಕ ಮಾತನಾಡಿದರು.
ಪಾಲಕರು ಪರಿಸರ, ಅರಣ್ಯ, ಪ್ರಕೃತಿಯ ರಕ್ಷಣೆಯಿಂದಾಗುವ ಪ್ರಯೋಜನಗಳನ್ನು ತಮ್ಮ ಮಕ್ಕಳಿಗೆ ತಿಳಿಸಬೇಕು. ಜಾಗತಿಕ ತಾಪಮಾನ ಹೆಚ್ಚಾಗುತ್ತಿರುವ ಪ್ರಸ್ತುತ ದಿನಗಳಲ್ಲಿ ನಮ್ಮ ಮುಂದಿನ ಪೀಳಿಗೆಗೆ ಪರಿಸರದ ರಕ್ಷಣೆ ಬಗ್ಗೆ ಜಾಗೃತಿ ಮೂಡಿಸಬೇಕಾದ ಜವಾಬ್ದಾರಿ ಮತ್ತು ಅನಿವಾರ್ಯತೆ ನಮ್ಮ ಮೇಲಿದೆ. ಮಕ್ಕಳು ಕೂಡ ಪರಿಸರದ ಬಗ್ಗೆ ಅಪಾರ ಕಾಳಜಿ ಇಟ್ಟುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.ಪರಿಸರ ಪ್ರೇಮಿ ಲವಕುಮಾರ್ ಮಾತನಾಡಿ, ದೈವದತ್ತವಾಗಿರುವ ಪ್ರಕೃತಿಯನ್ನು ರಕ್ಷಿಸದಿದ್ದರೆ ಮಾನವ ಕುಲ ಸಂಕಷ್ಟ ಎದುರಿಸಬೇಕಾಗುತ್ತದೆ. ಈಗಾಗಲೇ ಪ್ರಕೃತಿ ವಿಕೋಪದಿಂದ ಅತಿವೃಷ್ಟಿ, ಅನಾವೃಷ್ಟಿ ಉಂಟಾಗಿ ಸಾವು- ನೋವುಗಳು ಸಂಭವಿಸುತ್ತಿವೆ ಎಂದರು.
ಪ್ರಕೃತಿ ಮೇಲೆ ಮಾನವ ನಡೆಸುತ್ತಿರುವ ದಬ್ಬಾಳಿಕೆಯಿಂದ ಪ್ರಕೃತಿ ಮುನಿದು ಕೇರಳ ವಯನಾಡುವಿನಲ್ಲಿ ಜರುಗಿದಂತಹ ಘಟನೆಗಳು ಮರುಕಳಿಸುತ್ತವೆ. ಪ್ರಕೃತಿಯ ಮುನಿಸು ಮಾನವ ಕುಲದ ನಾಶಕ್ಕೆ ನಾಂದಿಯಾಗುತ್ತದೆ. ಹೀಗಾಗಿ ಪ್ರತಿಯೊಬ್ಬರೂ ಪರಿಸರವನ್ನು ಸಂರಕ್ಷಿಸುವ ಜವಬ್ದಾರಿ ನಿಭಾಯಿಸಿ ಎಂದು ಕರೆ ನೀಡಿದರು. ಆಧುನೀಕತೆಯ ಹೆಸರಿನಲ್ಲಿ ಕಾಡುಗಳ ನಾಶ, ಅಭಿವೃದ್ಧಿ ಹೆಸರಿನಲ್ಲಿ ರಸ್ತೆ ಬದಿಯ ಮರಗಳ ಹನನ ಇತ್ಯಾದಿಗಳಿಗೆ ಸಾಧ್ಯವಾದಷ್ಟು ಕಡಿವಾಣ ಹಾಕಬೇಕಿದೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕರು, ಗ್ರಾಮದ ಯಜಮಾನರು ಇದ್ದರು.