ಶಿಕ್ಷಕರು ಕೇವಲ ಪಾಠ ಹೇಳುವವರಾಗಿ ಉಳಿಯದೆ, ವಿದ್ಯಾರ್ಥಿಗಳ ಬದುಕಿಗೆ ದಾರಿದೀಪವಾಗುತ್ತಾರೆ
ಬಳ್ಳಾರಿ: ಪ್ರತಿ ವಿದ್ಯಾರ್ಥಿಯ ಬೌದ್ಧಿಕ ಬೆಳವಣಿಗೆಗೆ ಪೂರಕವಾದ ವಾತಾವರಣ ನಿರ್ಮಿಸಿ, ಅವರ ಭವಿಷ್ಯದ ಬಗ್ಗೆ ಕಾಳಜಿಯಿಂದ ಕಾರ್ಯ ನಿರ್ವಹಿಸುವ ಶಿಕ್ಷಕರು ನಿಜವಾದ ಅರ್ಥದಲ್ಲಿ ಕ್ರಿಯಾಶೀಲ ಶಿಕ್ಷಕರು ಎನಿಸಿಕೊಳ್ಳುತ್ತಾರೆ. ಕೇವಲ ಪಠ್ಯಪುಸ್ತಕದ ಪಾಠ ಬೋಧಿಸುವುದಷ್ಟೇ ಶಿಕ್ಷಕರ ಕರ್ತವ್ಯವಲ್ಲ.ವಿದ್ಯಾರ್ಥಿಗಳಲ್ಲಿ ಜ್ಞಾನ, ಶಿಸ್ತು, ಸಂಸ್ಕಾರ, ಮಾನವೀಯ ಮೌಲ್ಯ ಮತ್ತು ಸಾಮಾಜಿಕ ಪ್ರಜ್ಞೆ ಬೆಳೆಸುವ ಜವಾಬ್ದಾರಿಯೂ ಶಿಕ್ಷಕರ ಮೇಲಿದೆ ಎಂದು ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಹಾಗೂ ಹಿರಿಯ ಪತ್ರಕರ್ತ ಎನ್. ವೀರಭದ್ರಗೌಡ ಅಭಿಪ್ರಾಯಪಟ್ಟರು.
ಇಲ್ಲಿನ ವೀವಿ ಸಂಘದ ಹೀರದ ಸೂಗಮ್ಮ ಪ್ರಾಥಮಿಕ ಶಾಲೆಯಲ್ಲಿ ಕರ್ನಾಟಕ ರಾಜ್ಯ ಕ್ರಿಯಾಶೀಲ ಶಿಕ್ಷಕರ ವೇದಿಕೆಯ ಜಿಲ್ಲಾ ಘಟಕದಿಂದ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಹಾಗೂ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.ಶಿಕ್ಷಕರು ಸಮಾಜದ ನಿರ್ಮಾತೃಗಳು.ಒಂದು ಮಗುವಿನ ಭವಿಷ್ಯ ರೂಪಿಸುವಲ್ಲಿ ಪೋಷಕರ ಪಾತ್ರ ಎಷ್ಟು ಮಹತ್ವದ್ದೋ,ಅಷ್ಟೇ ಮಹತ್ವದ ಪಾತ್ರ ಶಿಕ್ಷಕರದ್ದಾಗಿದೆ. ಮಗುವಿನ ಆಸಕ್ತಿ, ಅಭಿರುಚಿ, ಸಾಮರ್ಥ್ಯ ಹಾಗೂ ಕಲಿಕೆಯ ವೇಗ ಅರ್ಥ ಮಾಡಿಕೊಂಡು ಅದಕ್ಕೆ ತಕ್ಕಂತೆ ಮಾರ್ಗದರ್ಶನ ನೀಡುವ ಶಿಕ್ಷಕರು ಮಕ್ಕಳ ಮನಸ್ಸಿನಲ್ಲಿ ಶಾಶ್ವತ ಸ್ಥಾನ ಪಡೆಯುತ್ತಾರೆ. ಇಂತಹ ಶಿಕ್ಷಕರು ಕೇವಲ ಪಾಠ ಹೇಳುವವರಾಗಿ ಉಳಿಯದೆ, ವಿದ್ಯಾರ್ಥಿಗಳ ಬದುಕಿಗೆ ದಾರಿದೀಪವಾಗುತ್ತಾರೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ಮೇಟಿ ಪಂಪನಗೌಡ ಅವರು, ಪ್ರತಿಯೊಬ್ಬ ವಿದ್ಯಾರ್ಥಿಯೂ ಒಂದೇ ರೀತಿಯ ಬುದ್ಧಿಮತ್ತೆ, ಕಲಿಕಾ ಸಾಮರ್ಥ್ಯ ಅಥವಾ ಪ್ರತಿಭೆ ಹೊಂದಿರುವುದಿಲ್ಲ. ಕೆಲವರು ಪಠ್ಯ ಚಟುವಟಿಕೆಗಳಲ್ಲಿ ಮುಂದಿದ್ದರೆ ಇನ್ನು ಕೆಲವರು ಕ್ರೀಡೆ, ಕಲೆ, ಸಾಹಿತ್ಯ, ವಿಜ್ಞಾನ, ಸಂಗೀತ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಆಸಕ್ತಿ ಹೊಂದಿರುತ್ತಾರೆ. ಇಂತಹ ವೈವಿಧ್ಯಮಯ ಪ್ರತಿಭೆ ಗುರುತಿಸಿ, ಅವುಗಳನ್ನು ಬೆಳೆಸಲು ಅವಕಾಶ ಕಲ್ಪಿಸುವುದು ಕ್ರಿಯಾಶೀಲ ಶಿಕ್ಷಕರ ಪ್ರಮುಖ ಗುಣವಾಗಿದೆ ಎಂದರು.ಹಿರಿಯ ರಂಗಭೂಮಿ ಕಲಾವಿದ ಪುರುಷೋತ್ತಮ ಹಂದ್ಯಾಳು ಮಾತನಾಡಿ, ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳನ್ನು ನಿರ್ಲಕ್ಷಿಸದೆ, ಅವರ ಸಮಸ್ಯೆ ಅರಿತು ವಿಶೇಷ ಕಾಳಜಿ ವಹಿಸಿ ಮುನ್ನಡೆಸುವ ಮನೋಭಾವ ಶಿಕ್ಷಕರಲ್ಲಿರಬೇಕು ಎಂದು ಹೇಳಿದರು. ಹಿರಿಯ ಪತ್ರಕರ್ತ ಕೆ.ಎಂ. ಮಂಜುನಾಥ ಮಾತನಾಡಿದರು.
ಪ್ರಾಸ್ತಾವಿಕ ಮಾತನಾಡಿದ ಕ್ರಿಯಾಶೀಲ ಶಿಕ್ಷಕರ ವೇದಿಕೆಯ ಜಿಲ್ಲಾಧ್ಯಕ್ಷ ರವಿ ಚೇಳ್ಳಗುರ್ಕಿ ವೇದಿಕೆಯಿಂದ ಈವರೆಗೆ ಕೈಗೊಂಡಿರುವ ವಿವಿಧ ಸಮಾಜಮುಖಿ ಕಾರ್ಯ ಪರಿಚಯಿಸಿದರು. ವೀವಿ ಸಂಘದ ಹೀರದ ಸೂಗಮ್ಮ ಶಾಲೆಯ ಸ್ಥಾಪನೆ ಹಿನ್ನೆಲೆಯ ಮಹತ್ವ, ವೀವಿ ಸಂಘ ಶೈಕ್ಷಣಿಕ ಕ್ಷೇತ್ರದಲ್ಲಿ ನೀಡುತ್ತಿರುವ ಕೊಡುಗೆಯನ್ನು ಇದೇ ವೇಳೆ ಶ್ಲಾಘಿಸಿದರು.ಹೀರದಸೂಗಮ್ಮ ಶಾಲೆಯ ಮುಖ್ಯಗುರು ಎ.ಮರಿಸ್ವಾಮಿ, ಎಂಬಿಎಸ್ ಎಲ್ ಶಾಲೆಯ ಮುಖ್ಯಗುರು ಕೆ.ವಿ. ಶ್ರೀನಿವಾಸುಲು, ಹಲಕುಂದಿ ಸರ್ಕಾರಿ ಪ್ರೌಢಶಾಲೆ ಕನ್ನಡ ಶಿಕ್ಷಕ ನಿರಂಜನ ಕುಮಾರ್ ಎಸ್, ಕುರುಗೋಡು ತಾಲೂಕಿನ ಬಸವಪುರ ಶಾಲೆಯ ಬಡ್ತಿ ಮುಖ್ಯಗುರು ಎಚ್.ಕೆ.ತಿಪ್ಪೇಸ್ವಾಮಿ ಹಾಗೂ ಬಳ್ಳಾರಿ ಪೂರ್ವ ವಲಯದ ಸಂಜೀವರಾಯನ ಕೋಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹಶಿಕ್ಷಕ ಕರಿಯಪ್ಪ ಸಿ ಅವರನ್ನು ಸಮಾರಂಭದಲ್ಲಿ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು. ವೇದಿಕೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಶ್ರೀಧರ್, ಆಡಳಿತ ಮಂಡಳಿ ಸದಸ್ಯ ಮಂಜುನಾಥ್, ಕರಿಬಸವನಗೌಡ ಮುಂತಾದವರು ಉಪಸ್ಥಿತರಿದ್ದರು. ಶಿಕ್ಷಕಿ ಜಯಂತಿ ಪ್ರಾರ್ಥಿಸಿದರು. ಶಿಕ್ಷಕ ನಟರಾಜ್ ಕಾರ್ಯಕ್ರಮ ನಿರ್ವಹಿಸಿದರು.