ಕೊಪ್ಪಳ: ಮಹಿಳೆಯರ ಸಮಸ್ಯೆ ಪರಿಹಾರಕ್ಕೆ ಆಂತರಿಕ ದೂರು ಸಮಿತಿ ರಚಿಸಬೇಕು ಎಂದು ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಜಿಲ್ಲಾ ಸಂಘಟನೆ (ಎಐಎಂಎಸ್ಎಸ್) ಸಮಿತಿ ಅವರು ಶಾಸಕ ರಾಘವೇಂದ್ರ ಹಿಟ್ನಾಳ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಎಐಎಂಎಸ್ಎಸ್ ಜಿಲ್ಲಾಧ್ಯಕ್ಷೆ ಮಂಜುಳಾ ಮಜ್ಜಿಗಿ ಮಾತನಾಡಿ, ಉದ್ಯೋಗದ ಸ್ಥಳಗಳಲ್ಲಿ ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿ ಮಹಿಳೆಯರ ಸಮಸ್ಯೆಗಳ ಪರಿಹಾರಕ್ಕಾಗಿ ಆಂತರಿಕ ದೂರು ಸಮಿತಿ (ಐಸಿಸಿ) ರಚಿಸಬೇಕು. ಕೊಪ್ಪಳವೂ ಸೇರಿದಂತೆ ರಾಜ್ಯದಾದ್ಯಂತ ಹೆಚ್ಚುತ್ತಿರುವ ಮರ್ಯಾದಾಗೇಡು ಹತ್ಯೆಗಳನ್ನು ತಡೆಗಟ್ಟಲು ಕೂಡಲೇ ಮಾನ್ಯ ಕಾಯ್ದೆ ಜಾರಿಗೊಳಿಸಬೇಕು. ಬಾಲ್ಯ ವಿವಾಹ, ಅಪ್ರಾಪ್ತ ವಯಸ್ಕರ ಗರ್ಭಧಾರಣೆ ಹಾಗೂ ಸ್ತ್ರೀ ಭ್ರೂಣ ಹತ್ಯೆ ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳಬೇಕು. ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಕೊಡಲಿ ಏಟು ಕೊಡುವ ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಕೈಬಿಟ್ಟು ಸರ್ಕಾರಿ ಶಾಲಾ-ಕಾಲೇಜುಗಳನ್ನು ಬಲಪಡಿಸಿ, ಎಲ್ಲ ಹೆಣ್ಣು ಮಕ್ಕಳಿಗೂ ಉಚಿತ ಶಿಕ್ಷಣ ಖಾತ್ರಿಪಡಿಸಬೇಕು. ಸ್ವಾವಲಂಬಿ ಜೀವನ ಕಟ್ಟಿಕೊಳ್ಳಲು ಬಯಸುವ ಹೆಣ್ಣು ಮಕ್ಕಳಿಗೆ ಉದ್ಯೋಗ ಭದ್ರತೆ ಖಾತ್ರಿಪಡಿಸಬೇಕು ಎಂದರು.ಆರೋಗ್ಯದ ಖಾಸಗೀಕರಣದಿಂದಾಗಿ ಬಡ ಮತ್ತು ಕೆಳವರ್ಗದ ಹೆಣ್ಣು ಮಕ್ಕಳು ಸೂಕ್ತ ಆರೋಗ್ಯ ಸೌಲಭ್ಯಗಳು ಸಿಗದೆ ಜೀವ ಕಳೆದುಕೊಳ್ಳುತ್ತಿದ್ದಾರೆ. ಇದನ್ನು ತಡೆಗಟ್ಟಲು ಪ್ರಾಥಮಿಕ ಆರೋಗ್ಯ ಕೇಂದ್ರಗಳೂ ಸೇರಿದಂತೆ ಎಲ್ಲ ಸರ್ಕಾರಿ ಆಸ್ಪತ್ರೆಗಳನ್ನು ಬಲಪಡಿಸಿ, ಮೂಲಭೂತ ಸೌಲಭ್ಯಗಳು, ತಜ್ಞ ವೈದ್ಯರು ಮತ್ತು ಸ್ತ್ರೀ ರೋಗ ತಜ್ಞರು ಎಲ್ಲ ಸಮಯದಲ್ಲೂ ಲಭ್ಯವಿರುವಂತೆ ನೋಡಿಕೊಳ್ಳಬೇಕು. ಹೆಣ್ಣು ಮಕ್ಕಳಲ್ಲಿನ ಅಪೌಷ್ಟಿಕತೆಯನ್ನು ತಡೆಗಟ್ಟಲು ಮಧ್ಯಾಹ್ನದ ಬಿಸಿಯೂಟವನ್ನು ಪದವಿ ಕಾಲೇಜು ಹಂತದವರೆಗೂ ವಿಸ್ತರಿಸಬೇಕು.
ಹೆಣ್ಣು ಮಕ್ಕಳ ಮೇಲಿನ ಅಪರಾಧಗಳು ದಿನೇ ದಿನೇ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅಶ್ಲೀಲ ಸಿನಿಮಾ-ಸಾಹಿತ್ಯ, ಮದ್ಯ - ಮಾದಕ ವಸ್ತುಗಳನ್ನು ನಿಷೇಧಿಸಬೇಕು ಮತ್ತು ಅವರ ಆತ್ಮ ರಕ್ಷಣೆಗಾಗಿ ಜೋಡೋ- ಕರಾಟೆಯಂತಹ ಕೌಶಲ್ಯ ತರಬೇತಿಗಳನ್ನು ನೀಡಬೇಕು. ಶುಚಿ ವಿತರಣಾ ಯೋಜನೆಯನ್ನು ಕೂಡಲೇ ಆರಂಭಿಸಬೇಕು. ಉದ್ಯೋಗಸ್ಥ ಮಹಿಳೆಯರಿಗೆ ವಿಶ್ರಾಂತಿ ಕೊಠಡಿ, ಶಿಶು ಪಾಲನಾ ಕೇಂದ್ರದಂತ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು. ರಾಜ್ಯ ಬಜೆಟ್‌ನಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದರು.ಎಐಎಂಎಸ್ಎಸ್ ಜಿಲ್ಲಾ ಕಾರ್ಯದರ್ಶಿ ಶಾರದಾ ಗಡ್ಡಿ, ಸದಸ್ಯರಾದ ಪವಿತ್ರಾ, ಹುಲಿಗೆಮ್ಮ ಇತರರಿದ್ದರು.