ನೀರು, ಮೇವು ಲಭ್ಯತೆ ಕುರಿತು ಜನಜಾಗೃತಿ ಮೂಡಿಸಿ

| Published : Feb 17 2025, 12:30 AM IST

ಸಾರಾಂಶ

ಕೋಲಾರ ಜಿಲ್ಲೆಯಲ್ಲಿ ಮುಂದಿನ ದಿನಗಳಲ್ಲಿ ೨೫೭ ಗ್ರಾಮಗಳಲ್ಲಿ ಹಾಗೂ ೨೬ ವಾರ್ಡ್ ಗಳಲ್ಲಿ ಕುಡಿಯುವ ನೀರಿನ ಕೊರತೆ ಎದುರಾಗಬಹುದಾಗಿದೆ ಎಂದು ಅಂದಾಜಿಸಲಾಗಿದೆ. ಅದಕ್ಕೆ ಪೂರಕವಾಗಿ ಯಾವುದೇ ಗ್ರಾಮದಲ್ಲಿ ನೀರಿನ ಸಮಸ್ಯೆ ಉಂಟಾದಲ್ಲಿ ತಕ್ಷಣ ಕ್ರಮ ಕೈಗೊಳ್ಳಲು ಅಧಿಕಾರಿಗಳು ಸಿದ್ಧತೆ ಮಾಡಿಕೊಳ್ಳಬೇಕು

ಕನ್ನಡಪ್ರಭ ವಾರ್ತೆ ಕೋಲಾರಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ತಾಪಮಾನ ಹೆಚ್ಚಳವಾಗುತ್ತಿದ್ದು, ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಇದರ ಬಗ್ಗೆ ಅರಿವು, ಸುರಕ್ಷತಾ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷ ಹಾಗೂ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಹೇಳಿದರು.ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆ ಜರುಗಿಸಿ, ಕುಡಿಯುವ ನೀರು, ಜಾನುವಾರು ಮೇವು, ಕೃಷಿ ಬೆಳೆಗಳ ಬಿತ್ತನೆ ಬಗ್ಗೆ ಪ್ರಗತಿ ಪರಿಶೀಲಿಸಿ ಮಾತನಾಡಿದರು.ಬತ್ತಿದ ೧೩೫೦ ಕೊಳವೆ ಬಾವಿ

ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆ ಗಳಲ್ಲಿ ೧೩೩೩ ಕೊಳವೆ ಬಾವಿಗಳ ಮೂಲಕ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ೨೪೯ ಕೊಳವೆ ಬಾವಿಗಳು ಬತ್ತಿಹೋಗಿವೆ. ಗ್ರಾಮಿನ ಪ್ರದೇಶಗಳಲ್ಲಿ ೧೫೨೨ ಗ್ರಾಮಗಳಲ್ಲಿ ೩೪೨೫ ಕೊಳವೆ ಬಾವಿಗಳು ಕಾರ್ಯನಿರ್ವಹಿಸುತ್ತಿದ್ದು, ೧೩೫೦ ಕೊಳವೆ ಬಾವಿಗಳು ಬತ್ತಿಹೋಗಿವೆ.ಮುಂದಿನ ದಿನಗಳಲ್ಲಿ ೨೫೭ ಗ್ರಾಮಗಳಲ್ಲಿ ಹಾಗೂ ೨೬ ವಾರ್ಡ್ ಗಳಲ್ಲಿ ಕುಡಿಯುವ ನೀರಿನ ಕೊರತೆ ಎದುರಾಗಬಹುದಾಗಿದೆ ಎಂದು ಅಂದಾಜಿಸಲಾಗಿದೆ. ಅದಕ್ಕೆ ಪೂರಕವಾಗಿ ಯಾವುದೇ ಗ್ರಾಮದಲ್ಲಿ ನೀರಿನ ಸಮಸ್ಯೆ ಉಂಟಾದಲ್ಲಿ ತಕ್ಷಣ ಕ್ರಮ ಕೈಗೊಳ್ಳಲು ಸಿದ್ಧತೆ ಮಾಡಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು. ಬಾವಿ ಮಾಲೀಕರ ಜತೆ ಒಪ್ಪಂದ

ಬೋರ್ವೆಲ್, ಪೈಪ್ ಲೈನ್, ಖಾಸಗಿ ಕೊಳವೆ ಬಾವಿ ಬಾಡಿಗೆ ಪಡೆಯಲು ಒಪ್ಪಂದ ಎಲ್ಲವನ್ನು ಸಮರ್ಪಕವಾಗಿ ಸಿದ್ದಪಡಿಸಿಕೊಳ್ಳಲು ಸೂಚಿಸಿದರು. ಸಾರ್ವಜನಿಕರಲ್ಲಿ ನೀರಿನ ಮಿತ ಬಳಕೆ, ಅಪವ್ಯಯ, ಸೋರಿಕೆ ಬಗ್ಗೆ ಅರಿವು ಮೂಡಿಸಬೇಕು. ೨೦೨೩-೨೪ ನೇ ಸಾಲಿನಲ್ಲಿ ಎಸ್ ಆರ್ ಡಿ ಎಫ್ ಅನುದಾನದಡಿ ನಗರ ಪ್ರದೇಶಗಳಲ್ಲಿ ೧೩೧,ಗ್ರಾಮೀಣ ಪ್ರದೇಶಗಳಲ್ಲಿ ೩೦೫ ಒಟ್ಟು ೪೩೬ ಕೊಳವೆಬಾವಿಗಳನ್ನು ದುರಸ್ಥಿಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದರು.

ಯರಗೋಳ್‌ನಿಂದ ನೀರು

ಅಗತ್ಯವಿರುವೆಡೆ ಈಗಾಗಲೇ ನಗರಸಭೆಯ ಟ್ರ್ಯಾಕ್ಟರ್ ಮೂಲಕ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದ್ದು, ಯರಗೊಳ ಜಲಾಶಯದ ನೀರನ್ನು ಪ್ರತಿ ೪ ದಿನಗಳಿಗೊಮ್ಮೆ ಹಾಗೂ ಕೊಳವೆ ಬಾವಿ ನೀರನ್ನು ಪ್ರತಿ ಎರಡು ದಿನಗಳಿಗೊಮ್ಮೆ ಪೂರೈಸಲಾಗುತ್ತಿದೆ. ಸಾಧ್ಯವಾಗುವುದಾದರೆ ಯಾರಗೊಳ ನೀರನ್ನು ಎರಡು ದಿನಗಳಿಗೊಮ್ಮೆ ಪೂರೈಸಲು ಕ್ರಮ ವಹಿಸಬೇಕು ಎಂದರು. ಗೊಬ್ಬರಕ್ಕೆ ಕೊರತೆ ಇಲ್ಲ

ರಾಜ್ಯ ವಿಪತ್ತು ನಿರ್ವಹನಾ ಅನುದಾನದಲ್ಲಿ ೪.೭೫ಕೋಟಿ ಮೊತ್ತದ ಅನುದಾನ ಲಭ್ಯವಿದೆ. ಜಿಲ್ಲೆಯಲ್ಲಿ ೨೯ ವಾರಗಳಿಗೆ ಸಾಕಾಗುವಷ್ಟು ೩೩೮೬೪೦ ಟನ್ ಗಳಷ್ಟು ಜಾನುವಾರು ಮೇವು ಲಭ್ಯವಿದೆ. ಜಿಲ್ಲೆಯಲ್ಲಿ ಒಟ್ಟು ಶೇ.೬.೯೧ರಷ್ಟು ನೀರಾವರಿ ಕೃಷಿ ಬೆಳೆಗಳ ಬಿತ್ತನೆ ಆಗಿದೆ. ಪ್ರಸ್ತುತ ೯೬೭೫ ಮೆ. ಟನ್ ನಷ್ಟು ರಸಗೊಬ್ಬರ ದಾಸ್ತಾನು ಲಭ್ಯವಿದೆ ಎಂದು ಸಂಬಂಧಿಸಿದ ಅಧಿಕಾರಿಗಳು ಸಭೆಗ ಮಾಹಿತಿ ನೀಡಿದರು.ಈ ಸಂದರ್ಭದಲ್ಲಿ ಜಿಪಂ ಸಿಇಓ ಡಾ. ಪ್ರವೀಣ್ ಪಿ.ಬಾಗೇವಾಡಿ, ಎಡಿಸಿ ಮಂಗಳ ಇದ್ದರು.