ಬಾಲ್ಯವಿವಾಹ ನಿಷೇಧ, ಪೋಕ್ಸೋ ಕಾಯ್ದೆಗಳ ಜಾಗೃತಿ ಮೂಡಿಸಿ-ಜಿಲ್ಲಾಧಿಕಾರಿ

| Published : Feb 02 2025, 01:02 AM IST

ಬಾಲ್ಯವಿವಾಹ ನಿಷೇಧ, ಪೋಕ್ಸೋ ಕಾಯ್ದೆಗಳ ಜಾಗೃತಿ ಮೂಡಿಸಿ-ಜಿಲ್ಲಾಧಿಕಾರಿ
Share this Article
  • FB
  • TW
  • Linkdin
  • Email

ಸಾರಾಂಶ

ಬಾಲ್ಯವಿವಾಹ ನಿಷೇಧ ಕಾಯ್ದೆ, ಪೋಕ್ಸೋ ಕಾಯ್ದೆ, ಬಾಲ ಕಾರ್ಮಿಕ ನಿಷೇಧ ಕಾಯ್ದೆ ಸೇರಿದಂತೆ ವಿವಿಧ ಕಾಯ್ದೆಗಳ ಬಗ್ಗೆ ಸಾರ್ವಜನಿಕರಿಗೆ ಹೆಚ್ಚಿನ ಜಾಗೃತಿ ಮೂಡಿಸಬೇಕು. ಆಯಾ ಕ್ಷೇತ್ರದಲ್ಲಿ ಕೆಲಸ ಮಾಡುವವರು ಅತ್ಯಂತ ಕ್ರಿಯಾಶೀಲರಾಗಿ ಕೆಲಸ ಮಾಡಬೇಕು ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಸೂಚನೆ ನೀಡಿದರು.

ಹಾವೇರಿ: ಬಾಲ್ಯವಿವಾಹ ನಿಷೇಧ ಕಾಯ್ದೆ, ಪೋಕ್ಸೋ ಕಾಯ್ದೆ, ಬಾಲ ಕಾರ್ಮಿಕ ನಿಷೇಧ ಕಾಯ್ದೆ ಸೇರಿದಂತೆ ವಿವಿಧ ಕಾಯ್ದೆಗಳ ಬಗ್ಗೆ ಸಾರ್ವಜನಿಕರಿಗೆ ಹೆಚ್ಚಿನ ಜಾಗೃತಿ ಮೂಡಿಸಬೇಕು. ಆಯಾ ಕ್ಷೇತ್ರದಲ್ಲಿ ಕೆಲಸ ಮಾಡುವವರು ಅತ್ಯಂತ ಕ್ರಿಯಾಶೀಲರಾಗಿ ಕೆಲಸ ಮಾಡಬೇಕು ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಸೂಚನೆ ನೀಡಿದರು. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಕ್ಕಳ ಸಹಾಯವಾಣಿ ಪ್ರಗತಿ ಪರಿಶೀಲನಾ ಸಮಿತಿ, ಜಿಲ್ಲಾ ಮಟ್ಟದ ಸ್ವತಂತ್ರ ವಿಶೇಷ ಕಾರ್ಯಪಡೆ ಸಮಿತಿ, ಮಗಳನ್ನು ಉಳಿಸಿ ಮಗಳನ್ನು ಓದಿಸಿ, ಮಹಿಳೆಯರ ಮತ್ತು ಮಕ್ಕಳ ಸಾಗಾಣಿಕೆ ತಡೆಗಟ್ಟುವ ಜಿಲ್ಲಾ ಮಟ್ಟದ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಜಿಲ್ಲೆಯಲ್ಲಿ ಬಾಲಗರ್ಭಿಣಿಯರು, ಪೋಕ್ಸೋ ಪ್ರಕರಣ ಹಾಗೂ ಮಹಿಳಾ ದೌರ್ಜನ್ಯ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿರುವುದು ವಿಷಾದಕರ ಸಂಗತಿಯಾಗಿದೆ. ಬಾಲ್ಯ ವಿವಾಹ ತಡೆ, ಪೋಕ್ಸೋ ಪ್ರಕರಣಗಳ ತಡೆಗೆ ಕೆಳಮಟ್ಟದಲ್ಲಿ ಕೆಲಸ ಮಾಡುವ ಆಶಾ, ಅಂಗನವಾಡಿ ಕಾರ್ಯಕರ್ತೆ, ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ಹಾಗೂ ಶಿಕ್ಷಕರ ಪಾತ್ರ ಬಹುಮುಖ್ಯವಾಗಿದೆ. ಇವರ ಕಾರ್ಯವೈಖರಿ ಬದಲಾಗಬೇಕು. ಬಾಲ್ಯವಿವಾಹಗಳು ತುರ್ತಾಗಿ ನಡೆಯುವುದಿಲ್ಲ, ಹಾಗಾಗಿ ಗ್ರಾಮಗಳಲ್ಲಿ ಶಾಲೆ ಬಿಟ್ಟ ಮಕ್ಕಳ ಬಗ್ಗೆ ನಿಗಾವಹಿಸಬೇಕು. ಅವರನ್ನು ಮರಳಿ ಶಾಲೆಗೆ ದಾಖಲಿಸಲು ಪಾಲಕರ ಮನವೊಲಿಸಬೇಕು. ಜನರಿಗೆ ಕಾನೂನುಗಳ ಬಗ್ಗೆ ಮನದಟ್ಟು ಮಾಡಬೇಕು. ವಿವಿಧ ಕಾನೂನುಗಳ ಬಗ್ಗೆ ಜಾಗೃತಿ ಮೂಡಿಸುವ ಮೂಲಕ ಬಾಲ್ಯವಿವಾಹ ತಡೆಗೆ ಶ್ರಮಿಸಬೇಕು ಎಂದು ಸೂಚನೆ ನೀಡಿದರು.ಜವಾಬ್ದಾರಿ ಅರಿತು ಕೆಲಸಮಾಡಿ:ಜಿಲ್ಲೆಯಲ್ಲಿ ಬಾಲ್ಯ ವಿವಾಹ ತಡೆದ ಮಾತ್ರಕ್ಕೆ ಕರ್ತವ್ಯ ಮುಗಿಯುವುದಿಲ್ಲ. ನಿರಂತರ ಅವರ ಸಂಪರ್ಕದಲ್ಲಿರಬೇಕು. ತಮ್ಮ ಜವಾಬ್ದಾರಿ ಅರಿತು ಕೆಲಸಮಾಡಬೇಕು ಹಾಗೂ ಕಾನೂನುಗಳ ಉಲ್ಲಂಘನೆಯಾದಾಗ ವಿಧಿಸುವ ಶಿಕ್ಷೆಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಬೇಕು. ಎಲ್ಲರೂ ಸಮನ್ವಯದಿಂದ ಕಾರ್ಯನಿರ್ವಹಿಸುವ ಮೂಲಕ ಬಾಲ್ಯವಿಹಾಹ, ಬಾಲಗರ್ಭಿಣಿ, ದೌರ್ಜನ್ಯ ಸೇರಿದಂತೆ ಪ್ರಕರಣಗಳನ್ನು ತಡೆಯಲು ಸಾಧ್ಯ ಎಂದು ತಿಳಿಸಿದರು.ಗ್ರಾಮಗಳಲ್ಲಿ ಕಾರ್ಯನಿರ್ವಹಿಸುವವರು ಇಂತಹ ಪ್ರಕರಣಗಳನ್ನು ಅತ್ಯಂತ ಸೂಕ್ಷ್ಮವಾಗಿ ಗಮನಿಸಬೇಕು. ಒಂದು ವೇಳೆ ಯಾರದೂ ಗಮನಕ್ಕೆ ಬಾರದೇ ಬಾಲ್ಯವಿವಾಹಗಳು ನಡೆದರೆ ಯಾವುದೇ ಒತ್ತಡಕ್ಕೂ ಮಣಿಯದೇ ಪ್ರಕರಣ ದಾಖಲಿಸಿ, ತನಿಖೆ ನಡೆಸಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು. ನೋಟಿಸ್ ಕಳುಹಿಸಿ:ಶಿಗ್ಗಾಂವಿ ತಾಲೂಕಿನ ಬಾಲ್ಯ ವಿವಾಹ ಪ್ರಕರಣವೊಂದರಲ್ಲಿ ಜನನ ಪ್ರಮಾಣಪತ್ರ, ಶಾಲಾ ದಾಖಲಾತಿ ಹಾಗೂ ಆಧಾರ್ ಕಾರ್ಡ್‌ನಲ್ಲಿ ಜನ್ಮ ದಿನಾಂಕ ಬೇರೆಯಾಗಿದ್ದರೂ ಸಹ ದಾಖಲೆಗಳನ್ನು ಪರಿಶೀಲಿಸದೇ ಮದುವೆ ನೋಂದಣಿ ಮಾಡಿದ ಶಿಗ್ಗಾಂವಿ ಉಪ ನೋಂದಣಾಧಿಕಾರಿಗೆ ನೋಟಿಸ್ ಜಾರಿ ಮಾಡಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಗ್ರಾಮಗಳಲ್ಲಿ ಶಾಲಾ ಮಕ್ಕಳಿಂದ ಜಾಥಾ ಸೇರಿದಂತೆ ವಿವಿಧ ಕಾರ್ಯಕ್ರಮಗಳ ಆಯೋಜನೆ ಮೂಲಕ ವಿವಿಧ ಕಾನೂನುಗಳ ಬಗ್ಗೆ ಅರಿವು ಮೂಡಿಸಬೇಕು. ಮಕ್ಕಳ ಗ್ರಾಮ ಸಭೆ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.ಹಿರಿಯ ದಿವಾಣಿ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಬಿ.ಆರ್. ಮುತಾಲಿಕದೇಸಾಯಿ, ಪದವಿ ಪೂರ್ವ ಶಿಕ್ಷಣದಿಂದ ಹೊರಗುಳಿದವರ ಬಾಲ್ಯವಿವಾಹಗಳು ಹೆಚ್ಚಾಗಿ ನಡೆಯುತ್ತಿದ್ದು, ಈ ಕುರಿತು ಪದವಿ ಪೂರ್ವ ಶಿಕ್ಷಣ ಇಲಾಖೆ ಅಧಿಕಾರಿಗಳು ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಸೂಚನೆ ನೀಡಿದರು. 17 ಬಾಲ್ಯ ವಿವಾಹ ತಡೆ: ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಅನ್ನಪೂರ್ಣ ಸಂಗಳದ ಮಾತನಾಡಿ, ಕಳೆದ ಅಕ್ಟೋಬರ್‌ನಿಂದ ಡಿಸೆಂಬರ್‌ವರೆಗೆ ಒಟ್ಟು 17 ಬಾಲ್ಯ ವಿವಾಹ ತಡೆಯಲಾಗಿದೆ. ಈ ಅವಧಿಯಲ್ಲಿ ಐದು ಬಾಲ್ಯವಿವಾಹಗಳು ನಡೆದಿವೆ. 13 ಜನ ಬಾಲಗರ್ಭಿಣಿಯರು, 31 ಪೋಕ್ಸೋ ಪ್ರಕರಣಗಳು ದಾಖಲಾಗಿದೆ. ಬಾಲ್ಯ ವಿವಾಹ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಮಕ್ಕಳ ಕಲ್ಯಾಣ ಸಮಿತಿ ಮುಂದೆ ಬಂದ 127 ಪ್ರಕರಣಗಳಲ್ಲಿ ಓರ್ವ ಬಾಲಕನನ್ನು ಬಾಲಕರ ಸರ್ಕಾರಿ ಬಾಲಮಂದಿರ, ಎಂಟು ಬಾಲಕಿಯರನ್ನು ಬಾಲಕಿಯರ ಸರ್ಕಾರಿ ಬಾಲ ಮಂದಿರ, ಆರು ಮಕ್ಕಳನ್ನು ಸಹರಾ ತೆರೆದ ತಂಗುದಾಣ, ಏಳು ಮಕ್ಕಳನ್ನು ವಿನಯ ತೆರೆದ ತಂಗುದಾಣ, ಎರಡು ಮಕ್ಕಳನ್ನು ಶ್ರೀ ಶಕ್ತಿ ತೆರೆದ ತಂಗುದಾಣ ಹಾಗೂ ಒಂದು ಮಗುವನ್ನು ಸ್ಪಂದನಾ ದತ್ತು ಕೇಂದ್ರಕ್ಕೆ ಮತ್ತು 102 ಮಕ್ಕಳನ್ನು ಪೋಷಕರ ವಶಕ್ಕೆ ಒಪ್ಪಿಸಲಾಗಿದೆ. ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದ ಈ ಮೂರು ತಿಂಗಳ ಅವಧಿಯಲ್ಲಿ ಜಿಲ್ಲೆಯಲ್ಲಿ 93 ಅರಿವು ಕಾರ್ಯಕ್ರಮ ನಡೆಸಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಶ್ರೀನಿವಾಸ ಆಲದರ್ತಿ ಮಾತನಾಡಿ, ಜಿಲ್ಲೆಯ ನಗರ ಪ್ರದೇಶದಲ್ಲಿ 323 ಹಾಗೂ ಗ್ರಾಮೀಣ ಪ್ರದೇಶದಲ್ಲಿ 1668 ಸೇರಿ ಒಟ್ಟು 1991 ಅಂಗನವಾಡಿಗಳು ಕಾರ್ಯನಿರ್ವಹಿಸುತ್ತಿದೆ. ಮಕ್ಕಳಿಗೆ ಅಂಗನವಾಡಿ ಕೇಂದ್ರಗಳಲ್ಲಿ ಮಾತೃಪೂರ್ಣ ಯೋಜನೆಯಡಿ ನಿಯಮಾನುಸಾರ ಪೌಷ್ಟಿಕ ಆಹಾರ ವಿತರಣೆ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ 91 ಅಪೌಷ್ಟಿಕ ಮಕ್ಕಳಿದ್ದು, ಈ ಮಕ್ಕಳಿಗೆ ಅಗತ್ಯ ಪೌಷ್ಟಿಕ ಆಹಾರ ಹಾಗೂ ಚಿಕಿತ್ಸೆ ನೀಡಲಾಗುತ್ತಿದೆ. ಶಕ್ತಿಸದನ, ಸಖಿ ಒನ್ ಸ್ಟಾಪ್ ಸೆಂಟರ್ ಸೇರಿದಂತೆ ವಿವಿಧ ಯೋಜನೆಗಳ ಕಾರ್ಯನಿರ್ವಹಣೆ ಬಗ್ಗೆ ಸಭೆಗೆ ಮಾಹಿತಿ ನೀಡಿದರು. ಇದೇ ಸಂದರ್ಭದಲ್ಲಿ ಮಕ್ಕಳ ಸಹಾಯವಾಣಿ 1098 ಸಂಖ್ಯೆ ಪ್ರಚಾರ ಸಾಮಗ್ರಿಗಳನ್ನು ಜಿಲ್ಲಾಧಿಕಾರಿಗಳು ಬಿಡುಗಡೆಗೊಳಿಸಿದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ. ಎಲ್. ನಾಗರಾಜ, ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿ ಅಧ್ಯಕ್ಷೆ ಗೀತಾ ಪಾಟೀಲ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ವಿವಿಧ ಸಮಿತಿ ಸದಸ್ಯರು, ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.