ನವಜಾತ ಶಿಶುಗಳ ಸುರಕ್ಷಿತ ಆರೈಕೆ ಬಗ್ಗೆ ಜಾಗೃತಿ ಮೂಡಿಸಿ: ಜಿಲ್ಲಾಧಿಕಾರಿ

| Published : May 09 2025, 12:31 AM IST

ನವಜಾತ ಶಿಶುಗಳ ಸುರಕ್ಷಿತ ಆರೈಕೆ ಬಗ್ಗೆ ಜಾಗೃತಿ ಮೂಡಿಸಿ: ಜಿಲ್ಲಾಧಿಕಾರಿ
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲೆಯಲ್ಲಿ 2023-24ರಲ್ಲಿ ವಿವಿಧ ಆರೋಗ್ಯ ಸಂಬಂಧಿತ ಮತ್ತು ಇತರೆ ಕಾರಣಗಳಿಂದಾಗಿ 138 ನವಜಾತು ಶಿಶುಗಳ ಮರಣ ಹೊಂದಿದೆ.

ಕಾರವಾರ: ನವಜಾತ ಶಿಶುಗಳ ಮರಣವನ್ನು ಶೂನ್ಯಕ್ಕಿಳಿಸುವ ನಿಟ್ಟಿನಲ್ಲಿ ಶಿಶುಗಳನ್ನು ಸುರಕ್ಷಿತವಾಗಿ ಆರೈಕೆ ಮಾಡುವ ಕುರಿತಂತೆ ಜಿಲ್ಲೆಯಾದ್ಯಂತ ವ್ಯಾಪಕ ರೀತಿಯಲ್ಲಿ ಜಾಗೃತಿ ಮತ್ತು ಅರಿವು ಕಾರ್ಯಕ್ರಮಗಳನ್ನು ಆಯೋಜಿಸುವಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಸೂಚನೆ ನೀಡಿದರು.

ಅವರು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಆರೋಗ್ಯ ಇಲಾಖೆಯ ವಿವಿಧ ಸಮಿತಿಯ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲೆಯಲ್ಲಿ 2023-24ರಲ್ಲಿ ವಿವಿಧ ಆರೋಗ್ಯ ಸಂಬಂಧಿತ ಮತ್ತು ಇತರೆ ಕಾರಣಗಳಿಂದಾಗಿ 138 ನವಜಾತು ಶಿಶುಗಳ ಮರಣ ಹೊಂದಿದ್ದು, 2024-25 ರಲ್ಲಿ ಈ ಸಂಖ್ಯೆ 103ಕ್ಕಿಳಿದಿದೆ. ಆದರೂ ಈ ಸಂಖ್ಯೆಯನ್ನು ಶೂನ್ಯಕ್ಕಿಳಿಸುವ ನಿಟ್ಟಿನಲ್ಲಿ ಶಿಶುಗಳನ್ನು ಆರೈಕೆ ಮಾಡುವ ಕ್ರಮಗಳ ಕುರಿತಂತೆ ಎಲ್ಲ ಗರ್ಭಿಣಿ ಮತ್ತು ಬಾಣಂತಿಯರಿಗೆ ಅವರು ಆಸ್ಪತ್ರೆಯಿಂದ ಮನೆಗೆ ಹೋಗುವ ಪೂರ್ವದಲ್ಲಿ ಆರೋಗ್ಯ ಕೇಂದ್ರದ ವೈದ್ಯರು ಸವಿವರವಾಗಿ ಜಾಗೃತಿ ಮೂಡಿಸಬೇಕು ಎಂದರು.

ಆಶಾ ಕಾರ್ಯಕರ್ತೆಯರು ತಮ್ಮ ವ್ಯಾಪ್ತಿಯ ಗರ್ಭಿಣಿ ಮತ್ತು ಬಾಣಂತಿ ಮಹಿಳೆಯರ ಮನೆಗಳಿಗೆ ಭೇಟಿ ನೀಡಿ ಮಗುವಿನ ಆರೈಕೆ ಬಗ್ಗೆ ಮಾಹಿತಿ ನೀಡುವುದರ ಜೊತೆಗೆ ಶಿಶುಗಳ ಆರೈಕೆ ಬಗ್ಗೆ ಪರಿಶೀಲಿಸಿ, ಹೆಚ್ಚಿನ ಆರೈಕೆಯ ಅಗತ್ಯ ಕಂಡು ಬಂದಲ್ಲಿ ಕೂಡಲೇ ಸಮೀಪದ ಆರೋಗ್ಯ ಕೇಂದ್ರಗಳಿಗೆ ದಾಖಲು ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ತಾಯಿಯರ ಮರಣ ತಪ್ಪಿಸುವ ನಿಟ್ಟಿನಲ್ಲಿ ತಾಯಿಯರ ಆರೋಗ್ಯದ ಕುರಿತಂತೆ ರೂಪಿಸಿರುವ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು, ಅವರಿಗೆ ನೀಡಲಾಗುವ ತಾಯಿ ಕಾರ್ಡ್‌ನಲ್ಲಿ ಆರೋಗ್ಯ ಸ್ಥಿತಿಗತಿಯ ಸಂಪೂರ್ಣ ವಿವರಗಳನ್ನು ದಾಖಲಿಸುವುದರ ಜೊತೆಗೆ ಎಲ್ಲಾ ಅಗತ್ಯ ಪರೀಕ್ಷೆಗಳನ್ನು ನಡೆಸಿ ಅಗತ್ಯವಿರುವ ಔಷಧ ಮತ್ತು ಮಾತ್ರೆಗಳನ್ನು ವಿತರಿಸಬೇಕು ಮತ್ತು ಪ್ರತೀ ತಿಂಗಳು ಕಾರ್ಡ್‌ನ ಪರಿಶೀಲನೆ ಮಾಡಬೇಕು, ಮಕ್ಕಳು ಮತ್ತು ಗರ್ಭಿಣಿಯರ ಲಸಿಕೆ ವಿತರಣೆ ಕಾರ್ಯಕ್ರಮದಲ್ಲಿ ಶೇ.100 ಸಾಧನೆ ಮಾಡಬೇಕು ಎಂದರು.

ಸರ್ಕಾರಿ ಕಚೇರಿಗಳಲ್ಲಿ ಯಾವುದೇ ರೀತಿಯ ತಂಬಾಕು ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಿ, ಅವುಗಳನ್ನು ತಂಬಾಕು ಮುಕ್ತ ಸ್ಥಳಗಳನ್ನಾಗಿ ಮಾಡಲು ಕ್ರಮ ಕೈಗೊಂಡು ತಂಬಾಕು ಮುಕ್ತ ಕಚೇರಿ ಎಂದು ಅಧಿಕೃತವಾಗಿ ಘೋಷಣೆ ಮಾಡಬೇಕು, ಜಿಲ್ಲೆಯ ಪ್ರತೀ ೨ ತಾಲೂಕಿನ ಎರಡು ಗ್ರಾಮಗಳನ್ನು ತಂಬಾಕು ಮುಕ್ತ ಗ್ರಾಮಗಳನ್ನಾಗಿ ಘೋಷಣೆ ಮಾಡಲು ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.

ಪ್ರಸ್ತುತ ಸಂದರ್ಭದಲ್ಲಿ ಯಾವುದೇ ಸಮಯದಲ್ಲಿ ಜಿಲ್ಲೆಯಾದ್ಯಂತ ಎಲ್ಲ ಆರೋಗ್ಯ ಕೇಂದ್ರಗಳಲ್ಲಿ ವೈದ್ಯಕೀಯ ಸೌಲಭ್ಯಗಳ ಕೊರತೆ ಕಂಡು ಬಾರದಂತೆ ಮುನ್ನೆಚ್ಚರಿಕೆ ವಹಿಸಬೇಕು. ಆ್ಯಂಬುಲೆನ್ಸ್‌ಗಳು ಮತ್ತು ವೈದ್ಯಕೀಯ ಉಪಕರಣಗಳು ಸುಸ್ಥಿತಿಯಲ್ಲಿರುವುವಂತೆ ಮತ್ತು ಯಾವುದೇ ಸಂದರ್ಭದಲ್ಲಿ ಆಸ್ಪತ್ರೆಗಳಲ್ಲಿ ರಕ್ತದ ಕೊರತೆಯಾಗದಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಜಿಪಂ ಉಪ ಕಾರ್ಯದರ್ಶಿ ನಾಗೇಶ್ ರಾಯ್ಕರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನೀರಜ್, ಡಾ.ನಟರಾಜ್, ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ. ಕ್ಯಾ.ರಮೇಶ್ ರಾವ್ ಇದ್ದರು.