ಸಾರಾಂಶ
ಬಾಗಲಕೋಟೆ ಜಿಪಂ ನೂತನ ಸಭಾಂಗಣದಲ್ಲಿ ಗುರುವಾರ ಜರುಗಿದ 2025-26ನೇ ಸಾಲಿನ ಎರಡನೇ ತ್ರೈಮಾಸಿಕ ದಿಶಾ ಪ್ರಗತಿ ಪರಿಶೀಲನೆ ಸಭೆ ಸಂಸದ ಪಿ.ಸಿ. ಗದ್ದಿಗೌಡರ ನೇತೃತ್ವದಲ್ಲಿ ನಡೆಯಿತು.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಬೆಳೆಹಾನಿ ಅಪಾಯ ತಪ್ಪಿಸಲು ರೈತರಲ್ಲಿ ಬೆಳೆವಿಮೆ ಬಗ್ಗೆ ಹೆಚ್ಚಿನ ಅರಿವು ಮೂಡಿಸುವ ಕಾರ್ಯ ಮಾಡಬೇಕು ಎಂದು ಸಂಸದ ಪಿ.ಸಿ. ಗದ್ದಿಗೌಡರ ಸೂಚಿಸಿದರು.ಜಿಪಂನೂತನ ಸಭಾಂಗಣದಲ್ಲಿ ಗುರುವಾರ ಜರುಗಿದ 2025-26ನೇ ಸಾಲಿನ ಎರಡನೇ ತ್ರೈಮಾಸಿಕ ದಿಶಾ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಈ ಬಾರಿ ಮೊದಲಿಗಿಂತ ಅಧಿಕ ಪ್ರಮಾಣದಲ್ಲಿ ಈರುಳ್ಳಿ, ದಾಳಿಂಬೆ ಬೆಳೆಯಲಾಗಿದ್ದು, ರೈತರು ಮೊದಲೇ ಬೆಳೆವಿಮೆ ಮಾಡಿಸಿಕೊಂಡಿದ್ದಲ್ಲಿ, ಬೆಳೆ ಹಾನಿಯಂತಹ ಅಪಾಯ ಸಮರ್ಥವಾಗಿ ಎದುರಿಸಬಹುದಾಗಿದೆ ಎಂದು ಹೇಳಿದರು.
ಬಾಗಲಕೋಟೆ-ಕುಡಚಿ ರೈಲು ಮಾರ್ಗ ಕಾಮಗಾರಿ ಸ್ಥಿತಿಗತಿ ಪರಿಶೀಲಿಸಿ, ಕೇಂದ್ರದಲ್ಲಿ ಇದಕ್ಕೆ ಸಂಬಂಧಿಸಿದಂತೆ ಅನುದಾನ ಮತ್ತು ಸಂಪನ್ಮೂಲಕ್ಕೆ ಕೊರತೆ ಇರುವುದಿಲ್ಲ. ಆದರೆ ಭೂ ಮಾಲೀಕರ ಕುಟುಂಬ ವಾಜ್ಯ ಮತ್ತು ಇತರೆ ಕೇಸ್ ವಿಚಾರದಿಂದ ಈಗಾಗಲೇ ಯೋಜನೆ ವಿಳಂಬವಾಗಿದೆ. ಸ್ಥಳಿಯ ಸಮಸ್ಯೆಗಳನ್ನ ಬೇಗ ಪರಿಹರಿಸಿಕೊಳ್ಳುವಂತೆ ಅವರು ಜಿಲ್ಲಾಡಳಿತ ಮತ್ತು ರೈಲ್ವೆ ಅಧಿಕಾರಿಗಳಿಗೆ ಸೂಚನೆ ನೀಡಿದರು.ಜಲಜೀವನ್ ಮೀಶನ್ ಯೋಜನೆಯಡಿ ಪೂರ್ಣಗೊಳಿಸಿದ 608 ಕಾಮಗಾರಿಗಳಲ್ಲಿ ಯಾವುದಾದರೂ ಒಂದರ ಪೈಕಿ ದೂರು ಬಂದರೂ ಕೂಡ ತಕ್ಷಣ ಪರಿಶೀಲಿಸುವ ಕಾರ್ಯವಾಗಬೇಕು. ಪ್ರಧಾನಮಂತ್ರಿ ಆವಾಸ್ ಯೋಜನೆಗಳ ಮೊತ್ತ ಹೆಚ್ಚಳಗೊಳಿಸುವಂತೆ ಸರ್ಕಾರಕ್ಕೆ ಮನವಿ ಮಾಡಲಾಗುವುದು. ಎರಡನೇ ಹಂತದಲ್ಲಿರುವ ಪ್ರಧಾನ ಮಂತ್ರಿ ಆವಾಸ್ ಯೋಜನೆ ಫಲಾನುಭವಿಗಳ ಅಂಕಿ ಸಂಖ್ಯೆಗಳ ಕುರಿತು ಮಾಹಿತಿ ನೀಡುವಂತೆ ತಿಳಿಸಿದರು.
ಜಿಲ್ಲೆಯಲ್ಲಿ ಪೋಕ್ಸೋ ಪ್ರಕರಣಗಳ ನಿಯಂತ್ರಣಕ್ಕೆ ಸೂಕ್ತ ಜಾಗೃತಿ ಅಗತ್ಯವಾಗಿದೆ. ಪ್ರಕರಣಗಳಲ್ಲಿ ಶಿಕ್ಷೆಗೊಳಗಾದವರ ಮತ್ತು ದಂಡದ ಮೊತ್ತದ ಕುರಿತು ಪ್ರಚಾರ ನೀಡಿದಲ್ಲಿ, ಭಯದಿಂದ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತವೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯೊಂದಿಗೆ ಸಂಬಂಧಿಸಿದ ಇಲಾಖೆಗಳು ಜಂಟಿಯಾಗಿ ಪ್ರಮುಖವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಕಾನೂನಿನ ಕುರಿತು ಅರಿವು ಮೂಡಿಸುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು. ಕಾರ್ಮಿಕ ಇಲಾಖೆಯ ವಿವಿಧ ಯೋಜನೆಗಳಿಗೆ ಸಾಕಷ್ಟು ಜನರು ನೋಂದಣಿಯಾಗಿದ್ದು, ನಿಜವಾದ ಕಾರ್ಮಿಕರನ್ನು ಗುರುತಿಸಿ, ಅರ್ಹ ಫಲಾನುಭವಿಗಳಿಗೆ ಸೌಲಭ್ಯ ನೀಡುವ ಕೆಲಸ ಅಧಿಕಾರಿಗಳಿಂದ ಆಗಬೇಕಿದೆ ಎಂದರು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪ್ಯಾಕೇಜ್ 3 ಮತ್ತು 4ರ ಕಾಮಗಾರಿಯ ಪ್ರಗತಿ ಮತ್ತು ಸಮಸ್ಯೆಗಳ ಕುರಿತು ಚರ್ಚಿಸಲಾಯಿತು.ಸಭೆಯಲ್ಲಿ ರಾಜ್ಯಸಭಾ ಸದಸ್ಯ ನಾರಾಯಣಸಾ ಕೆ. ಭಾಂಡಗೆ, ಜಿಲ್ಲಾಧಿಕಾರಿ ಸಂಗಪ್ಪ, ಜಿಪಂ ಸಿಇಒ ಶಶಿಧರ ಕುರೇರ್ ಇನ್ನಿತರರು ಉಪಸ್ಥಿತರಿದ್ದರು.