ಸಾರಾಂಶ
- ಸಾಂಕ್ರಾಮಿಕ ರೋಗಗಳ ತಡೆಗಟ್ಟುವ ಕುರಿತು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಪೂರ್ವ ಸಿದ್ಧತಾ ಸಭೆ
ಕನ್ನಡಪ್ರಭ ವಾರ್ತೆ,ಚಿಕ್ಕಮಗಳೂರುಮಳೆಗಾಲ ಆರಂಭವಾಗುತ್ತಿದ್ದಂತೆ ಜಿಲ್ಲೆಯಲ್ಲಿ ಡೆಂಘೀ ಪ್ರಕರಣಗಳು ಕಂಡು ಬರುತ್ತಿದ್ದು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಜನರಲ್ಲಿ ಜಾಗೃತಿ ಮೂಡಿಸುವಂತೆ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.ಸಾಂಕ್ರಾಮಿಕ ರೋಗಗಳ ಹರಡುವಿಕೆ ತಡೆಗಟ್ಟುವ ಸಂಬಂಧ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಪೂರ್ವ ಸಿದ್ಧತಾ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಗ್ರಾಮೀಣ ಪ್ರದೇಶಗಳಿಗೆ ಹೋಲಿಸಿದರೆ ನಗರ ಪ್ರದೇಶಗಳಲ್ಲಿ ಹೆಚ್ಚು ಡೆಂಘೀ ಪ್ರಕರಣಗಳು ದಾಖಲಾಗಿವೆ. ಚಿಕ್ಕಮಗಳೂರು ತಾಲೂಕಿನಲ್ಲಿ ಹೆಚ್ಚು ಪ್ರಕರಣಗಳು ಕಂಡು ಬಂದಿದ್ದು, ಅಗತ್ಯ ಮುನ್ನೆಚ್ಚರಿಕೆ ಕೈಗೊಳ್ಳಲು ಜನರಲ್ಲಿ ಜಾಗೃತಿ ಮೂಡಿಸಬೇಕು. ನಗರ ಪ್ರದೇಶದ ಪ್ರತಿ ವಾರ್ಡ್‌ಗಳಲ್ಲಿ ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸೊಳ್ಳೆ ಗಳ ನಿಯಂತ್ರಣಕ್ಕೆ ಫಾಂಗಿಂಗ್ ಮಾಡುವಂತೆ ನಗರಸಭೆ ಹಾಗೂ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಸೂಚಿಸಿದ ಅವರು, ಪ್ರತಿ ಮನೆಗಳಲ್ಲಿ ಲಾರ್ವಾ ಸಮೀಕ್ಷೆ ನಡೆಸುವಂತೆ ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಅಶ್ವಥಬಾಬು ಮಾತನಾಡಿ, ಮಳೆಗಾಲದ ಆರಂಭದಲ್ಲಿ ಅಂದರೆ ಜೂನ್, ಜುಲೈ, ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ಸಾಮಾನ್ಯವಾಗಿ ಡೆಂಘೀ ಜ್ವರ ಕಾಣಿಸಿಕೊಳ್ಳುತ್ತದೆ. ಈ ಅವಧಿಯಲ್ಲಿ ವೈರಲ್ ಜ್ವರ ಹೆಚ್ಚಾಗಿ ಕಂಡುಬರುತ್ತದೆ. ಎಲ್ಲಾ ಜ್ವರ ಡೆಂಘೀ ಆಗಿರುವುದಿಲ್ಲ. ಈಡೀಸ್ ಈಜಿಪ್ಟ್ ಎಂಬ ಸೊಳ್ಳೆಯಿಂದ ಡೆಂಘೀ ಹರಡುತ್ತದೆ. ಈ ಸೊಳ್ಳೆಗಳು ಸ್ವಚ್ಛವಾದ ನೀರನ್ನೆ ಆವಾಸ ಸ್ಥಾನವನ್ನಾಗಿ ಮಾಡಿಕೊಂಡಿರುತ್ತವೆ. ನೀರಿನಲ್ಲಿ ಮೊಟ್ಟೆ ಇಟ್ಟು 8 ರಿಂದ 11 ದಿನಗಳಲ್ಲಿ ಸೊಳ್ಳೆ ಹೊರ ಬರುತ್ತದೆ. ಹಗಲು ಹೊತ್ತಿನಲ್ಲೇ ಇವು ಮನುಷ್ಯರನ್ನು ಕಚ್ಚುತ್ತವೆ ಎಂದರು.ಡೆಂಘೀ ಹರಡುವುದಕ್ಕೂ ಮೊದಲೇ ಜನರು ಅಗತ್ಯ ಮುನ್ನೆಚ್ಚರಿಕೆ ಕೈಗೊಳ್ಳಬೇಕು. ನಮ್ಮ ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟು ಕೊಳ್ಳುವುದು ಅತಿ ಮುಖ್ಯ. ಹೆಚ್ಚು ದಿನಗಳ ಕಾಲ ನೀರನ್ನು ಶೇಖರಿ ಸಿಡುವುದನ್ನು ತಪ್ಪಿಸಬೇಕು.ಸಿಮೆಂಟ್ ತೊಟ್ಟಿ ನೀರು ತುಂಬಿಸುವ ಪಾತ್ರೆಗಳನ್ನು ನೀರು ತುಂಬಿಸುವ ಪೂರ್ವದಲ್ಲಿ ಚೆನ್ನಾಗಿ ತೊಳೆದು ಸರಿಯಾಗಿ ಮುಚ್ಚಳ ಮುಚ್ಚುವ ಮೂಲಕ ಸೊಳ್ಳೆ ನಿಯಂತ್ರಣ ಕೈಗೊಳ್ಳಬೇಕು. ಘನ ತ್ಯಾಜ್ಯಗಳಾದ ಟೈಯರ್, ಎಳನೀರು ಚಿಪ್ಪು, ಒಡೆದ ಪ್ಲಾಸ್ಟಿಕ್ ವಸ್ತುಗಳು ಹಾಗೂ ಅನುಪಯುಕ್ತ ವಸ್ತು ಇವುಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಮನೆಯ ಸುತ್ತಮುತ್ತಲಿನ ಸ್ವಚ್ಛತೆಗೆ ಹೆಚ್ಚು ಆದ್ಯತೆ ನೀಡುವಂತೆ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಗೋಪಾಲಕೃಷ್ಣ, ಜಿಲ್ಲಾ ರೋಗವಾಹಕ ಆಶ್ರಿತ ನಿಯಂತ್ರಣಾಧಿಕಾರಿ ಡಾ. ಬಾಲಕೃಷ್ಣ, ಜಿಲ್ಲಾ ಆರ್‌ಸಿಎಚ್ ಡಾ. ಮಂಜುನಾಥ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಭರತ್ ಕುಮಾರ್, ಚಿಕ್ಕಮಗಳೂರು ತಾಲೂಕು ಆರೋಗ್ಯ ಅಧಿಕಾರಿ ಡಾ. ಸೀಮಾ, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ. ಹರೀಶ್ ಬಾಬು, ನಗರಸಭೆ ಅಧಿಕಾರಿಗಳು ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಹಾಜರಿದ್ದರು.
ಪೋಟೋ ಫೈಲ್ ನೇಮ್ 2 ಕೆಸಿಕೆಎಂ 5ಸಾಂಕ್ರಾಮಿಕ ರೋಗಗಳ ಹರಡುವಿಕೆ ತಡೆಗಟ್ಟುವ ಸಂಬಂಧ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಅಧ್ಯಕ್ಷತೆಯಲ್ಲಿ ಪೂರ್ವ ಸಿದ್ಧತಾ ಸಭೆ ನಡೆಯಿತು.