ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ಮಾದಕ ದ್ರವ್ಯ ಸೇವನೆಯಿಂದಾಗುವ ದುಷ್ಪರಿಣಾಮಗಳ ಕುರಿತು ಸಾರ್ವಜನಿಕರಿಗೆ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಅರಿವು ಮೂಡಿಸಬೇಕು ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ಅಧಿಕಾರಿಗಳಿಗೆ ಸೂಚನೆ ನೀಡಿದರು.ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಮಾದಕ ದ್ರವ್ಯಗಳ ನಿರ್ಮೂಲನಾ ಸಮಿತಿ ಜಿಲ್ಲಾ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಜಿಲ್ಲೆಯಲ್ಲಿ ಮಾದಕ ದ್ರವ್ಯಗಳ ನಿರ್ಮೂಲನೆಗಾಗಿ ಸಂಬಂಧಿಸಿದ ಇಲಾಖೆಗಳು ಸಮನ್ವಯತೆಯಿಂದ ಅಗತ್ಯ ಜಾಗೃತಿ- ತಿಳುವಳಿಕೆ ಮೂಡಿಸಬೇಕು. ಔಷಧ ನಿಯಂತ್ರಕ ಇಲಾಖೆ ಮಾದಕ ಅಂಶಗಳನ್ನುಳ್ಳ ಔಷಧಿ ಮಳಿಗೆಗಳಲ್ಲಿ ಕಡ್ಡಾಯವಾಗಿ ವೈದ್ಯರ ಅನುಮತಿ ಚೀಟಿಯೊಂದಿಗೆ ಮಾರಾಟಕ್ಕೆ ಮಾತ್ರ ಅವಕಾಶ ಒದಗಿಸಬೇಕು. ಈ ಕುರಿತು ಜಿಲ್ಲೆಯಲ್ಲಿ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ತೀವ್ರ ನಿಗಾ ಇಡಬೇಕು. ನಿಯಮಿತವಾಗಿ ಈ ಕುರಿತು ವರದಿ ಸಲ್ಲಿಸಬೇಕು ಎಂದು ಸೂಚನೆ ನೀಡಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮಾದಕ ದ್ರವ್ಯಗಳ ಸೇವನೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ತಿಳಿಸುವುದಲ್ಲದೇ, ಮಾದಕ ದ್ರವ್ಯಗಳ ನಿರ್ಮೂಲನೆಗೆ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಮಾದಕ ದ್ರವ್ಯಗಳ ಪರೀಕ್ಷಾ ಕಿಟ್‌ಗಳನ್ನು ಜಿಲ್ಲಾ ಹಾಗೂ ತಾಲೂಕು ಆಸ್ಪತ್ರೆಯಲ್ಲಿ ಬಳಸಲು ಕ್ರಮಕೈಗೊಳ್ಳಬೇಕು. ಮಾದಕ ದ್ರವ್ಯ ಪರೀಕ್ಷೆ ನಡಸುವುದರಿಂದ ಮಾದಕ ದ್ರವ್ಯ ಸೇವನೆ ಪ್ರಮಾಣ ಕಡಿಮೆಗೊಳಿಸಬಹುದು. ದುಷ್ಪರಿಣಾಮ ತಗ್ಗಿ ಅವರು ಸುಂದರ ಜೀವನ ರೂಪಿಸಿಕೊಳ್ಳಲು ಸಹಾಯವಾಗುವುದು. ಕಿಟ್ ತರಿಸಿಕೊಳ್ಳಲು ಈ ಬಗ್ಗೆ ಸಂಬಂಧಿಸಿದ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಬೇಕು ಎಂದು ಹೇಳಿದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಮಾತನಾಡಿ, ಮಾದಕ ದ್ರವ್ಯ ನಿರ್ಮೂಲನೆಗೆ ಸಂಬಂಧಿಸಿದ ಇಲಾಖೆಗಳ ಸಹಯೋಗ ಅಗತ್ಯವಾಗಿದ್ದು, ಇಲಾಖೆಯು ಈ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಂಡಿದೆ. ಅಬಕಾರಿ ಇಲಾಖೆ ತಮ್ಮ ವ್ಯಾಪ್ತಿಯಲ್ಲಿ ಮಾದಕ ದ್ರವ್ಯ ಮಾರಾಟ, ಸಂಗ್ರಹಣೆ ಬಗ್ಗೆ ತೀವ್ರ ನಿಗಾ ಇಡಬೇಕು. ಕೇಂದ್ರ ಸರ್ಕಾರವು ಹಾಗೂ ರಾಜ್ಯ ಸರ್ಕಾರವು ಮಾದಕ ದ್ರವ್ಯ ನಿರ್ಮೂಲನೆಗೆ ಅನೇಕ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿವೆ. ಈ ಕುರಿತು ಪೋರ್ಟಲ್ ಸಹ ಅಭಿವೃದ್ಧಿಪಡಿಸಿದ್ದಾರೆ ಎಂಬುದನ್ನು ತಿಳಿಸಿದರು.ಈ ಸಭೆಯಲ್ಲಿ ವಿಜಯಪುರ ಉಪವಿಭಾಗಾಧಿಕಾರಿ ಗುರುನಾಥ ದಡ್ಡೆ, ಇಂಡಿ ಉಪವಿಭಾಗಾಧಿಕಾರಿ ಆಬೀದ ಗದ್ಯಾಳ, ಮಹಾನಗರ ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ, ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರ ಸಿ.ಎಸ್.ಪೊಲೀಸ್ ಪಾಟೀಲ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಸಂಪತ್ ಗುಣಾರಿ, ಜಿಲ್ಲಾ ಶಸ್ತ್ರಚಿಕಿತ್ಸಕ ಶಿವಾನಂದ ಮಾಸ್ತ್ತಿಹೋಳಿ, ಪೀಟರ್ ಅಲೆಕ್ಸಾಂಡರ್ ಸೇರಿದಂತೆ ಮುಂತಾದವರು ಇದ್ದರು.
ಬಾಕ್ಸ್3 ವರ್ಷದಲ್ಲಿ ಜಪ್ತಿಯಾದ ಗಾಂಜಾ ಎಷ್ಟು..?
ಜಿಲ್ಲೆಯಾದ್ಯಂತ ಕಳೆದ ೩ ವರ್ಷಗಳಲ್ಲಿ ಎನ್‌ಡಿಪಿಎಸ್ ಕಾಯ್ದೆಯಡಿಯಲ್ಲಿ ೨೦೨೩ ರಲ್ಲಿ ೨೯ ಪ್ರಕರಣಗಳನ್ನು ದಾಖಲಿಸಿ ೨೯೬ ಕೆ.ಜಿ. ೪೦೩ ಗ್ರಾಂ. ಮಾದಕ ದ್ರವ್ಯ ಜಪ್ತಿ ಮಾಡಲಾಗಿದೆ. ೨೦೦ ಕೆಜಿ ೪೦೦ ಗ್ರಾಂ ಗಾಂಜಾ ನಾಶಪಡಿಸಿಲಾಗಿದೆ. ಅದರಂತೆ ೨೦೨೪ನೇ ಸಾಲಿನಲ್ಲಿ ೨೮ ಪ್ರಕರಣಗಳನ್ನು ದಾಖಲಿಸಿ, ೨೯೭ ಕೆಜಿ ೮೭೨ ಗ್ರಾಂ ಗಾಂಜಾ ಜಪ್ತಿ ಮಾಡಿದೆ. ೩೭೩ ಕೆಜಿ ೫೭೪ ಗ್ರಾಂ ಗಾಂಜಾ ನಾಶಪಡಿಸಲಾಗಿದೆ. ೨೦೨೫ರಲ್ಲಿ ೨೮೩ ಕೆಜಿ ೮೦೮ ಗ್ರಾಂ ಗಾಂಜಾ ಹಾಗೂ ೧೮ ಕೆಜಿ ೪೩೨ ಗ್ರಾಂ ಅಫೀಮು ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.