ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಜಿಲ್ಲೆಯಲ್ಲಿರುವ ಬಸ್ ನಿಲ್ದಾಣಗಳು,ಕೈಗಾರಿಕೆಗಳು, ಕಟ್ಟಡ ನಿರ್ಮಾಣ ಸ್ಥಳಗಳು, ಕಲ್ಲು ಕ್ವಾರಿ, ಗಣಿಗಾರಿಕೆ ಸ್ಥಳಗಳು ಸೇರಿದಂತೆ ಜನಸಂದಣಿ ಪ್ರದೇಶಗಳಲ್ಲಿನ ಶ್ರಮಿಕ ವರ್ಗದವರಿಗೆ ತಂಬಾಕು ಉತ್ಪನ್ನಗಳ ಬಳಕೆಯ ದುಷ್ಪರಿಣಾಮಗಳ ಕುರಿತು ತಿಳಿಸಿಕೊಡಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ.ಎನ್.ತಿಪ್ಪೇಸ್ವಾಮಿ ಅಧಿಕಾರಿಗಳಿಗೆ ಸೂಚನೆ ನೀಡಿದರು.ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಜಿಲ್ಲಾ ತಂಬಾಕು ನಿಯಂತ್ರಣ ಕಾರ್ಯಕ್ರಮ ಕಾಯ್ದೆಯ ತ್ರೈಮಾಸಿಕ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರಗತಿ ಪರಿಶೀಲನಾ ಸಭೆ ನಡೆಸಿಕೊಟ್ಪಾ ಕಾಯ್ದೆಯನ್ನು ಯಶಸ್ವಿಯಾಗಿ ಜಿಲ್ಲೆಯಲ್ಲಿ ಅನುಷ್ಠಾನಗೊಳಿಸುವ ಸಂಬಂಧ ಎಲ್ಲಾ ಇಲಾಖೆಗಳು ಸಾಂಘಿಕವಾಗಿ ಕಾರ್ಯ ಪ್ರವೃತ್ತರಾಗಬೇಕು. ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ತಹಸೀಲ್ದಾರ್ ರವರ ನೇತೃತ್ವದಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಯಬೇಕು. ಕೊಟ್ಪಾ ಕಾಯ್ದೆ ಸೆಕ್ಷನ್ 6ಬಿ, 7, 8 ಮತ್ತು 9 ರಡಿ ಪ್ರಕರಣ ದಾಖಲಿಸಲು ಹೆಚ್ಚೆಚ್ಚು ದಾಳಿಗಳನ್ನು ಮಾಡಿ ದಂಡ ವಸೂಲಿ ಮಾಡಬೇಕು. ಕಾಲೇಜುಗಳಲ್ಲಿ, ಬಸ್ ನಿಲ್ದಾಣಗಳು, ಕಾರ್ಮಿಕರು ಸೇರುವ ಸ್ಥಳಗಳು, ಮಾರುಕಟ್ಟೆಗಳು ಇನ್ನಿತರ ಜನಸಂದಣಿ ಸ್ಥಳಗಳಲ್ಲಿ ಹೆಚ್ಚು ಐ.ಇ.ಸಿ ಕಾರ್ಯಕ್ರಮಗಳನ್ನು ಏರ್ಪಡಿಸಿ ಅರಿವು ಮೂಡಿಸಬೇಕು ಎಂದರು.
ಕಾರ್ಮಿಕ ಇಲಾಖೆ, ಅಬಕಾರಿ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸ್ಥಳೀಯಾಡಳಿತ ಸಂಸ್ಥೆಗಳು ಹಾಗೂ ಇತರೆ ಇಲಾಖೆಗಳು ಆರೋಗ್ಯ ಇಲಾಖೆಯೊಂದಿಗೆ ಸಮನ್ವಯತೆಯೊಂದಿಗೆ ಕಾರ್ಯನಿರ್ವಹಿಸಬೇಕು. ಆ ಮೂಲಕ ಜಿಲ್ಲೆಯನ್ನು ತಂಬಾಕು ಮುಕ್ತವಾಗಿಸಲು ಪ್ರಮಾಣಿಕ ಪ್ರಯತ್ನ ಮಾಡಬೇಕು ಎಂದು ಸೂಚನೆಗಳನ್ನು ನೀಡಿದರು.2023ರಲ್ಲಿ 1053 ಪ್ರಕರಣ ದಾಖಲು
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್.ಎಸ್.ಮಹೇಶ್ ಮಾತನಾಡಿ, 2023ರ ಏಪ್ರಿಲ್ ಮಾಹೆಯಿಂದ ಡಿಸೇಂಬರ್ ವರೆಗೆ ವಿವಿಧ ಇಲಾಖೆಗಳ ಸಮನ್ವಯದೊಂದಿಗೆ ಜಿಲ್ಲೆಯಲ್ಲಿ 56 ದಾಳಿಗಳನ್ನು ನಡೆಸಿ 1053 ಪ್ರಕರಣಗಳನ್ನು ದಾಖಲು ಮಾಡಿ 73,380 ರೂಗಳ ದಂಡವನ್ನು ವಸೂಲಿ ಮಾಡಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.ಈ ಸಂದರ್ಭದಲ್ಲಿ ತಂಬಾಕು ಉತ್ಪನ್ನ ನಿಯಂತ್ರಣಕುರಿತ ಜಾಗೃತಿ ಕರಪತ್ರಗಳನ್ನು ಬಿಡುಗಡೆ ಮಾಡಲಾಯಿತು. ಸಭೆಯಲ್ಲಿ ಸಹಾಯಕ ಪೊಲೀಸ್ ವರಿಷ್ಟಾಧಿಕಾರಿ ರಾಜಾ ಇಮಾಮ್ ಖಾಸೀಮ್,ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಕೃಷ್ಣಪ್ರಸಾದ್, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ ಜಿ.ಹರೀಶ್, ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಇದ್ದರು.ಸಿಕೆಬಿ-9 ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಸಭೆಯಲ್ಲಿ ತಂಬಾಕು ಉತ್ಪನ್ನ ನಿಯಂತ್ರಣ ಕುರಿತ ಜಾಗೃತಿ ಕರಪತ್ರಗಳನ್ನು ಅಪರ ಜಿಲ್ಲಾಧಿಕಾರಿ ಡಾ.ಎನ್.ತಿಪ್ಪೇಸ್ವಾಮಿ ಬಿಡುಗಡೆ ಮಾಡಿದರು.