ಮಕ್ಕಳ ಶಿಕ್ಷಣಕ್ಕೆ ಪೂರಕ ವಾತಾವರಣ ಕಲ್ಪಿಸಿ: ಮಸರೂರ್ ಅಹ್ಮದ್‌

| Published : Jan 10 2024, 01:46 AM IST

ಮಕ್ಕಳ ಶಿಕ್ಷಣಕ್ಕೆ ಪೂರಕ ವಾತಾವರಣ ಕಲ್ಪಿಸಿ: ಮಸರೂರ್ ಅಹ್ಮದ್‌
Share this Article
  • FB
  • TW
  • Linkdin
  • Email

ಸಾರಾಂಶ

ಬಾಗಲಕೋಟೆ: ಸರ್ಕಾರಿ ಉರ್ದು ಮಾದರಿ ಪ್ರಾಥಮಿಕ ಶಾಲೆ ನಂ.8 ನವನಗರ ಬಾಗಲಕೋಟೆ ಶಾಲೆಯಲ್ಲಿ ಪಾಲಕರ ಸಭೆ ನಡೆಯಿತು. ಸಭೆ ಉದ್ಘಾಟಿಸಿ ಮಾತನಾಡಿದ ಖತೀಬ್‌ ಇಮಾಮ್‌ ಜೈನಪೇಠ ಮಸೀದಿಯ ಮಸರೂರ್ ಅಹ್ಮದ್‌, ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಶಿಕ್ಷಕ ಹಾಗೂ ಪಾಲಕರ ಪಾತ್ರ ಮುಖ್ಯ ಎಂದು ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಮಕ್ಕಳ ವಿದ್ಯಾಭ್ಯಾಸದಲ್ಲಿ ಏಕಾಗ್ರತೆ, ಸಮಚಿತ್ತತೆ ಹಾಗೂ ಸಮಯಪ್ರಜ್ಞೆ ಮೈಗೂಡಿಸಿಕೊಳ್ಳಬೇಕಾದರೆ ಪಾಲಕರು ತಮ್ಮ ಕರ್ತವ್ಯ ಅರಿತು ಅವರ ಬೆಳವಣಿಗೆಗೆ ಸಹಕಾರಿಯಾದ ವಾತಾವರಣ ರೂಪಿಸಬೇಕೆಂದು ಖತೀಬ್‌ ಇಮಾಮ್‌ ಜೈನಪೇಠ ಮಸೀದಿಯ ಮಸರೂರ್ ಅಹ್ಮದ್‌ ಹೇಳಿದರು.

ಸರ್ಕಾರಿ ಉರ್ದು ಮಾದರಿ ಪ್ರಾಥಮಿಕ ಶಾಲೆ ನಂ.8 ನವನಗರ ಬಾಗಲಕೋಟೆ ಶಾಲೆಯಲ್ಲಿ ಪಾಲಕರ ಸಭೆ ಉದ್ಘಾಟಿಸಿ ಮಾತನಾಡಿ, ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಶಿಕ್ಷಕ ಹಾಗೂ ಪಾಲಕರ ಪಾತ್ರ ಮುಖ್ಯ ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಸಿಆರ್‌ಪಿ ಗಳಾದ ಇಬ್ರಾಹಿಂ ಮನಿಯಾರ ಹಾಗೂ ಸಲ್ಮಾ ಶಾನಲಿಪೀರಾ ಮಾತನಾಡಿ, ಮಕ್ಕಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಜೊತೆಗೆ ಪಾಲಕರು ಶ್ರಮ ವಹಿಸಿದರೆ ಉತ್ತಮವಾಗುತ್ತದೆ. ಈ ನಿಟ್ಟಿನಲ್ಲಿ ತಮ್ಮ ಮಕ್ಕಳ ಕಲಿಕಾ ಮಟ್ಟವನ್ನು ಗುರ್ತಿಸಿ ಅವರ ಕಲಿಕೆಗೆ ಪೂರಕವಾಗುವ ರೀತಿಯಲ್ಲಿ ಅವರೊಂದಿಗೆ ಸಹಕರಿಸಬೇಕೆಂದರು.

ಪಾಲಕರಿಗೆ ಶಿಕ್ಷಣದ ಮಹತ್ವದ ಕುರಿತು ವಿವರಿಸಿದರು. ಉರ್ದು ಮಾಧ್ಯಮದ 1 ರಿಂದ 8ನೇ ತರಗತಿಯ ವಿದ್ಯಾರ್ಥಿಗಳ ಕಲಿಕಾ ಪ್ರಗತಿಯ ಬಗ್ಗೆ ಚರ್ಚಿಸಲಾಯಿತು. ನಂತರ ಆಂಗ್ಲ ಮಾಧ್ಯಮದ 1ರಿಂದ 4ನೇ ತರಗತಿಯ ವಿದ್ಯಾರ್ಥಿಗಳ ಕಲಿಕಾ ಪ್ರಗತಿಯ ಬಗ್ಗೆ ಸಮಗ್ರವಾಗಿ ಚರ್ಚಿಸಲಾಯಿತು. ವಿದ್ಯಾರ್ಥಿಗಳ ಹಾಜರಾತಿಯ ಬಗ್ಗೆ ಚರ್ಚಿಸಲಾಯಿತು.

ಆಜಾದ್ ಶಾಲೆಯ ಮುಖ್ಯಶಿಕ್ಷಕ ಯುನೂಸ್ ಜರತಾರಘರ್‌ ಮಾತನಾಡಿ, ಪಾಲಕರಿಗೆ ನುಡಿದಂತೆ ನಡೆಯುವಂತೆ ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಶಾಲಾ ಮುಖ್ಯಶಿಕ್ಷಕ, ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ ಪರಸ್ಕೃತ ಎಂ.ಎ. ಸೌದಾಗರ ಮಾತನಾಡಿ, ಮಕ್ಕಳನ್ನು ಬೆಳೆಸುವಲ್ಲಿ ಪೋಷಕರ ಪಾತ್ರದ ಬಗ್ಗೆ ವಿವರಿಸಿ ಶಿಕ್ಷಣದ ಗುರಿ ಮತ್ತು ಉದ್ದೇಶದ ಬಗ್ಗೆ ಹಾಗೂ ಶಾಲೆಯಲ್ಲಿ ಕೈಗೊಂಡಿರುವ ಕ್ರಮಗಳ ಬಗ್ಗೆ ಪಾಲಕರಿಗೆ ತಿಳಿಸಿದರು.

ಕಾರ್ಯಕ್ರಮದ ಅನುಷ್ಠಾನದ ಬಗ್ಗೆ ಪಾಲಕರೊಂದಿಗೆ ಚರ್ಚಿಸಲಾಯಿತು. ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ವಿಶೇಷ ತರಗತಿ ಹಾಗೂ ಕಾಳಜಿ ವಹಿಸಿ ಕಲಿಕೆಯಲ್ಲಿ ಪ್ರಗತಿಯನ್ನು ಸಾಧಿಸಲು ಕ್ರಮ ಕೈಗೊಳ್ಳಲು ವಿವಿಧ ಚಟುವಟಿಕೆಗಳನ್ನು ತರಗತಿಯಲ್ಲಿ ಅಳವಡಿಸಿಕೊಳ್ಳಲು ಸೂಚಿಸಲಾಯಿತು.

ನಂತರ ಪಾಲಕರೊಂದಿಗೆ ಮಕ್ಕಳ ಕಲಿಕೆಯ ಬಗ್ಗೆ ಸಂವಾದ ನಡೆಸಲಾಯಿತು. ಪಾಲಕರು ತಮ್ಮ ಮಕ್ಕಳ ಕಲಿಕಾ ಪ್ರಗತಿ ಹಾಗೂ ಕೊರತೆಯ ಬಗ್ಗೆ ತರಗತಿಯ ಶಿಕ್ಷಕರ ಜೊತೆ ಸಂವಾದ ನೆಡೆಸಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡರು.

ಕಾರ್ಯಕ್ರಮವನ್ನು ಶಿಕ್ಷಕಿ ಎಲ್.ಆರ್. ಗೋವೆ ಹಾಗೂ ತಹಸೀನ್ ಪಟೇಲ್ ನಿರೂಪಿಸಿದರು. ರಾಘವೇಂದ್ರ ಕುರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎ.ಜೆ.ಸೌದಾಗರ ವಂದಿಸಿದರು.