ಸಾರಾಂಶ
ಬಾಲ್ಯ ವಿವಾಹ ನಿಷೇಧದ ಕುರಿತು ಪ್ರಗತಿ ಪರಿಶೀಲನಾ ಸಭೆ
ಕನ್ನಡಪ್ರಭ ವಾರ್ತೆ ಯಲಬುರ್ಗಾತಾಲೂಕಿನ ಎಲ್ಲ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಮಕ್ಕಳಿಗೆ ಬಾಲ್ಯ ವಿವಾಹದ ಬಗ್ಗೆ ಹೆಚ್ಚು ಅರಿವು ಮೂಡಿಸುವ ಕಾರ್ಯಕ್ಕೆ ಮುಂದಾಗಬೇಕು ಎಂದು ತಹಸೀಲ್ದಾರ ಬಸವರಾಜ ತೆನ್ನಳ್ಳಿ ಹೇಳಿದರು.
ಪಟ್ಟಣದ ಕಂದಾಯ ಭವನದಲ್ಲಿ ಗುರುವಾರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಹಾಗೂ ಆರೋಗ್ಯ ಇಲಾಖೆ ಕಂದಾಯ ಇಲಾಖೆ ಸಹಯೋಗದಲ್ಲಿ ಗ್ರಾಮ ಮಟ್ಟದಲ್ಲಿ ಬಾಲ್ಯ ವಿವಾಹ ನಿಷೇಧದ ಕುರಿತು ನಡೆದ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಬಾಲ್ಯ ವಿವಾಹ ನಿಷೇಧ ಕಾಯ್ದೆ-೨೦೦೬ ಜಾರಿಗೆ ಬಂದಿದೆ. ಕೊಪ್ಪಳ ಜಿಲ್ಲೆಯನ್ನು ಬಾಲ್ಯವಿವಾಹ ಮುಕ್ತ ಜಿಲ್ಲೆಯನ್ನಾಗಿಸುವುದು ಜಿಲ್ಲಾಡಳಿತದ ಸಂಕಲ್ಪವಾಗಿದ್ದು, ಬಾಲ್ಯ ವಿವಾಹಕ್ಕೆ ಕಡಿವಾಣ ಹಾಕಬೇಕು. ಅಪ್ರಾಪ್ತೆಯೊಂದಿಗೆ ವಿವಾಹವಾದ ವರ ಮತ್ತು ಇಬ್ಬರೂ ಪೋಷಕರ ಹಾಗೂ ವಿವಾಹಕ್ಕೆ ಪ್ರೋತ್ಸಾಹಿಸಿದವರ ವಿರುದ್ಧ ಸಹ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
ಶಿಶು ಅಭಿವೃದ್ಧಿ ಯೋಜನಾಧಿಕಾರಿ ಬೆಟ್ಟದಪ್ಪ ಮಾಳೆಕೊಪ್ಪ ಮಾತನಾಡಿ, ತಾಲೂಕಿನ ಪ್ರತಿ ಗ್ರಾಮದ ಮದುವೆ ಸಮಾರಂಭಗಳಲ್ಲಿ ಬಾಲ್ಯ ವಿವಾಹ ಮಾಡಿದವರ ಮೇಲೆ ಕಾನೂನು ಕ್ರಮಕ್ಕೆ ಮುಂದಾಗಲಾಗುವುದು. ವರದಕ್ಷಿಣೆ ಕಿರುಕುಳ, ದೌರ್ಜನಕ್ಕೆ ಒಳಗಾದ ಹೆಣ್ಣು ಮಕ್ಕಳನ್ನು ಸಾಂತ್ವನ ಕೇಂದ್ರದ ಮೂಲಕ ಅವರಿಗೆ ರಕ್ಷಣೆ ಮಾಡುವ ಮೂಲಕ ನ್ಯಾಯ ಒದಗಿಸಿಕೊಡಲಾಗುತ್ತದೆ. ನಮ್ಮ ತಾಲೂಕಿನಲ್ಲಿ ಕೇಂದ್ರ, ರಾಜ್ಯ ಸರ್ಕಾರದ ಯೋಜನೆಗಳ ಬಗ್ಗೆ ಅಂಗನವಾಡಿ ಮೇಲ್ವಿಚಾರಕಿಯರು, ಅಂಗನವಾಡಿ ಕಾರ್ಯಕರ್ತೆಯರ ಸಮ್ಮುಖದಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.ಪಟ್ಟಣದ ಅಂಗನವಾಡಿ ಮೇಲ್ವಿಚಾರಕಿ ಶಿವಪುತ್ರಮ್ಮ ಅಂಗಡಿ ಮಾತನಾಡಿ, ಪಟ್ಟಣದ ೧ನೇ ವಾರ್ಡಿನ ಉರ್ದು ಶಾಲೆಯ ಆವರಣದಲ್ಲಿ ೧೮ನೇ ಅಂಗನವಾಡಿ ಕೇಂದ್ರ ಕಟ್ಟುವುದಕ್ಕೆ ಬಿಡುತ್ತಿಲ್ಲ ಎನ್ನುತ್ತಿದ್ದಂತೆ ತಹಸೀಲ್ದಾರ ಪ್ರತಿಕ್ರಿಯಿಸಿ, ಉರ್ದು ಶಾಲೆ ಕ್ಷೇತ್ರ ಶಿಕ್ಷಣ ಇಲಾಖೆಯಲ್ಲಿದೆ. ಇನ್ನೂ ಇದರ ಆವರಣದಲ್ಲಿ ಮೌಲಾ ಆಜಾದ್ ಶಾಲೆಯಿದೆ. ಪಟ್ಟಣ ಸೇರಿದಂತೆ ತಾಲೂಕಿನ ಎಲ್ಲ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ ಅಂಗನವಾಡಿ ಕೇಂದ್ರ ನಿರ್ಮಿಸುವುದಕ್ಕೆ ಸರ್ಕಾರ ಆದೇಶ ಮಾಡಿದೆ. ಆ ಶಾಲೆಯ ಮುಖ್ಯಶಿಕ್ಷಕಿ ಕಟ್ಟಡ ನಿರ್ಮಾಣಕ್ಕೆ ತಕರಾರು ಮಾಡಿದರೆ ತಕ್ಷಣ ಪ್ರಕರಣ ದಾಖಲಿಸಿ. ಈಗಾಗಲೇ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಆಜಾದ ಶಾಲೆಯ ಮುಖ್ಯ ಶಿಕ್ಷಕಿಯನ್ನು ಅಮಾನತ್ತು ಮಾಡುವುದಕ್ಕೆ ಸೂಚನೆ ನೀಡಿದೆ. ಪೊಲೀಸ್ ರಕ್ಷಣೆ ಪಡೆದುಕೊಂಡು ಆದಷ್ಟು ಬೇಗ ಅಂಗನವಾಡಿ ಕಟ್ಟುವುದಕ್ಕೆ ಮುಂದಾಗಬೇಕು ಎಂದು ಶಿಶು ಅಭಿವೃದ್ಧಿ ಅಧಿಕಾರಿಗೆ ಸೂಚಿಸಿದರು.
ಈ ಸಂದರ್ಭ ನಾನಾ ಇಲಾಖೆಗಳ ಅಧಿಕಾರಿಗಳು ಸೇರಿದಂತೆ ತಾಲೂಕಿನ ಎಲ್ಲ ಅಂಗನವಾಡಿ ಮೇಲ್ವಿಚಾರಕರು ಇದ್ದರು.