ಜನಜಾಗೃತಿ ಮೂಡಿಸಿ ಪ್ರಜಾಪ್ರಭುತ್ವ ಉಳಿಸಿ

| Published : Apr 23 2024, 12:47 AM IST

ಸಾರಾಂಶ

ವಿಜಯಪುರ: ಚುನಾವಣೆ ವೇಳೆ ದೇಶದಲ್ಲಿರುವ ಸಧ್ಯದ ಪರಿಸ್ಥಿತಿ ಕುರಿತು ಶಿಕ್ಷಣ ತಜ್ಞರು, ವೈದ್ಯರು, ಸಹಕಾರ ಪ್ರತಿನಿಧಿಗಳು ಜನಜಾಗೃತಿ ಮೂಡಿಸಿ ಪ್ರಜಾಪ್ರಭುತ್ವ ಉಳಿಸಲು ಮುಂದಾಗಬೇಕು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರ ಹಾಗೂ ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ:ಚುನಾವಣೆ ವೇಳೆ ದೇಶದಲ್ಲಿರುವ ಸಧ್ಯದ ಪರಿಸ್ಥಿತಿ ಕುರಿತು ಶಿಕ್ಷಣ ತಜ್ಞರು, ವೈದ್ಯರು, ಸಹಕಾರ ಪ್ರತಿನಿಧಿಗಳು ಜನಜಾಗೃತಿ ಮೂಡಿಸಿ ಪ್ರಜಾಪ್ರಭುತ್ವ ಉಳಿಸಲು ಮುಂದಾಗಬೇಕು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರ ಹಾಗೂ ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ ಹೇಳಿದರು.

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ವೈದ್ಯರು, ಸಹಕಾರ ಪ್ರತಿನಿಧಿಗಳು ಹಾಗೂ ನ್ಯಾಯವಾದಿಗಳೊಂದಿಗೆ ನಡೆಸಿದ ಸಭೆಯಲ್ಲಿ ಅವರು ಮಾತನಾಡಿದರು. ದೇಶದ ಇಂದಿನ ಪರಿಸ್ಥಿತಿ ಕುರಿತು ಜನಜಾಗೃತಿ ಮೂಡಿಸದಿದ್ದರೆ ದೇಶ ಸರ್ವಾಧಿಕಾರದ ಕಡೆಗೆ ಸಾಗಲಿದೆ. ಈ ಸಭೆಯಲ್ಲಿ ಸೇರಿರುವ ವಿವಿಧ ಕ್ಷೇತ್ರಗಳ ಗಣ್ಯರು, ತಾವು ಮತದಾರರು ಮಾತ್ರವಲ್ಲ. ಸಮಾಜವನ್ನು ಮುನ್ನಡೆಸುವ ಗಣ್ಯರು. ಪ್ರತಿಯೊಬ್ಬರು ಕನಿಷ್ಠ 100 ಕುಟುಂಬಗಳ ಮೇಲೆ ಹಾಗೂ ತಲಾ 500 ಮತದಾರರ ಮೇಲೆ ಪರಿಣಾಮ ಬೀರುವವರು. ಸಮಾಜಕ್ಕೆ ಮಾರ್ಗದರ್ಶನ ಮಾಡಿ ಪ್ರಜಾಪ್ರಭುತ್ವದ ಪರವಾಗಿರುವ ಕಾಂಗ್ರೆಸ್ ಅಭ್ಯರ್ಥಿ ಪ್ರೊ.ರಾಜು ಆಲಗೂರ ಅವರಿಗೆ ಮತ ಹಾಕಿಸುವಂತೆ ಮನವಿ ಮಾಡಿದರು.

ಸಧ್ಯದ ಆಡಳಿತದಲ್ಲಿ ನಮ್ಮ ಪ್ರಜಾಪ್ರಭುತ್ವ ಸಾಗಿರುವ ದಿಕ್ಕಿನ ಕುರಿತು ವಿಶ್ವಸಂಸ್ಥೆಯಲ್ಲಿ ಕಳವಳ ವ್ಯಕ್ತವಾಗುತ್ತಿದೆ. ಎಲೆಕ್ಟ್ರೋಲ್‌ ಬಾಂಡ್‌ ಸ್ಕೀಂ ಜಾರಿ ಮಾಡಿ ಹಣ ಸಂಗ್ರಹಿಸಿದ್ದಾರೆ. ಅಲ್ಲದೇ, ಮಾಹಿತಿ ಹಕ್ಕಿನಡಿ ಬಾರದಂತೆ ವ್ಯವಸ್ಥೆ ರೂಪಿಸಿದ್ದರು. ದೇಶದ ಪ್ರತಿಷ್ಠಿತ ಎಸ್‌ಬಿಐ ಅನ್ನು ಕೂಡ ದುರ್ಬಳಕೆ ಮಾಡಿಕೊಂಡರು. ಆದರೆ, ಸುಪ್ರೀಂ ಕೋರ್ಟ್ ತನ್ನ ಖಡಕ್ ಸೂಚನೆ ಮೂಲಕ ಮಾಹಿತಿ ನೀಡುವಂತೆ ಎಚ್ಚರಿಸಿತು. ಸಂವಿಧಾನ ಜೀವಂತವಿದೆ ಎಂಬುದಕ್ಕೆ ಇದು ಸಾಕ್ಷಿಯಾಯಿತು. ಎಲೆಕ್ಟ್ರೋಲ್‌ ಬಾಂಡ್ ಅಡಿ ಸಂಗ್ರಹಿಸಲಾದ ₹16,000 ಕೋಟಿಗೂ ಹೆಚ್ಚು ಹಣದಲ್ಲಿ ₹6000 ಕೋಟಿಗಿಂತಲೂ ಹೆಚ್ಚು ಹಣ ಐಟಿ, ಇಡಿ, ಸಿಬಿಐ ದಾಳಿಗೆ ಒಳಗಾದ ವ್ಯಕ್ತಿಗಳಿಂದ ಸಂಗ್ರಹಿಸಿದ್ದಾರೆ. ಭೂಗತ ಡಾನ್‌ಗಳು, ರೌಡಿಗಳು ಹಣ ಸುಲಿಗೆ ಮಾಡುವುದಕ್ಕೂ ಇದಕ್ಕೂ ಹೆಚ್ಚು ವ್ಯತ್ಯಾಸವಿಲ್ಲ ಎಂದು ವಾಗ್ದಾಳಿ ನಡೆಸಿದರು.

ನಮ್ಮ ಪ್ರಧಾನಿ ಸುದ್ದಿಗೋಷ್ಠಿ ನಡೆಸುವುದಿಲ್ಲ. ಯಾರ ಪ್ರಶ್ನೆಗಳಿಗೂ ಉತ್ತರಿಸುವುದಿಲ್ಲ. ಅಧಿವೇಶನಕ್ಕೂ ಸರಿಯಾಗಿ ಬರದೆ ಸಂಸತ್ತಿನಲ್ಲಿ ಪ್ರಶ್ನೆಗಳಿಗೂ ಉತ್ತರಿಸುವುದಿಲ್ಲ ಎಂದಾದರೆ ಅವರು ಎಲ್ಲಿಗೆ ಹೋಗುತ್ತಾರೆ? ಇದು ಎಂಥ ವ್ಯವಸ್ಥೆ? ಈ ವಿಷಯಗಳು ಪ್ರಸ್ತುತ ಚುನಾವಣೆಯಲ್ಲಿ ಚರ್ಚೆಯಾಗಬೇಕು. ಆದರೆ, ಇಂದು ಧರ್ಮ, ಜಾತಿ ಹೆಸರಿನಲ್ಲಿ ರಾಜಕಾರಣ ನಡೆದಿದೆ. ಈ ದುರ್ದೈವದ ಸ್ಥಿತಿಯಾಗಿದ್ದು, ಬದಲಾವಣೆ ನಮ್ಮ ಧ್ಯೇಯವಾಗಬೇಕು. ಪ್ರಜಾಪ್ರಭುತ್ವ ರಕ್ಷಣೆಗೆ ಕಾಂಗ್ರೆಸ್ ಬದ್ಧತೆ ಹೊಂದಿದೆ. ಈ ಕುರಿತು ಜನಜಾಗೃತಿ ಮೂಡಿಸಬೇಕು. ಇಲ್ಲದಿದ್ದರೆ ನಮ್ಮ ದೇಶ ಪ್ರಜಾಪ್ರಭುತ್ವದಿಂದ ಸರ್ವಾಧಿಕಾರ ಆಡಳಿತದತ್ತ ಹೋಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಕಾಂಗ್ರೆಸ್ ಅಭ್ಯರ್ಥಿ ಪ್ರೊ.ರಾಜು ಆಲಗೂರ ಮಾತನಾಡಿ, ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿ ಮಾಡಿ ನಿಮ ವಿಶ್ವಾಸ ಉಳಿಸಿಕೊಳ್ಳುತ್ತೇನೆ. ಸಂಸದ ರಮೇಶ ಜಿಗಜಿಣಗಿ ಯಾವುದೇ ಅಭಿವೃದ್ಧಿ ಮಾಡಿಲ್ಲ. ದ್ರಾಕ್ಷಿ ಸಂಶೋಧನಾ ಕೇಂದ್ರ, ಆಲಮಟ್ಟಿ ಜಲಾಶಯ ಎತ್ತರ ಹೆಚ್ಚಳ ಗೆಜೆಟ್ ನೊಟಿಫಿಕೇಶನ್, ಸಮಯಕ್ಕೆ ಸರಿಯಾದ ರೇಲ್ವೆ ಸಂಚಾರ, ವಂದೇ ಭಾರತ್‌ ರೈಲು ಸೇವೆ ಪ್ರಾರಂಭಿಸಲು ಶ್ರಮಿಸುತ್ತೇನೆ. ತಾವೆಲ್ಲರೂ ಒಂದು ಬಾರಿ ಬದಲಾವಣೆ ಮಾಡಿ ಕಾಂಗ್ರೆಸ್‌ಗೆ ಮತ ಹಾಕಿ ಎಂದು ಮನವಿ ಮಾಡಿದರು.

ಡಾ.ಮಹಾಂತೇಶ ಬಿರಾದಾರ ಮಾತನಾಡಿ, ಪ್ರೊ.ರಾಜು ಆಲಗೂರ ವಿದ್ಯಾವಂತರು. ಅವರ ತಾಯಿ ಶಾಲಾ ಮಕ್ಕಳಿಗೆ ಪಾಠ ಮಾಡಿದ್ದಾರೆ. ಪ್ರಗತಿಪರ ಚಿಂತಕ, ಪ್ರಾಮಾಣಿಕ, ಸಚ್ಚರಿತ್ರ ವ್ಯಕ್ತಿತ್ವದ ಪ್ರೊ.ಆಲಗೂರ ಆಯ್ಕೆ ಅಗತ್ಯವಾಗಿದೆ. ಸಂಸದ ರಮೇಶ ಜಿಗಜಿಣಗಿ ಕಳೆದ 15 ವರ್ಷಗಳಿಂದ ಮೌನವಾಗಿದ್ದಾರೆ. ಸಂಸತ್ತಿನಲ್ಲಿ ನಮ್ಮ ಧ್ವನಿ ಎತ್ತಲು ಅವರನ್ನು ಆಯ್ಕೆ ಮಾಡಬೇಕು ಎಂದು ಕೋರಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಂ.ಎಸ್.ಲೋಣಿ, ಎಐಸಿಸಿ ವೀಕ್ಷಕ ಸಯ್ಯದ ಬುರಾನುದ್ದೀನ್, ಕೆಪಿಸಿಸಿ ಕಾರ್ಯದರ್ಶಿ ಸಂಗಮೇಶ ಬಬಲೇಶ್ವರ ಉಪಸ್ಥಿತರಿದ್ದರು. ಇದೇ ವೇಳೆ ಸಚಿವರಿಗೆ ಮಹಾಂತೇಶ ಬಿರಾದಾರ ವಚನಗಳ ಕಟ್ಟನ್ನು ನೀಡಿ ಗೌರವಿಸಿದರು.