ಉದ್ಯೋಗಕ್ಕಾಗಿ ಕಾಯದೆ ಸ್ವತಃ ಉದ್ಯೋಗ ಸೃಷ್ಟಿಸಿ: ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಬಿ.ಜಿ.ಶೆಟಕಾರ

| Published : Jan 17 2025, 12:45 AM IST

ಉದ್ಯೋಗಕ್ಕಾಗಿ ಕಾಯದೆ ಸ್ವತಃ ಉದ್ಯೋಗ ಸೃಷ್ಟಿಸಿ: ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಬಿ.ಜಿ.ಶೆಟಕಾರ
Share this Article
  • FB
  • TW
  • Linkdin
  • Email

ಸಾರಾಂಶ

ಸರ್ಕಾರ ಎಲ್ಲರಿಗೂ ಉದ್ಯೋಗ ಕೊಡಲು ಸಾಧ್ಯವಿಲ್ಲ. ಆದ್ದರಿಂದ ಯುವ ಸಮುದಾಯವು ಉದ್ಯೋಗಕ್ಕಾಗಿ ಕಾಯದೆ ಸ್ವತಃ ಉದ್ಯೋಗ ಸೃಷ್ಟಿಸಿ ನೀವೇ ಉದ್ಯೋಗ ನೀಡಬೇಕೆಂದು ಕರ್ನಾಟಕ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಬಿ.ಜಿ.ಶೆಟಕಾರ ಅಭಿಪ್ರಾಯಪಟ್ಟರು.

ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಬಿ.ಜಿ.ಶೆಟಕಾರ ಅಭಿಪ್ರಾಯ । ರಾಷ್ಟ್ರೀಯ ಸೇವಾ ಯೋಜನೆ ಘಟಕದ ವಾರ್ಷಿಕ ವಿಶೇಷ ಶಿಬಿರ

ಕನ್ನಡಪ್ರಭ ವಾರ್ತೆ ಬೀದರ್

ಸರ್ಕಾರ ಎಲ್ಲರಿಗೂ ಉದ್ಯೋಗ ಕೊಡಲು ಸಾಧ್ಯವಿಲ್ಲ. ಆದ್ದರಿಂದ ಯುವ ಸಮುದಾಯವು ಉದ್ಯೋಗಕ್ಕಾಗಿ ಕಾಯದೆ ಸ್ವತಃ ಉದ್ಯೋಗ ಸೃಷ್ಟಿಸಿ ನೀವೇ ಉದ್ಯೋಗ ನೀಡಬೇಕೆಂದು ಕರ್ನಾಟಕ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಬಿ.ಜಿ.ಶೆಟಕಾರ ಅಭಿಪ್ರಾಯಪಟ್ಟರು.

ಜಿಲ್ಲೆಯ ದತ್ತು ಗ್ರಾಮ ಕುಂಬಾರವಾಡಾದಲ್ಲಿ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಬೆಂಗಳೂರು ಮತ್ತು ಕರಾಶಿ ಸಂಸ್ಥೆಯ ಕರ್ನಾಟಕ ಪದವಿ ಪೂರ್ವ ಕಾಲೇಜು ಆಯೋಜಿಸಿದ 2024-25ನೇ ವರ್ಷದ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮದು ಕೃಷಿ ಪ್ರಧಾನವಾದ ದೇಶ. ಆದ್ದರಿಂದ ಯುವ ಸಮುದಾಯ ಕೃಷಿಯೆಡೆಗೆ ಆಸಕ್ತಿ ತೋರುವ ಮೂಲಕ ರಾಷ್ಟ್ರದ ಅಭಿವೃದ್ಧಿಗೆ ನೆರವಾಗಬೇಕು. ಆ ನಿಟ್ಟಿನಲ್ಲಿ ಇಂಥ ಶಿಬಿರಗಳು ಗ್ರಾಮೀಣ ಬದುಕಿನ ಸಹಸಂಬಂಧ ಬೆಳೆಸಿ ಪ್ರೇರಣಾದಾಯಕವಾಗಬೇಕೆಂದರು.

ಕರಾಶಿ ಸಂಸ್ಥೆಯ ಕಾರ್ಯದರ್ಶಿ ಸತೀಶ ಪಾಟೀಲ ಸಮಾರಂಭ ಉದ್ಘಾಟಿಸಿ ಮಾತನಾಡಿ, ರಾಷ್ಟ್ರೀಯ ಸೇವಾ ಯೋಜನೆಯ ಮೂಲ ಆಶಯವೇ ಸೇವೆ, ಶ್ರಮ, ಶಿಸ್ತು ಕಲಿಸುವುದಾಗಿದೆ. ಅದನ್ನು ವಿದ್ಯಾರ್ಥಿಗಳು ಸದ್ಭಾವದಿಂದ ಸ್ವೀಕರಿಸಬೇಕು. ಅಂದಾಗ ಮಾತ್ರ ಭವಿಷ್ಯದ ಬದುಕಿನಲ್ಲಿ ಕಷ್ಟಗಳನ್ನು ಮೀರಿ ನಿಲ್ಲುವ ಸಾಮರ್ಥ್ಯ ಬರುತ್ತದೆ. ಬದುಕಿನ ನಿಜಾರ್ಥದ ಪಾಠ ಇಲ್ಲಿ ಕಲಿತವರು ಆತ್ಮಸ್ಥೈರ್ಯದಿಂದ ಜೀವನ ನಡೆಸುವರೆಂದು ಹೇಳಿದರು.

ಕರ್ನಾಟಕ ಪಪೂ ಕಾಲೇಜಿನ ಪ್ರಾಚಾರ್ಯ ಹಾಗೂ ಶಿಬಿರದ ನಿರ್ದೇಶಕರಾದ ಡಾ.ಬಸವರಾಜ ಬಲ್ಲೂರ ಮಾತನಾಡಿ, ಎನ್.ಎಸ್.ಎಸ್. ಶಿಬಿರವು ಮಕ್ಕಳಲ್ಲಿ ಶ್ರಮ ಸಂಸ್ಕೃತಿಯನ್ನು ಬೆಳೆಸುವುದರೊಂದಿಗೆ ಮನೋಬಲ ಹೆಚ್ಚಿಸುತ್ತ ನಾಯಕತ್ವದ ಗುಣ ಬೆಳೆಸುತ್ತದೆ ಎಂದರು.

ಸಂಸ್ಥೆಯ ಆಡಳಿತ ಮಂಡಳಿ ಸದಸ್ಯ ರವಿ ಹಾಲಹಳ್ಳಿ, ನಗರಸಭೆಯ ಸದಸ್ಯ ಪ್ರಭುಶೆಟ್ಟಿ ಜ್ಞಾನಪ್ಪ ಮಾತನಾಡಿದರು. ಉಪನ್ಯಾಸಕರಾದ ನೀಲೇಶ ರತ್ನಾಕರ, ಅನೀಲಕುಮಾರ ಬಸಣ್ಣೊರ, ಡಾ.ಸುನೀಲ ಕುಮಾರ ಮುಲಗೆ, ರಾಜೇಶ್ವರಿ ಪಾಟೀಲ, ಮಂಜುಳಾ ಬಿರಾದಾರ ಮೊದಲಾದವರು ಇದ್ದರು.

ವಿದ್ಯಾರ್ಥಿಗಳು ಹಾಗೂ ಕುಂಬಾರವಾಡಾದ ಗ್ರಾಮದವರು ಭಾಗವಹಿಸಿದ್ದರು. ಎನ್.ಎಸ್.ಎಸ್. 50 ಶಿಬಿರಾರ್ಥಿಗಳಿಗೆ ಕಾಲೇಜಿನಿಂದ ಟೀ ಶರ್ಟ್‌ಗಳನ್ನು ವಿತರಿಸಲಾಯಿತು.