ಸಾರಾಂಶ
ಭಾರತೀಯ ರೆಡ್‌ಕ್ರಾಸ್ ಉಡುಪಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನ ಮತ್ತು ಹಿರಿಯ ನಾಗರೀಕ ಸಬಲೀಕರಣ ಇಲಾಖೆ, ಜಿಲ್ಲಾ ವಿಕಲಚೇತನ ಪುನರ್ವಸತಿ ಕೇಂದ್ರ ಮತ್ತು ಎಪಿಡಿ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ವಿವಿಧ ತಾಲೂಕುಗಳ ವಿವಿಧೋದ್ದೇಶ ಕಾರ್ಯಕರ್ತರಿಗಾಗಿ ಭಾರತ ಸುಗಮ್ಯ ಯಾತ್ರಾ ಕಾರ್ಯಕ್ರಮ ನಡೆಯಿತು.
ಕನ್ನಡಪ್ರಭ ವಾರ್ತೆ ಉಡುಪಿ
ಹಿರಿಯ ನಾಗರೀಕರು ಮತ್ತು ವಿಕಲಚೇತನರಿಗೆ ಸರ್ಕಾರ ಮತ್ತು ಸಮಾಜ ಕೊಡ ಮಾಡುವ ಸೌಲಭ್ಯಗಳು ಅನುಕಂಪವಲ್ಲ, ಅದು ಸಹಾನುಭೂತಿ, ವಿಕಲಚೇತನ ಸ್ನೇಹಿ ವಾತಾವರಣವನ್ನು ನಿರ್ಮಾಣ ಮಾಡುವುದು ನಾಗರೀಕ ಸಮಾಜದ ಕರ್ತವ್ಯ. ಈ ದೃಷ್ಟಿಯಿಂದ ಭಾರತ ಸುಗಮ್ಯ ಯಾತ್ರಾ ಕಾರ್ಯಕ್ರಮ ಒಂದು ಮಹತ್ವದ ಹೆಜ್ಜೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಶ್ಯಾಮಲಾ ಸಿ.ಕೆ. ಹೇಳಿದ್ದಾರೆ.ನಗರದ ಭಾರತೀಯ ರೆಡ್‌ಕ್ರಾಸ್ ಉಡುಪಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನ ಮತ್ತು ಹಿರಿಯ ನಾಗರೀಕ ಸಬಲೀಕರಣ ಇಲಾಖೆ, ಜಿಲ್ಲಾ ವಿಕಲಚೇತನ ಪುನರ್ವಸತಿ ಕೇಂದ್ರ ಮತ್ತು ಎಪಿಡಿ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ವಿವಿಧ ತಾಲೂಕುಗಳ ವಿವಿದ್ದೋದ್ದೇಶ ಕಾರ್ಯಕರ್ತರಿಗಾಗಿ ಹಮ್ಮಿಕೊಂಡ ಭಾರತ ಸುಗಮ್ಯ ಯಾತ್ರಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಅಧ್ಯಕ್ಷತೆ ವಹಿಸಿದ್ದ ರೆಡ್‌ಕ್ರಾಸ್ ಸಭಾಪತಿ ಬಸ್ರೂರು ರಾಜೀವ ಶೆಟ್ಟಿ ಮಾತನಾಡಿ, ಹಿರಿಯ ನಾಗರಿಕರು ಮತ್ತು ವಿಕಲಚೇತನರಿಗೆ ಬೇಕಾಗುವ ಸೌಲಭ್ಯಗಳನ್ನು ಎಲ್ಲಾ ಕಟ್ಟಡಗಳಲ್ಲಿ ನಿರ್ಮಿಸುವ ಬಗ್ಗೆ ಜಾಗೃತಿ ಮೂಡಿಸುವುದು ಈ ಯೋಜನೆಯ ಉದ್ದೇಶ ಎಂದರು.
ಎಪಿಡಿ ಸಂಸ್ಥೆಯ ತರಬೇತುದಾರ ನಾಗರಾಜ ಭಾರತ್ ಸುಗಮ್ಯ ಯಾತ್ರಾದ ಕುರಿತು ಉಪನ್ಯಾಸ ನೀಡಿದರು. ಜಿಲ್ಲಾ ವಿಕಲಚೇತನ ಸಬಲೀಕರಣ ಇಲಾಖೆಯ ಕಲ್ಯಾಣಾಧಿಕಾರಿ ರತ್ನಾ ಹಾಗೂ ಮತ್ತಿತರರು ಉಪಸ್ಥಿತರಿದ್ದರು.ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರದ ಕಾರ್ಯದರ್ಶಿ ಡಾ. ಗಣನಾಥ ಎಕ್ಕಾರು ಸ್ವಾಗತಿಸಿ ನಿರೂಪಿಸಿದರು. ಕೇಂದ್ರದ ನೋಡಲ್ ಅಧಿಕಾರಿ ಜಯಶ್ರೀ ವಂದಿಸಿದರು