ಗದಗ: ಪ್ರಸ್ತುತ ದಿನಗಳಲ್ಲಿ ಹಸಿರು ಪರಿಸರ ನಿರ್ಮಾಣ ಮಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದ್ದು, ಪರಿಸರ ಸಂರಕ್ಷಣೆಯಲ್ಲಿ ಯುವಜನರ ಪಾತ್ರ ಅತ್ಯಂತ ಪ್ರಮುಖವಾಗಿದೆ ಎಂದು ಗದಗ, ಬೆಟಗೇರಿ ನಗರಸಭೆಯ ಪರಿಸರ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಆನಂದ ಬದಿ ಹೇಳಿದರು.
ಹುಲಕೋಟಿಯ ಆರ್.ಟಿ.ಇ. ಸೊಸೈಟಿಯ ರೂರಲ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಸಿವಿಲ್ ಎಂಜಿನಿಯರಿಂಗ್ ವಿಭಾಗ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ ಹಾಗೂ ವೃಕ್ಷಾರೋಪಣ ಕಾರ್ಯಕ್ರಮದಲ್ಲಿ ಮಾತನಾಡಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಚಂದ್ರಕಾಂತ ವಾಟವಾಟಿ ಹಾಗೂ ಗೌರವ ಅತಿಥಿಗಳಾಗಿ ಆಗಮಿಸಿದ್ದ ಕೆ.ಎಚ್. ಓದುಗೌಡರ ಅವರು ಮಾತನಾಡಿ, ಪರಿಸರ ಸಂರಕ್ಷಣೆಯ ಜಾಗೃತಿ ಇಂದಿನ ಅಗತ್ಯವಾಗಿದೆ ಎಂದು ಪ್ರತಿಪಾದಿಸಿದರು.ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಬಿ.ಎನ್. ಪಾಟೀಲ ಅವರು, ವಿದ್ಯಾರ್ಥಿಗಳು ಕೇವಲ ಗಿಡ ನೆಡುವುದಷ್ಟೇ ಅಲ್ಲದೆ, ಅವುಗಳನ್ನು ಪೋಷಿಸುವ ಮೂಲಕ ಪರಿಸರ ಸಂರಕ್ಷಣೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ದಿನಾಚರಣೆಯ ಅಂಗವಾಗಿ ಕಾಲೇಜು ಆವರಣದಲ್ಲಿ ಗಣ್ಯರು ಹಾಗೂ ವಿದ್ಯಾರ್ಥಿಗಳು ಸೇರಿ ಒಟ್ಟು 50 ವಿವಿಧ ತಳಿಯ ಸಸಿಗಳನ್ನು ನೆಟ್ಟರು. ಎಂಜಿನಿಯರ್ ಸತೀಶ್ ಜೆ. ಹಾಗೂ ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ಪಿ. ಪಾಟೀಲ ಅವರು ಸಸಿ ನೆಡುವ ಕಾರ್ಯ ನೆರವೇರಿಸಿದರು.ಜಗದೀಶ ಮರಬರಡ್ಡಿ ಅತಿಥಿಗಳನ್ನು ಸ್ವಾಗತಿಸಿದರು. ಸೌಮ್ಯಾ ಹಿರೇಮಠ ನಿರೂಪಿಸಿದರು. ಕಾಲೇಜಿನ ಬೋಧಕ, ಬೋಧಕೇತರ ಸಿಬ್ಬಂದಿ ವರ್ಗ ಹಾಗೂ ಎನ್‌ಎಸ್‌ಎಸ್ ಸ್ವಯಂ ಸೇವಕರು ಸೇರಿದಂತೆ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಪ್ರತಿಯೊಬ್ಬ ಮಗು ಸಸಿ ನೆಟ್ಟು ಪೋಷಿಸಲಿ
ಮುಂಡರಗಿ: ಮುಂದಿನ ಪೀಳಿಗೆಗೆ ಉತ್ತಮವಾದ ಪರಿಸರ ನೀಡುವ ಹೊಣೆಗಾರಿಕೆ ನಮ್ಮ ಮೇಲಿದೆ. ಹೀಗಾಗಿ, ಶಾಲೆಯಲ್ಲಿನ ಪ್ರತಿಯೊಂದು ಮಗು ಒಂದೊಂದು ಸಸಿ ನೆಟ್ಟು, ಅದಕ್ಕೆ ನೀರು ಹಾಕಿ ರಕ್ಷಿಸಿ, ಪೋಷಿಸಬೇಕು ಎಂದು ರೋಟರಿ ಶಿಕ್ಷಣ ಸಂಸ್ಥೆಯ ಗೌರವ ಕಾರ್ಯದರ್ಶಿ ಕೊಟ್ರೇಶ ಅಂಗಡಿ ತಿಳಿಸಿದರು.ಪಟ್ಟಣದ ರೋಟರಿ ಶಿಕ್ಷಣ ಸಂಸ್ಥೆಯ ವಿ.ಜಿ. ಲಿಂಬಿಕಾಯಿ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಶಾಲಾ ಆವರಣದಲ್ಲಿ ಸಸಿ ನೆಟ್ಟು ನಂತರ ಜರುಗಿದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಮಕ್ಕಳು ಯಾವುದಾದರೂ ಒಂದು ಸಸಿ ನೆಟ್ಟು ಅದು ದೊಡ್ಡದಾಗಿ ಬೆಳೆಯುವ ವರೆಗೂ ಪೋಷಣೆ ಮಾಡಬೇಕು. ನಾವು ಕಪ್ಪತ್ತಗುಡ್ಡದ ಸೆರಗಿನಲ್ಲಿರುವುದರಿಂದ ನಿತ್ಯವೂ ಉತ್ತಮ ಗಾಳಿ ಪಡೆಯುತ್ತಿದ್ದೇವೆ. ಮಕ್ಕಳು ಆಗಾಗ್ಗೆ ಕಪ್ಪತ್ತಗುಡ್ಡಕ್ಕೆ ಭೇಟಿ ನೀಡಿ ಬರಬೇಕು. ಅಲ್ಲಿನ ವನಸ್ಪತಿ ಸಸ್ಯಗಳ ಗಾಳಿ ಉಸಿರಾಡುವುದರಿಂದಲೇ ಅನೇಕ ಕಾಯಿಲೆಗಳು ಮಾಯವಾಗುತ್ತವೆ ಎಂದರು.
ಶಾಲಾ ಶಿಕ್ಷಕರಾದ ಟಿ.ಬಿ. ಕಳಕರಡ್ಡಿ, ಪ್ರತಿಭಾ ಪಾಟೀಲ ಮಾತನಾಡಿ, ರಾಸಾಯನಿಕಗಳ ಅತಿಯಾದ ಬಳಕೆಯಿಂದ ಪರಿಸರ ಹಾಳಾಗುತ್ತಿದೆ. ಹೀಗಾಗಿ, ಮಣ್ಣನ್ನು ಸಂರಕ್ಷಿಸಿಕೊಳ್ಳಬೇಕು. ಪರಿಸರ ಎಂದರೆ ಕೇವಲ ಗಾಳಿ ಅಲ್ಲ, ಅದು ಮಣ್ಣು, ನೀರು ಮುಂತಾದ ನಮ್ಮ ಸುತ್ತಲಿನ ಜೈವಿಕ, ಅಜೈವಿಕ ಘಟಕಗಳನ್ನು ಒಳಗೊಂಡ ಪ್ರಕ್ರಿಯೆ. ಅದನ್ನು ಸಂರಕ್ಷಿಸಿದಲ್ಲಿ ಮಾತ್ರ ಮುಂದಿನ ಪೀಳಿಗೆ ಯಾವುದೇ ಅಪಾಯವಿಲ್ಲದೆ ಬದುಕಬಹುದು ಎಂದರು.ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕರು ಹಾಗೂ ಸಿಬ್ಬಂದಿ ಮತ್ತು ಮಕ್ಕಳು ಉಪಸ್ಥಿತರಿದ್ದರು. ಪ್ರಾಥಮಿಕ ವಿಭಾಗದ ಮುಖ್ಯೋಪಾಧ್ಯಾಯ ಸಿ.ವಿ. ಪಾಟೀಲ, ಸ್ವಾಗತಿಸಿದರು. ಪ್ರೌಢ ವಿಭಾಗದ ಮುಖ್ಯೋಪಾಧ್ಯಾಯ ಎಂ.ಬಿ. ನಾಗರಹಳ್ಳಿ ನಿರೂಪಿಸಿದರು.