ಕೊಪ್ಪಳ: ತಂಬಾಕು ಮುಕ್ತ ಸಮಾಜ ನಿರ್ಮಾಣ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಹಿರಿಯ ಸಿವ್ಹಿಲ್ ನ್ಯಾಯಾದೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾಂತೇಶ ಎಸ್. ದರಗದ ಹೇಳಿದರು.
ಜಿಲ್ಲಾಡಳಿತ, ಜಿಪಂ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸರ್ವೇಕ್ಷಣಾ ಘಟಕ, ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಹಾಗೂ ರಾಜೀವ್‌ಗಾಂಧಿ ಗ್ರಾಮೀಣ ಶಿಕ್ಷಣ ಮಹಾವಿದ್ಯಾಲಯ ದದೇಗಲ್ ಸಂಯುಕ್ತಾಶ್ರಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವಿಶ್ವ ತಂಬಾಕು ರಹಿತ ದಿನಾಚರಣೆ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಇತ್ತೀಚಿನ ದಿನಗಳಲ್ಲಿ ಜನರು ತಂಬಾಕಿಗೆ ಹೆಚ್ಚು ಆಕರ್ಷಣೆಗೆ ಒಳಗಾಗುತ್ತಿದ್ದಾರೆ.ಇಂದಿನ ಸಮಾಜದಲ್ಲಿ ಅನೇಕ ಯುವಕರು ತಂಬಾಕು ಸೇವನೆ ಹಾಗೂ ಧೂಮಪಾನಕ್ಕೆ ಒಳಗಾಗುತ್ತಿದ್ದಾರೆ, ಇದರಿಂದ ಅವರ ಆರೋಗ್ಯ ಮತ್ತು ಸಮಾಜದ ಮೇಲೆ ಬಹಳಷ್ಟು ದುಷ್ಪರಿಣಾಮ ಬೀರುತ್ತವೆ ಮತ್ತು ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ಕುಂಠಿತಗೊಳ್ಳುತ್ತದೆ. ಈ ಹಿನ್ನೆಲೆಯಲ್ಲಿ ತಂಬಾಕು ಮುಕ್ತ ಸಮಾಜ ನಿರ್ಮಾಣ ಮಾಡಲು ಪ್ರತಿಯೊಬ್ಬರ ಕೈಜೋಡಿಸಬೇಕು ಎಂದರು.
ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ನಂದಕುಮಾರ ಎಚ್. ಪ್ರಾಸ್ತಾವಿಕವಾಗಿ ಕಾರ್ಯಕ್ರಮದ ಕುರಿತು ಮಾತನಾಡಿ, ಮೇ 31ರಂದು ವಿಶ್ವ ತಂಬಾಕು ರಹಿತ ದಿನಾಚರಣೆ ಆಯೋಜಿಸಲಾಗುತ್ತದೆ.ಈ ವರ್ಷ ಆಕರ್ಷಣೆ ಬಹಿರಂಗಪಡಿಸುವುದು-ನಿಕೋಟಿನ್ ಮತ್ತು ತಂಬಾಕು ವ್ಯಸನ ಎದುರಿಸುವುದು ಎಂಬ ಘೋಷವಾಕ್ಯದೊಂದಿಗೆ ವಿಶ್ವ ತಂಬಾಕು ರಹಿತ ದಿನಾಚರಣೆ ಕಾರ್ಯಕ್ರಮ ಆಚರಿಸಲಾಗುತ್ತಿದೆ. ಡಬ್ಲ್ಯೂ.ಎಚ್.ಓ ಪ್ರಕಾರ ತಂಬಾಕು ಮತ್ತು ನಿಕೋಟಿನ್ ಉದ್ಯಮವು ಯುವಕರನ್ನು ಗುರಿಯಾಗಿಸಲು ಸುವಾಸನೆ, ವರ್ಣರಂಜಿತ ಪ್ಯಾಕೇಜಿಂಗ್ ಮತ್ತು ಸಾಮಾಜಿಕ ಮಾಧ್ಯಮ ಹೇಗೆ ಬಳಸುತ್ತದೆ ಎಂಬುವದನ್ನು ಬಹಿರಂಗಪಡಿಸುವುದು ಈ ಘೋಷವಾಕ್ಯದ ಉದ್ದೇಶವಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡಿದರೆ ಕೊಟ್ಪಾ-2003 ಕಾಯ್ದೆಯ ಪ್ರಕಾರ, ದಂಡ ಮತ್ತು ಶಿಕ್ಷೆ ವಿಧಿಸಲಾಗುತ್ತದೆ ಮತ್ತು ಸೆಕ್ಷನ್ 6ಬಿ ಪ್ರಕಾರ ಶೈಕ್ಷಣಿಕ ಸಂಸ್ಥೆಗಳ 100 ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ತಂಬಾಕು ಉತ್ಪನ್ನ ಮಾರಾಟ ಮಾಡುವುದು ಶಿಕ್ಷಾರ್ಹ ಅಪರಾಧ ಎಂದು ತಿಳಿದರು.ಗ್ಲೋಬಾಲ ಅಡಲ್ಟ್ ಟೊಬಾಕೋ ಸರ್ವೇ-1 2009-10ರ ಪ್ರಕಾರ ಭಾರತದಲ್ಲಿ ಶೇ 34.6 ರಷ್ಟು ವಯಸ್ಕರು ತಂಬಾಕು ವ್ಯಸನಿಗಳಿದ್ದಾರೆ. ಸರ್ವೇ-2 2016-17ರ ಪ್ರಕಾರ ಭಾರತದಲ್ಲಿ ಶೇ 28.6 ರಷ್ಟು ವಯಸ್ಕರು ತಂಬಾಕು ವ್ಯಸನಿಗಳಿದ್ದಾರೆ. ಈ ಎರಡು ಸಮೀಕ್ಷೆಗಳಿಗೆ ಹೊಲಿಸಿದರೆ ಒಟ್ಟಾರೆ ತಂಬಾಕು ಬಳಕೆಯಲ್ಲಿ ಶೇ.6 ರಷ್ಟು ಇಳಿಕೆ ಕಂಡುಬಂದಿದೆ ಎಂದು ಜಿಎಟಿಎಸ್-2 ವರದಿಯು ತಿಳಿಸುತ್ತದೆ. ತಂಬಾಕಿನ ಬಗೆಗಿನ ಸತ್ಯಾಂಶ ಮತ್ತು ವಿಶ್ವದಾದ್ಯಂತ ತಂಬಾಕು ಸೇವನೆಯಿಂದ ಮತ್ತು ಧೂಮಪಾನದಿಂದ ಬರುವಂತಹ ಕಾಯಿಲೆಗಳಾದ ಬಾಯಿ ಕ್ಯಾನ್ಸರ್, ಹೃದಯ ಸಂಬಂಧಿತ ಕಾಯಿಲೆಗಳು ಮತ್ತು ಶ್ವಾಸಕೋಶದ ಕಾಯಿಲೆಗಳ ನಿಯಂತ್ರಣ ಮತ್ತು ತಡೆಗಟ್ಟುವ ಕ್ರಮಗಳ ಕುರಿತು ವಿವರವಾಗಿ ಮಾತನಾಡಿದರು.
ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ.ರವೀಂದ್ರನಾಥ ಎಂ.ಎಚ್ ಮಾತನಾಡಿ, ಇತ್ತಿಚಿನ ದಿನಗಳಲ್ಲಿ ಯುವಕರು ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಹೆಚ್ಚಾಗಿ ದುಷ್ಚಟ್ಟಕ್ಕೆ ಒಳಗಾಗುತಿದ್ದಾರೆ. ಹದಿಹರೆಯದವರ ಆರೋಗ್ಯ ಸಮಸ್ಯೆ ಮತ್ತು ಪರಿಹಾರ ಕುರಿತು ಇದೇ ವೇಳೆ ತಿಳಿಸಿದರು.
ಹಿರಿಯ ಉಪನ್ಯಾಸಕಿ ರಾಚಮ್ಮ ಹಿರೇಮಠ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ವಿವಿಧ ಕಾರ್ಯಕ್ರಮ ಅನುಷ್ಠಾನಾಧಿಕಾರಿ ಡಾ. ಎಚ್.ಪ್ರಕಾಶ, ಡಾ. ಗೋನಾಳ ಕುಮಾರಸ್ವಾಮಿ, ಡಿವೈಡಿಎಚ್ಇಓ ಕಾಲೇಜಿನ ಸಹ ಉಪನ್ಯಾಸಕ ದೇವಮ್ಮ ಹಾಗೂ ಜಿಲ್ಲಾ ತಂಬಾಕು ನಿಯಂತ್ರಣ ಕೋಶ, ಜಿಲ್ಲಾ ಸರ್ವೇಕ್ಷಣಾ ಘಟಕದ ಅಧಿಕಾರಿ, ಸಿಬ್ಬಂದಿ ವರ್ಗ ಮತ್ತು ಕಾಲೇಜಿನ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.
ಉಪನ್ಯಾಸಕ ಬಸವರಾಜ ನಾಯ್ಕ ನಿರೂಪಿಸಿದರು. ಬಿ.ಎಚ್.ಇ.ಓ ಗಂಗಮ್ಮ ವಿಶ್ವ ತಂಬಾಕು ರಹಿತ ದಿನಾಚರಣೆಯ ಪ್ರತಿಜ್ಞಾ ವಿಧಿ ಬೋಧಿಸಿದರು.