ಪ್ರತಾಪ್ ಸಿಂಹ ಕೇಳಿದ ಪ್ರಶ್ನೆಗೆ ಸಾರ್ವಜನಿಕ ಸಭೆಯಲ್ಲಿ ಯಾಕೆ ಉತ್ತರ ಕೊಡಲಿಲ್ಲ? ಅಂಬೇಡ್ಕರ್ ಅವರ ಹೆಸರನ್ನು ಉಪಯೋಗಿಸಿಕೊಂಡು ವೋಟ್ ಬ್ಯಾಂಕ್ ನಿರ್ಮಾಣಕ್ಕೆ ಮುಂದಾಗಿದ್ದಾರೆ. ನಿನ್ನೆ ನಡೆದ ಕಾರ್ಯಕ್ರಮದಿಂದ ಯಾವ ಪುರುಷಾರ್ಥ ಸಾಧಿಸಿದ್ರಿ.
ಕನ್ನಡಪ್ರಭ ವಾರ್ತೆ ಮೈಸೂರು
ಅಂಬೇಡ್ಕರ್ ಅವರ ಹೆಸರನ್ನು ಉಪಯೋಗಿಸಿಕೊಂಡು ವೋಟ್ ಬ್ಯಾಂಕ್ ನಿರ್ಮಾಣಕ್ಕೆ ಮುಂದಾಗಿದ್ದಾರೆ ಎಂದು ಶಾಸಕ ಟಿ.ಎಸ್.ಶ್ರೀವತ್ಸ ಕಾಂಗ್ರೆಸ್ ವಿರುದ್ಧ ಆರೋಪಿಸಿದರು.ರಾಜ್ಯ ಸರ್ಕಾರದಿಂದ ಸಂವಿಧಾನ ದಿನಾಚರಣೆ ಕುರಿತು ಶುಕ್ರವಾರ ಪತ್ರಕರ್ತರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, ಏನೋ ಸಂವಿಧಾನದ ಬಗ್ಗೆ ಸಂದೇಶ ಕೊಡ್ತೀವಿ ಅಂತ ಮಾಡಿದ್ರು, ಏನು ಸಂದೇಶ ಕೊಟ್ರು ಅಂತ ನಾವೆಲ್ಲ ನೋಡಿದ್ವಿ. ಸಂವಿಧಾನ ದಿನಾಚರಣೆಯನ್ನು ಸಮಾವೇಶದ ರೀತಿಯಲ್ಲಿ, ನಗರದ ನಾಗರೀಕರಿಗೆ ತೊಂದರೆ ಕೊಟ್ಟು ಮಾಡಿದ್ರು ಎಂದು ದೂರಿದರು.
ಸಂವಿಧಾನ ದಿನಾಚರಣೆ, ಸರ್ಕಾರದ ಕಾರ್ಯಕ್ರಮ ಅಂತ ಹೇಳಿ ನಮ್ಮನ್ನೆಲ್ಲ ಆಹ್ವಾನಿಸಿ ನಮ್ಮ ಪಕ್ಷವನ್ನು ಯಾಕೇ ಟೀಕೆ ಮಾಡಬೇಕು. ಆ ರೀತಿಯ ಉದ್ದೇಶ ಇದ್ದರೆ ಕಾಂಗ್ರೆಸ್ ಬ್ಯಾನರ್ ನಲ್ಲಿ ಸಂವಿಧಾನ ದಿನಾಚರಣೆ ಮಾಡಬೇಕಿತ್ತು. ಸರ್ಕಾರದ ಕಾರ್ಯಕ್ರಮಕ್ಕೆ ಆಹ್ವಾನ ಕೊಟ್ಟ ಮೇಲೆ ಎಲ್ಲರಿಗೂ ಗೌರವ ಕೊಡಬೇಕು ಎಂದರು.ಪ್ರತಾಪ್ ಸಿಂಹ ಕೇಳಿದ ಪ್ರಶ್ನೆಗೆ ಸಾರ್ವಜನಿಕ ಸಭೆಯಲ್ಲಿ ಯಾಕೆ ಉತ್ತರ ಕೊಡಲಿಲ್ಲ? ಅಂಬೇಡ್ಕರ್ ಅವರ ಹೆಸರನ್ನು ಉಪಯೋಗಿಸಿಕೊಂಡು ವೋಟ್ ಬ್ಯಾಂಕ್ ನಿರ್ಮಾಣಕ್ಕೆ ಮುಂದಾಗಿದ್ದಾರೆ. ನಿನ್ನೆ ನಡೆದ ಕಾರ್ಯಕ್ರಮದಿಂದ ಯಾವ ಪುರುಷಾರ್ಥ ಸಾಧಿಸಿದ್ರಿ ಎಂದು ಅವರು ಪ್ರಶ್ನಿಸಿದರು.
ಕೇಂದ್ರ ಸರ್ಕಾರ ಸಂವಿಧಾನದ ಕುರಿತು ಪಾರ್ಲಿಮೆಂಟ್ ನಲ್ಲಿ 2 ದಿನ ವಿಶೇಷ ಅಧಿವೇಶನ ನಡೆಸಿತು. ಯಡಿಯೂರಪ್ಪ ಸರ್ಕಾರ ಇದ್ದಾಗ ಆಗಲೂ ಕೂಡ 2 ದಿನ ವಿಶೇಷ ಅಧಿವೇಶನ ನಡೆದಿದೆ. ಸಂವಿಧಾನದ ಕುರಿತು ನಿನ್ನೆ ಚರ್ಚೆ ಮಾಡಿದ್ರಾ? ಸಂವಿಧಾನ ಮಾಡಿದ ಮಹಾಪುರುಷನ ಕೊಂಡಾಡಿದ್ರಾ? ಮೋದಿಯನ್ನು, ಬಿಜೆಪಿಯನ್ನು ಬೈಯುವಂತಹ ಸಮಾವೇಶ ಇದಾಗಿತ್ತು ಎಂದು ಅವರು ಉಗ್ರವಾಗಿ ಖಂಡಿಸಿದರು.ರಾಜ್ಯ ಸರ್ಕಾರದಲ್ಲಿ ದುಡ್ಡು ಇಲ್ಲಾ ಅಂತಾರೆ, ಆದರೂ ಇಷ್ಟು ಅದ್ಧೂರಿಯಾಗಿ ಸಂವಿಧಾನ ದಿನಾಚರಣೆ ಬೇಕಿತ್ತಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶ್ರೀವತ್ಸ ಅವರು, ಇದು ಅವರ ದುಡ್ಡು ಅಲ್ಲವಲ್ಲ, ಸಾರ್ವಜನಿಕರ ತೆರಿಗೆ ಹಣ. ಸುಮಾರು 14 ಕೋಟಿ ಖರ್ಚು ಮಾಡಿದ್ದಾರೆ. ಅದರಲ್ಲಿ 4 ಕೋಟಿ ಸ್ಟೇಜ್ ಗೆ ಅನ್ನೋ ಮಾಹಿತಿ ಕೂಡ ಇದೆ ಎಂದರು.
ಇವರಿಗೆ ಮಾಸಾಶನ ಕೊಡೋಕೆ ದುಡ್ಡಿಲ್ಲ, ಅಂಗವಿಕಲರಿಗೆ ಫ್ರೀ ಬಸ್ ಪಾಸ್ ಕೊಡಲು ಆಗಲ್ಲ, ಎಲ್ಲಾ ಯೋಜನೆಗಳನ್ನು ಕಳೆದ 7 ತಿಂಗಳಿಂದ ನಿಲ್ಲಿಸಿದಿರಿ. ನಿನ್ನೆ ನಡೆದ ಕಾರ್ಯಕ್ರಮಕ್ಕೆ ಜನ ಹೇಗೆ ಸೇರಿದ್ರು ಅಂತ ಅವರೇ ಹೇಳ್ತಿದ್ದಾರೆ, ಅವರಿಗೆ ಪೋಸ್ಟರ್ ನಲ್ಲಿ ಇರೋದು ಯಾರು ಅಂತಾನೂ ಗೊತ್ತಿಲ್ಲ, ಯಾಕೇ ಬಂದಿದ್ದರು ಅಂತಾನು ಗೊತ್ತಿಲ್ಲ. ಮುಗ್ದ ಜನರನ್ನು ಕರ್ಕೊಂಡು ಬಂದು, ಎಲ್ಲೋ ಅವರನ್ನು ಬಿಟ್ಟು, ಎಲ್ಲೋ ಊಟ ಕೊಟ್ಟು, ಎಲ್ಲರಿಗೂ ತೊಂದರೆ ಆಗಿದೆ. ಕಾಂಗ್ರೆಸ್ ಬ್ಯಾನರ್ ನಲ್ಲಿ ಈ ಕಾರ್ಯಕ್ರಮ ಮಾಡ್ಕೋಬೇಕಿತ್ತು, ಸರ್ಕಾರದ ಹೆಸರಲ್ಲಿ ಈ ರೀತಿಯ ಕಾರ್ಯಕ್ರಮವನ್ನು ನಾನು ಖಂಡಿಸ್ತೀನಿ ಎಂದು ಅವರು ತಿಳಿಸಿದರು.ಧೋರಣೆ ಸರಿಯಲ್ಲ:
ಆಶಾ ಕಾರ್ಯಕರ್ತೆಯರ ಬಗ್ಗೆ ಆರೋಗ್ಯ ಸಚಿವರು ಎಷ್ಟು ಹಗುರವಾಗಿ ಮಾತಾಡ್ತಾರೆ? ಇವರೆಲ್ಲ ಇಲ್ಲಾ ಅಂದ್ರು ಆರೋಗ್ಯ ಇಲಾಖೆ ನಡೆಯುತ್ತದೆ ಅಂತ ಹೇಳ್ತಾರೆ. ಮುಖ್ಯಮಂತ್ರಿ ಲಿಖಿತವಾಗಿ ಬರೆದು ಕೊಡೋಕೆ ಆಗಲ್ಲ ಅಂತಾರೆ, ಸರಿ ಕಡೇಪಕ್ಷ ಅವರು ಏನು ಮಾಡ್ತಾರೆ ಅಂತಾನಾದ್ರು ಘೋಷಿಸಬೇಕು ಅಲ್ವಾ? ಇಷ್ಟೇ ದುಡ್ಡು ಕೊಡೋದು ಅಂತ ಹೇಳಿ. ಅವರು ಮಳೆ, ಚಳಿ ಅಂತ ನೋಡದೇ ಕೆಲಸ ಮಾಡ್ತಾರೆ. ಸಮಸ್ಯೆಗೆ ಪರಿಹಾರ ಹುಡುಕದೇ ನಾನು ಹೇಳಿದಂಗೆ ಕೇಳೋದಾದ್ರೆ ಕರ್ನಾಟಕದಲ್ಲಿ ಇರಿ ಅಂತ ಹೇಳುವ ಧೋರಣೆ ತಪ್ಪು ಎಂದು ಅವರು ಖಂಡಿಸಿದರು.ತುಂಬಿದ ಕೊಡ ಅಂತ ಅವರು ಅಂದುಕೊಂಡಿದ್ರು, ಆದರೆ ಅದು ಪಾಪದ ಕೊಡವಾಗಿ ಪರಿವರ್ತನೆ ಆಗ್ತಿದೆ. ಮುಂದಿನ ಒಂದು ವರ್ಷದಲ್ಲಿ ಜನರು ರೊಚ್ಚಿಗೇಳ್ತಾರೆ, ರಾಜ್ಯದಲ್ಲಿ ಮುಂದೆ ಎನ್. ಡಿಎ ನೇತೃತ್ವದ ಸರ್ಕಾರ ಬರುತ್ತದೆ ಎಂದರು.