ಸಾಹಿತ್ಯ ಕ್ಷೇತ್ರದಲ್ಲೂ ಅರಾಜಕತೆ ಸೃಷ್ಟಿ: ವಿಷಾದ

| Published : Feb 24 2025, 12:34 AM IST

ಸಾರಾಂಶ

ದೇಶದಲ್ಲಿ ಸಾಮಾಜಿಕ ಚಿಂತಕರ ಸಂಖ್ಯೆ ಕಡಿಮೆಯಾಗುತ್ತಿದೆ. ವ್ಯಕ್ತಿಗತ ಚಿಂತನೆಗಳು ಮೇಲುಗೈ ಪಡೆಯುತ್ತಿವೆ. ಇಂತಹ ಸಂದರ್ಭದೊಳಗೆ ಸಾಮಾಜಿಕ ಸಹಿಷ್ಣುತೆಯ ಲೇಖಕರ ಅಗತ್ಯ ಹೆಚ್ಚಿದೆ ಎಂದು ಹಿರಿಯ ಜಾನಪದ ವಿದ್ವಾಂಸ ಡಾ.ಜಿ.ವಿ. ಆನಂದಮೂರ್ತಿ ವಿಶ್ಲೇಷಿಸಿದರು.

ಕನ್ನಡಪ್ರಭ ವಾರ್ತೆ ತುಮಕೂರುದೇಶದಲ್ಲಿ ಸಾಮಾಜಿಕ ಚಿಂತಕರ ಸಂಖ್ಯೆ ಕಡಿಮೆಯಾಗುತ್ತಿದೆ. ವ್ಯಕ್ತಿಗತ ಚಿಂತನೆಗಳು ಮೇಲುಗೈ ಪಡೆಯುತ್ತಿವೆ. ಇಂತಹ ಸಂದರ್ಭದೊಳಗೆ ಸಾಮಾಜಿಕ ಸಹಿಷ್ಣುತೆಯ ಲೇಖಕರ ಅಗತ್ಯ ಹೆಚ್ಚಿದೆ ಎಂದು ಹಿರಿಯ ಜಾನಪದ ವಿದ್ವಾಂಸ ಡಾ.ಜಿ.ವಿ. ಆನಂದಮೂರ್ತಿ ವಿಶ್ಲೇಷಿಸಿದರು.ಜನಮುಖಿ ಬಳಗ ತುಮಕೂರು, ಗೋಪಿಕಾ ಪ್ರಕಾಶನ ಬೆಂಗಳೂರು ಇವರ ಸಹಯೋಗದಲ್ಲಿ ತುಮಕೂರಿನ ಜನ ಚಳವಳಿ ಕೇಂದ್ರದ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಹಡವನಹಳ್ಳಿ ವೀರಣ್ಣಗೌಡ ಅವರ ಉರಿವ ದೀಪದ ಕೆಳಗೆ ಕಥಾ ಸಂಕಲನ ಲೋಕಾರ್ಪಣೆಗೊಳಿಸಿ ಮಾತನಾಡಿದರು.ದೇಶದ ಉದ್ದಗಲಕ್ಕೂ ಇಂದು ಸಾಂಸ್ಕೃತಿಕ ಅರಾಜಕತೆ ಹೆಚ್ಚುತ್ತಿದೆ. ಸಾಂಸ್ಕೃತಿಕ ಮತ್ತು ರಾಜಕೀಯ ಅರಾಜಕತೆಯ ನಡುವೆ ಸಾಹಿತ್ಯ ಕ್ಷೇತ್ರದಲ್ಲೂ ಅರಾಜಕತೆ ಸೃಷ್ಟಿಯಾಗಿದೆ. ಸಂವಿಧಾನದ ಅಭಿವ್ಯಕ್ತಿ ಸ್ವಾತಂತ್ರ್ಯದ ದಮನವಾಗುತ್ತಿದೆ. ಹಿಂದಿನ ಚಿಂತನೆಗಳು ಮತ್ತು ಚರ್ಚೆಗಳು ಈಗ ನಡೆಯುತ್ತಿಲ್ಲ ಎಂದು ವಿಷಾದಿಸಿದರು.ಹಿಂದೆ ಚಳವಳಿಗೂ ಭಾಷೆಗೂ ಅವಿನಾಭಾವ ಸಂಬಂಧವಿತ್ತು. ಈಗ ಭಾಷಾ ಚಿಂತಕರು ಮತ್ತು ಸಾಮಾಜಿಕ ಚಿಂತಕರ ಕೊರತೆಯನ್ನು ಕಾಣುತ್ತಿದ್ದೇವೆ. ಬಡತನ, ಜಾತಿಯತೆ, ಅಸ್ಪೃಷ್ಯತೆ ವಿರುದ್ಧ ಹೋರಾಡಲು ಸಾಮಾಜಿಕ ಚಳುವಳಿ ಹುಟ್ಟಿದ್ದವು. ಈ ಎಲ್ಲ ಹೋರಾಟಗಳು ಈಗ ಕ್ಷೀಣವಾಗಿವೆ. ಚಳುವಳಿಗೆ ಬೆಲೆ ಇಲ್ಲವಾಗಿದೆ. ನಿರಂತರವಾಗಿ ರೈತರು ವರ್ಷಗಟ್ಟಲೆ ಚಳುವಳಿ ನಡೆಸುತ್ತಾ ಸಾವು ನೋವು ಸಂಭವಿಸಿದರೂ ಅದರ ಬಗ್ಗೆ ಚಕಾರವಿಲ್ಲದ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಇದರ ವಿರುದ್ಧ ಪ್ರತಿಭಟಿಸಬೇಕಾದ ಚಿಂತಕರು, ಸಾಮಾಜಿಕ ಮಾಧ್ಯಮಗಳ ಸಂಖ್ಯೆಯೂ ಕ್ಷೀಣಿಸುತ್ತಿದೆ ಎಂದರು. ದೇಶವ್ಯಾಪಿ ನಿರುದ್ಯೋಗ ಸಮಸ್ಯೆ ಹೆಚ್ಚುತ್ತಿದೆ. ಜಾತಿ ಆಧಾರಿತ ಸಂಘಟನೆಗಳು ಬೆಳೆಯುತ್ತಿವೆ. ಭಾಷೆ ಕೋಮುವಾದಿಕರಣವಾಗಿ ಮಲೀನವಾಗಿದೆ. ಇದನ್ನು ಮಾನವೀಕರಣಗೊಳಿಸುವ ಕೆಲಸವಾಗಬೇಕು. ದ್ವೇಷದ ಬರಹ, ಮಾತುಗಳನ್ನು ನಿಲ್ಲಿಸಿ ಮಾನವೀಯ ನೆಲೆಗಟ್ಟಿನ ಭಾಷೆಯನ್ನು ಬೆಳೆಸುವ ನಿಟ್ಟಿನಲ್ಲಿ ಲೇಖಕರು ಚಿಂತಿಸಬೇಕಿದೆ. ಭಾಷೆಗೆ ಮಾನವೀಯತೆಯ ಸ್ಪರ್ಶ ತಂದುಕೊಡಲು ನಾವೆಲ್ಲಾ ಹೋರಾಡಬೇಕಿದೆ ಎಂದರು.ಅಧ್ಯಕ್ಷತೆ ವಹಿಸಿದ್ದ ಲೇಖಕಿ ಬಾ.ಹ.ರಮಾಕುಮಾರಿ ಮಾತನಾಡಿ ಸಾಂಸ್ಕೃತಿಕ ಮನಸ್ಸುಗಳನ್ನು ಕಟ್ಟುವ ಕೆಲಸ ಸಮಜದಲ್ಲಿ ಇಂದು ಅಗತ್ಯವಿದೆ. ಎಲ್ಲ ಕ್ಷೇತ್ರವೂ ಕಲುಷಿತಗೊಳ್ಳುತ್ತಿರುವ ಈ ಸಂದರ್ಭದಲ್ಲಿ ಮಾನವೀಯತೆಯ ಬಾಂಧವ್ಯಕ್ಕೆ ಒತ್ತು ಕೊಡಬೇಕಿದೆ ಎಂದರು.ಜನಪರ ವಿಚಾರಗಳು ಹೆಚ್ಚು ಚರ್ಚೆಯಾಗುತ್ತಿಲ್ಲ. ಮೌಢ್ಯಗಳು, ಜನರಿಗೆ ಅಗತ್ಯವಿಲ್ಲದ ವಿಷಯಗಳೇ ಹೆಚ್ಚು ಚರ್ಚೆಗೆ ಬರುತ್ತಿವೆ. ಇದನ್ನು ಬದಲಾವಣೆಗೊಳಿಸುವ ಅಗತ್ಯವಿದೆ. ಶಾಂತಿಯ ತೋಟವಾಗಿದ್ದ ಕರ್ನಾಟಕದಲ್ಲಿಯೂ ಅಶಾಂತಿಯ ವಾತಾವರಣ ನಿರ್ಮಾಣವಾಗುತ್ತಿದೆ. ಜನರ ಬೇಕು ಬೇಡಗಳಿಗೆ ಬದಲಾಗಿ ಅವರ ಮನಸ್ಸನ್ನು ಬೇರೆಡೆಗೆ ಸೆಳೆಯುವ ಪ್ರಯತ್ನಗಳಾಗುತ್ತಿವೆ. ಮೌಢ್ಯ ಮತ್ತು ಅವೈಜ್ಞಾನಿಕ ವಿಷಯಗಳಿಗೆ ಮನ್ನಣೆ ನೀಡಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಬರಹಗಾರರು ಮತ್ತು ಮಾಧ್ಯಮಗಳ ಜವಾಬ್ದಾರಿ ಹೆಚ್ಚಿನದಿದೆ ಎಂದರು.ಉರಿವ ದೀಪದ ಕೆಳಗೆ ಕೃತಿ ಕುರಿತು ವಿಶ್ಲೇಷಿಸಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರು, ವಿಮರ್ಶಕರೂ ಆದ ಡಾ.ರವಿಕುಮಾರ್ ನೀಹ ಅವರು ಪ್ರಸ್ತುತ ಸಂದರ್ಭದಲ್ಲಿ ಮೌಢ್ಯ ಮತ್ತು ವೈಚಾರಿಕತೆಯ ನಿಲುವಿನ ಕೃತಿಗಳ ಅವಶ್ಯಕತೆ ಇದ್ದು, ಸಾಮಾಜಿಕ ಬದಲಾವಣೆಗೆ ಇವುಗಳು ಪೂರಕವಾಗಬೇಕಿದೆ. ಹೆಣ್ಣು ಮಕ್ಕಳ ಮುಟ್ಟು, ಮೈಲಿಗೆಯ ವಿರುದ್ಧ ಅರಿವು ಮೂಡಿಸಬೇಕಿದೆ. ಅಂತಹ ಒಂದು ಪ್ರಯತ್ನವನ್ನು ಹಡವನಹಳ್ಳಿ ವೀರಣ್ಣಗೌಡ ಮಾಡಿದ್ದು ಹೆಣ್ಣಿನ ಶೋಷಣೆ ಮತ್ತು ಬದಲಾವಣೆಯ ಮಾರ್ಗವನ್ನು ಕೃತಿಯಲ್ಲಿ ತೋರಿಸಿಕೊಟ್ಟಿದ್ದಾರೆ ಎಂದರು.ದಂಡಿನಶಿವರ ಮಂಜುನಾಥ್ ಅವರ ಸುದ್ದಿ ಸಂಗಾತಿ ಧ್ವನಿ ಕನ್ನಡ ಮಾಸಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದ ಸಾಮಾಜಿಕ ಹೋರಾಟಗಾರ ಸಾ.ಚಿ.ರಾಜಕುಮಾರ ಮಾತನಾಡಿ ಪ್ರಸ್ತುತ ದ್ವೇಷ, ಅಸೂಯೆ ವಿಜೃಂಭಿಸುತ್ತಿರುವ ಈ ದಿನಗಳಲ್ಲಿ ಮನುಷ್ಯರ ನಡುವೆ ಸೌಹಾರ್ದತೆ ಮೂಡಿಸಲು ಪತ್ರಿಕೆಗಳು ಮತ್ತು ಕೃತಿಗಳ ಅವಶ್ಯಕತೆ ಹೆಚ್ಚಿದೆ. ಸಾಮಾಜಿಕವಾಗಿ ಇಂದಿಗೂ ಕೆಲವು ಸಮುದಾಯಗಳಲ್ಲಿ ಮನೆ ಮಾಡಿರುವ ಮೌಢ್ಯ ನಿವಾರಣೆಗೆ ಬರಹಗಾರರು ಶ್ರಮಿಸಬೇಕಿದೆ. ಈ ನಿಟ್ಟಿನಲ್ಲಿ ಹೊರ ಬಂದಿರುವ ಕೃತಿ ಹಾಗೂ ಪತ್ರಿಕೆಯ ಕಾರ್ಯ ಶ್ಲಾಘನೀಯ ಎಂದರು.ಕೃತಿಕಾರ ಹಡವನಹಳ್ಳಿ ವೀರಣ್ಣಗೌಡ ಮಾತನಾಡಿ ಎಲ್ಲ ಕಡೆ ಅಸಹಿಷ್ಣುತೆ, ಭಯದ ವಾತಾವರಣ ಸೃಷ್ಟಿಯಾಗುತ್ತಿದ್ದು, ಈಗ ಹೊಸ ಧರ್ಮದ ಕಡೆಗೆ ನಾವು ಬದಲಾಗಬೇಕಿದೆ. ಮೌಢ್ಯ ವಿರೋಧಿಸುವ, ಸಾಮಾಜಿಕ ಸ್ವಾಸ್ತ್ಯ ಕಾಪಾಡುವ ಕಡೆಗೆ ನಾವು ಮನಸ್ಸು ಮಾಡಬೇಕಿದೆ ಎಂದರು. ಕೃತಿ ಬಿಡುಗಡೆಯ ಜೊತೆಗೆ ಇದೇ ಸಮಾರಂಭದಲ್ಲಿ ಸಾಮಾಜಿಕವಾಗಿ ಸೇವೆ ಸಲ್ಲಿಸುತ್ತಿರುವ ಹಲವರನ್ನು ಸನ್ಮಾನಿಸುತ್ತಿದ್ದು, ಇಂತಹ ಎಲ್ಲ ಕಾರ್ಯಗಳಿಗೆ ಬೆನ್ನೆಲುಬಾಗಿ ಸಹಕರಿಸುತ್ತಿರುವ ವಿವಿಧ ಸಂಸ್ಥೆಗಳ ಮುಖಂಡರು ಹಾಗೂ ಬಹುಮುಖಿ ಬಳಗಕ್ಕೆ ಅಭಿನಂದನೆ ಸಲ್ಲಿಸಿದರು.ಕಾರ್ಮಿಕ ಹೋರಾಟಗಾರ ಎನ್.ಕೆ.ಸುಬ್ರಹ್ಮಣ್ಯ, ದಂಡಿನಶಿವರ ಮಂಜುನಾಥ್ ಅವರುಗಳು ಮಾತನಾಡಿದರು. ಇದೇ ಸಂದರ್ಭದಲ್ಲಿ ಕಲಾಕ್ಷೇತ್ರದ ಡಿ.ಎನ್.ದಿವಾಕರ್, ಶಿಕ್ಷಣ ಕ್ಷೇತ್ರದ ರಾಮಯ್ಯ, ಪುಸ್ತಕೋದ್ಯಮದ ಸಿದ್ದೇಶ್, ಅಗ್ನಿಶಾಮಕ ಸೇವೆಯ ಧರಣೇಶ್ ಅವರುಗಳನ್ನು ಸನ್ಮಾನಿಸಲಾಯಿತು. ಗಾಯಕ ಎಂ.ವೈ.ಗಂಗಣ್ಣ ಅವರಿಂದ ಭಾವಗೀತೆಗಳ ಗಾಯನ ನಡೆಯಿತು. ಹೆಚ್.ಎಂ.ವಸಂತಕುಮಾರ್ ಸ್ವಾಗತಿಸಿದರು. ಕೆ.ಶಿವಮ್ಮ ಕಾರ್ಯಕ್ರಮ ನಿರೂಪಿಸಿದರು. ರಾಯಲ್ ರವಿ ವಂದಿಸಿದರು. ಶಿಕ್ಷಕಿ ವಿವೇಕ, ಚಂದ್ರಶೇಖರ್ ಇತರರನ್ನು ಅಭಿನಂದಿಸಲಾಯಿತು.