ಕನ್ನಡಪ್ರಭ ವಾರ್ತೆ ಶಿವಮೊಗ್ಗ

ದೆಹಲಿಯ ಜಂತರ್ ಮಂತರ್‌ನಲ್ಲಿ ನೀಟ್ ವಿಚಾರಕ್ಕೆ ಕೇಂದ್ರ ಸಚಿವರ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ ನಡೆದಿದೆ‌. ಆ ಪ್ರತಿಭಟನೆಗೆ ನನ್ನ ವಿರೋಧವಿಲ್ಲ. ಆದರೆ, ವಿರೋಧ ಪಕ್ಷಗಳು ಷಡ್ಯಂತ್ರ ಮಾಡಿವೆ ಎಂಬ ಚರ್ಚೆಯಾಗಿದೆ. ಪ್ರತಿಭಟನೆಯ ನೆಪದಲ್ಲಿ ಅರಾಜಕತೆ ಸೃಷ್ಟಿಸುವ ಕೆಲಸ ವಿಪಕ್ಷಗಳಿಂದ ಆಗುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆರೋಪಿಸಿದರು.

ಶಿವಮೊಗ್ಗದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಭಟನೆಗೆ ಅಧಿಕಾರವಿದೆ. ಪೊಲೀಸರು, ಮಾಧ್ಯಮಗಳ ಮೇಲೆ ಹಲ್ಲೆ, ದೇಶದ ವಿರೋಧಿ ಹೇಳಿಕೆ ನೀಡಿದ್ದನ್ನು ಗಮನಿಸಿದ್ದೇವೆ. ಪ್ರತಿಭಟನೆ ವಿಚಾರದಲ್ಲಿ ವಿರೋಧ ಪಕ್ಷಗಳು ಷಡ್ಯಂತ್ರ ಮಾಡಿವೆ ಎಂಬ ಚರ್ಚೆಯಾಗಿದೆ. ಸಿದ್ದರಾಮಯ್ಯ ಅವರು ಪ್ರಧಾನಿ ಮೋದಿ ದುರ್ಬಲ- ದುಷ್ಟ ರಕ್ಷಕ ಅಂತ ಹೇಳಿದ್ದಾರೆ. ಆದರೆ, ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗ ಹುಬ್ಬಳ್ಳಿಯಲ್ಲಿ ಪ್ರತಿಭಟನೆ ಮಾಡಿದ್ದರು. 2.5 ಲಕ್ಷ ಹುದ್ದೆಗಳ ಭರ್ತಿಗೆ ಲಕ್ಷಾಂತರ ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿದ್ದರು. ಆಗ ನಿಮ್ಮ ಈ ಕಾಳಜಿ ಎಲ್ಲಿ ಹೋಗಿತ್ತು..? ಎಂದು ಪ್ರಶ್ನಿಸಿದರು.

ಸಿದ್ದರಾಮಯ್ಯ ಸಿಎಂ ಆದಾಗ ಎಷ್ಟು ನೇಮಕಾತಿ ಮಾಡಿದ್ದರು? ಅದರ ಬಗ್ಗೆಯೂ ಬೆಳಕು ಚೆಲ್ಲಬೇಕು. ನಿಮ್ಮ ಅಧಿಕಾರ ಅವಧಿಯಲ್ಲಿ ಎಷ್ಟು ಲಕ್ಷ ಯುವಕರಿಗೆ ಬದುಕು ಕಟ್ಟಿಕೊಟ್ಟಿದ್ದೀರಾ ತಿಳಿಸಬೇಕು ಎಂದು ಚಾಟಿ ಬೀಸಿದರು.

ಐಪಿಎಲ್‌ ವಿಜಯೋತ್ಸವದಲ್ಲಿ ಚಿನ್ನಸ್ವಾಮಿ ಬಳಿ ಕಾಲ್ತುಳಿತ ಆದಾಗ ನೀವು ಮಾಡಿದ್ದನ್ನು ನೋಡಿದ್ದೇವೆ. ಸಿಎಂ-ಡಿಸಿಎಂ ಪ್ರಚಾರಕ್ಕೆ ಮಾಡಿದ ಘಟನೆಯನ್ನು ಜನ ಮರೆತಿಲ್ಲ. ನೀಟ್ ವಿಚಾರದಲ್ಲಿ ಕೇಂದ್ರ ಸರ್ಕಾರ, ಪ್ರಧಾನಿ ಮೋದಿ ಎಲ್ಲವನ್ನು ಗಮನಿಸಿದ್ದಾರೆ. ಮರುಪರೀಕ್ಷೆಯನ್ನು ಸರ್ಕಾರ ಯಶಸ್ವಿಯಾಗಿ ನಡೆಸಿದೆ. ಆದರೆ, ವಿಪಕ್ಷಗಳು ಇಂತಹ ವಿಚಾರ ತೆಗೆದುಕೊಂಡು ವಿಷಬೀಜ ಬಿತ್ತುವ ಕೆಲಸ ಮಾಡುತ್ತಿವೆ ಎಂದು ಹರಿಹಾಯ್ದರು.


ಡಿಕೆಶಿ ಕನಕಪುರದ ಸಿಎಂ ಅಲ್ಲ

ಡಿ.ಕೆ.ಶಿವಕುಮಾರ್‌ ಅವರು ಕನಕಪುರದ ಸಿಎಂ ಅಲ್ಲ, ಕರ್ನಾಟಕದ ಮುಖ್ಯಮಂತ್ರಿ. ರಿಯಲ್ ಎಸ್ಟೇಟ್ ಹಿತಾಸಕ್ತಿಯ ಬದಲಾಗಿ ಜನರ ಹಿತಾಸಕ್ತಿ ಗಮನಿಸಬೇಕು. ಎರಡನೇ ಏರ್ಪೋರ್ಟ್ ಅನ್ನು ಕನಕಪುರ ಭಾಗದಲ್ಲಿ ಬದಲು ತುಮಕೂರು ಭಾಗದಲ್ಲಿ ಮಾಡಬೇಕು. ಈ ಸಂಬಂಧ ಸಿಎಂಗೆ ಪತ್ರ ಕೂಡ ಬರೆದಿದ್ದೇನೆ ಎಂದು ಬಿ.ವೈ.ವಿಜಯೇಂದ್ರ ತಿಳಿಸಿದರು.

ತುಮಕೂರಿನಲ್ಲಿ ಏರ್ಪೋರ್ಟ್‌ ಮಾಡಿದರೆ 7 ರಿಂದ 8 ಜಿಲ್ಲೆಗೆ ಅನುಕೂಲ ಆಗುತ್ತೇ. ಕನಕಪುರದಲ್ಲಿ ಮಾಡಿದರೆ ಮತ್ತೆ ಬೆಂಗಳೂರಿನ ಮೇಲೆ ಒತ್ತಡ ಆಗುತ್ತೆ. ಹೀಗಾಗಿ ಸಚಿವರು, ಶಾಸಕರ ಜೊತೆ ಚರ್ಚಿಸಿ ಕ್ರಮ ತೆಗೆದುಕೊಳ್ಳಲಿ. ಕನಕಪುರದಲ್ಲಿ ಮಾಡಿದರೆ ರಾಜ್ಯಕ್ಕೆ ಅನುಕೂಲ ಅಗಲ್ಲ. ಮತ್ತೋಮ್ಮೆ ಪರಿಶೀಲಿಸಿ, ಚರ್ಚಿಸಿ ತೀರ್ಮಾನ ಮಾಡಿ ಎಂದು ಒತ್ತಾಯಿಸಿದ ಅವರು, ಐದಾರು ತಿಂಗಳು ಮುಂದೂಡಿದ್ರು ಸರ್ಕಾರದ ಬೊಕ್ಕಸಕ್ಕೆ ಹೊರೆ ಕಡಿಮೆಯಾಗುತ್ತೆ ಎನ್ನುವ ಕಾರಣಕ್ಕೆ ಗೃಹಲಕ್ಷ್ಮೀ, ಗೃಹಜ್ಯೋತಿ ವಿಚಾರಕ್ಕೂ ಗೊಂದಲ ಮಾಡುತ್ತಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಎಸ್ಐಆರ್ ಮಹಾಸಂಪರ್ಕ ಅಭಿಯಾನ

ಜುಲೈ 25 ರಿಂದ 26 ರಂದು ಎಸ್ಐಆರ್ ಸಂಬಂಧ ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಸಂಸದರು, ಶಾಸಕರು, ಪರಿಷತ್ ಶಾಸಕರು ನೇತೃತ್ವದಲ್ಲಿ ಮಹಾಸಂಪರ್ಕ ಅಭಿಯಾನ ಮಾಡುತ್ತೇವೆ ಎಂದು ಬಿ.ವೈ. ವಿಜಯೇಂದ್ರ ತಿಳಿಸಿದರು.

ಈ ಅಭಿಯಾನದಲ್ಲಿ ಒಂದು ಕೋಟಿ ಮನೆ ತಲುಪುವ ಗುರಿ ಇಟ್ಟುಕೊಂಡಿದ್ದೇವೆ .ಎಸ್ಐಆರ್ ಫಾರ್ಮ್ ಬಗ್ಗೆ ಜಾಗೃತಿ ಮೂಡಿಸಿ, ಗೊಂದಲ ಬಗೆಹರಿಸುತ್ತೇವೆ. ಹೀಗಾಗಿ ಮಹಾಸಂಪರ್ಕ ಅಭಿಯಾನ ಘೋಷಣೆ ಮಾಡಿದ್ದೇವೆ. ಪ್ರತಿ ಕಾರ್ಯಕರ್ತ ಕನಿಷ್ಠ 20 ಮನೆ ತಲಪಲು ಗುರಿ ನೀಡಲಾಗಿದೆ. ಎಸ್ಐಆರ್ ಯಶಸ್ವಿ ಆಗೋ ನಿಟ್ಟಿನಲ್ಲಿ ಅಭಿಯಾನ ಮಾಡುತ್ತೇವೆ ಎಂದರು.