ಮಹಿಳೆಯರು ಯಾವುದೇ ಕಾರಣಕ್ಕೂ ತಪ್ಪು ತಿಳಿವಳಿಕೆಯಿಂದ ಸ್ವಯಂಪ್ರೇರಿತವಾಗಿ ಔಷಧಗಳನ್ನು ಖರೀದಿಸಿ ಸೇವಿಸುವುದರಿಂದ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಉಂಟಾಗುವ ಸಾಧ್ಯತೆ ಇರುವುದರಿಂದ, ಅರ್ಹ ವೈದ್ಯಕೀಯ ಸಿಬ್ಬಂದಿಯ ಮಾರ್ಗದರ್ಶನದಲ್ಲಿ ಸುರಕ್ಷಿತ ಆರೋಗ್ಯ ಸೇವೆ ಪಡೆಯುವುದು ಅಗತ್ಯ ಎಂದು ತಿಳಿಸಿದರು. ಸರ್ಕಾರಿ ಆಸ್ಪತ್ರೆಗಳಲ್ಲಿ ತಜ್ಞ ವೈದ್ಯರು ಹಾಗೂ ಅಗತ್ಯ ಆರೋಗ್ಯ ಸೇವೆಗಳು ಲಭ್ಯವಿದ್ದು, ಸರ್ಕಾರದ ನಿಯಮಾನುಸಾರ ಮಹಿಳೆಯರಿಗೆ ಸುರಕ್ಷಿತ ಹಾಗೂ ಅಗತ್ಯ ವೈದ್ಯಕೀಯ ಸೇವೆಗಳನ್ನು ಒದಗಿಸಲಾಗುತ್ತಿದೆ. ಈ ಸೌಲಭ್ಯಗಳ ಕುರಿತು ಮಹಿಳೆಯರು ಸೂಕ್ತ ಮಾಹಿತಿ ಪಡೆದುಕೊಂಡು ಸದುಪಯೋಗಪಡಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.

ಕನ್ನಡಪ್ರಭ ವಾರ್ತೆ ಹಾಸನ

ಅಂತಾರಾಷ್ಟ್ರೀಯ ಸುರಕ್ಷಿತ ಗರ್ಭಪಾತ ದಿನಾಚರಣೆ ಅಂಗವಾಗಿ ಮಹಿಳೆಯರಲ್ಲಿ ಸುರಕ್ಷಿತ ಗರ್ಭಪಾತ, ಮಹಿಳೆಯರ ಆರೋಗ್ಯ ರಕ್ಷಣೆ ಹಾಗೂ ಸರ್ಕಾರದಿಂದ ದೊರೆಯುವ ಉಚಿತ ಆರೋಗ್ಯ ಸೇವೆಗಳ ಕುರಿತು ಅರಿವು ಮೂಡಿಸುವ ಜಿಲ್ಲಾ ಮಟ್ಟದ ಕಾರ್ಯಕ್ರಮವನ್ನು ನಗರದ ಹೊರವಲಯದ ಬೂವನಹಳ್ಳಿ ಕ್ರಾಸ್ ಬಳಿಯ ಭಾರತಿ ಕಾಫಿ ಕ್ಯೂರಿಂಗ್‌ನಲ್ಲಿ ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಕಂಪನಿಯ ಸುಮಾರು ೧೫೦ಕ್ಕೂ ಹೆಚ್ಚು ಮಹಿಳಾ ಸಿಬ್ಬಂದಿ ಭಾಗವಹಿಸಿ ಸುರಕ್ಷಿತ ಗರ್ಭಪಾತ ಹಾಗೂ ಮಹಿಳಾ ಆರೋಗ್ಯಕ್ಕೆ ಸಂಬಂಧಿಸಿದಂತೆ ಅಗತ್ಯ ಮಾಹಿತಿಯನ್ನು ಪಡೆದುಕೊಂಡರು. ಕಂಪನಿಯ ಮಾಲೀಕ ಜಿ.ಎಲ್. ಮುದ್ದೇಗೌಡ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ.ಡಿ. ಜಗದೀಶ್ ಪ್ರಾಸ್ತಾವಿಕವಾಗಿ ಮಾತನಾಡಿ, ಅಂತಾರಾಷ್ಟ್ರೀಯ ಸುರಕ್ಷಿತ ಗರ್ಭಪಾತ ದಿನಾಚರಣೆಯ ಉದ್ದೇಶ ಹಾಗೂ ಮಹಿಳೆಯರ ಆರೋಗ್ಯದ ದೃಷ್ಟಿಯಿಂದ ಸುರಕ್ಷಿತ ಗರ್ಭಪಾತದ ಮಹತ್ವವನ್ನು ವಿವರಿಸಿದರು. ಮಹಿಳೆಯರು ಯಾವುದೇ ಕಾರಣಕ್ಕೂ ತಪ್ಪು ತಿಳಿವಳಿಕೆಯಿಂದ ಸ್ವಯಂಪ್ರೇರಿತವಾಗಿ ಔಷಧಗಳನ್ನು ಖರೀದಿಸಿ ಸೇವಿಸುವುದರಿಂದ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಉಂಟಾಗುವ ಸಾಧ್ಯತೆ ಇರುವುದರಿಂದ, ಅರ್ಹ ವೈದ್ಯಕೀಯ ಸಿಬ್ಬಂದಿಯ ಮಾರ್ಗದರ್ಶನದಲ್ಲಿ ಸುರಕ್ಷಿತ ಆರೋಗ್ಯ ಸೇವೆ ಪಡೆಯುವುದು ಅಗತ್ಯ ಎಂದು ತಿಳಿಸಿದರು. ಸರ್ಕಾರಿ ಆಸ್ಪತ್ರೆಗಳಲ್ಲಿ ತಜ್ಞ ವೈದ್ಯರು ಹಾಗೂ ಅಗತ್ಯ ಆರೋಗ್ಯ ಸೇವೆಗಳು ಲಭ್ಯವಿದ್ದು, ಸರ್ಕಾರದ ನಿಯಮಾನುಸಾರ ಮಹಿಳೆಯರಿಗೆ ಸುರಕ್ಷಿತ ಹಾಗೂ ಅಗತ್ಯ ವೈದ್ಯಕೀಯ ಸೇವೆಗಳನ್ನು ಒದಗಿಸಲಾಗುತ್ತಿದೆ. ಈ ಸೌಲಭ್ಯಗಳ ಕುರಿತು ಮಹಿಳೆಯರು ಸೂಕ್ತ ಮಾಹಿತಿ ಪಡೆದುಕೊಂಡು ಸದುಪಯೋಗಪಡಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.

ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಐ-ಪಾಸ್ ಫೌಂಡೇಶನ್‌ನ ಸಮನ್ವಯಾಧಿಕಾರಿ ಎಂ. ನಾಗೇಶ್ ಅವರು ಮಹಿಳೆಯರಿಗೆ ಭಿತ್ತಿಪತ್ರಗಳನ್ನು ವಿತರಿಸಿ, ಸರ್ಕಾರದಿಂದ ಲಭ್ಯವಿರುವ ಉಚಿತ ಆರೋಗ್ಯ ಸೇವೆಗಳು ಹಾಗೂ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು. ಅಲ್ಲದೆ, ಅನಗತ್ಯ ಗರ್ಭಧಾರಣೆಯನ್ನು ತಡೆಗಟ್ಟಲು ಲಭ್ಯವಿರುವ ವಿವಿಧ ಕುಟುಂಬ ಕಲ್ಯಾಣ ವಿಧಾನಗಳು ಹಾಗೂ ಸಾಧನಗಳ ಬಗ್ಗೆ ಚಿತ್ರಪಟಗಳ ಮೂಲಕ ಸರಳವಾಗಿ ವಿವರಿಸಿದರು.ಕುಟುಂಬದಲ್ಲಿ ಮಹಿಳೆಯರ ಪಾತ್ರ ಎಷ್ಟು ಮಹತ್ವದ್ದೋ, ಅವರ ಆರೋಗ್ಯ ರಕ್ಷಣೆಯೂ ಅಷ್ಟೇ ಮುಖ್ಯವಾಗಿದೆ. ಮಹಿಳೆಯರ ಆರೋಗ್ಯ ರಕ್ಷಣೆಗಾಗಿ ಸರ್ಕಾರ ಹಲವು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೊಳಿಸಿದ್ದು, ಅರ್ಹ ಮಹಿಳೆಯರು ಈ ಯೋಜನೆಗಳು ಹಾಗೂ ಸೇವೆಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಅವರು ತಿಳಿಸಿದರು.ಕಾರ್ಯಕ್ರಮದ ವೇಳೆ ಮಹಿಳಾ ಸಿಬ್ಬಂದಿ ವಿವಿಧ ಪ್ರಶ್ನೆಗಳನ್ನು ಕೇಳಿ ತಮ್ಮಲ್ಲಿದ್ದ ಅನುಮಾನಗಳನ್ನು ಪರಿಹರಿಸಿಕೊಂಡರು. ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ.ಡಿ. ಜಗದೀಶ್ ಅವರು ಪ್ರಶ್ನೆಗಳಿಗೆ ಸೂಕ್ತ ಮಾಹಿತಿ ಹಾಗೂ ಮಾರ್ಗದರ್ಶನ ನೀಡಿದರು.ಕಾರ್ಯಕ್ರಮದಲ್ಲಿ ವೈದ್ಯಾಧಿಕಾರಿಗಳಾದ ಡಾ. ಕಾರ್ತಿಕ್‌ ಗೌಡ, ಡಾ. ವಿದ್ಯಾಶ್ರೀ, ಜಿಲ್ಲಾ ಉಪಶಿಕ್ಷಣಾಧಿಕಾರಿ ಮಂಜುಳ, ಸರಕಾರಿ ನರ್ಸಿಂಗ್ ಕಾಲೇಜು ಪ್ರಾಂಶುಪಾಲೆ ಸಿ.ಟಿ. ರತ್ನಮ್ಮ ಸೇರಿದಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು. ಹಾಸನ ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಸತೀಶ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.