ನಾಟಕಗಳ ಬಗ್ಗೆ ತಮಗೆ ಅಪಾರ ಆಸಕ್ತಿಯಿದ್ದು, ಸಮಯದ ಅಭಾವದಿಂದ ಇಂತಹ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ಆದರೂ ಕನ್ನಡ ರಂಗಭೂಮಿ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಬಗ್ಗೆ ವಿಶೇಷ ಒಲವಿದೆ.
ಕನ್ನಡಪ್ರಭ ವಾರ್ತೆ ಮಂಡ್ಯ
ನಾಟಕಗಳು ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸುತ್ತವೆ. ಕನ್ನಡ ರಂಗಭೂಮಿ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂದು ಪಿಇಟಿ ಅಧ್ಯಕ್ಷ ಕೆ.ಎಸ್.ವಿಜಯ್ ಆನಂದ್ ತಿಳಿಸಿದರು.ಭೂಮಿಬೆಳಗು ಸಾಂಸ್ಕೃತಿಕ ಸಂಘ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾ ಮಂದಿರದಲ್ಲಿ ನಡೆದ ಸಿಜಿಕೆಗೆ ರಂಗನಮನ, ನೀನಾಸಂ ನಾಟಕೋತ್ಸವ-೨೦೨೬ ನಾಟಕ ಪ್ರದರ್ಶನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಾಟಕೋತ್ಸವದಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ಕಲಾವಿದರನ್ನು ಪ್ರೋತ್ಸಾಹಿಸುವುದರ ಜೊತೆಗೆ ಕನ್ನಡ ರಂಗಭೂಮಿಯ ಬೆಳವಣಿಗೆಗೆ ಸಹಕಾರಿಯಾಗಿವೆ ಎಂದರು.
ತಮ್ಮ ತಂದೆಯವರು ಸ್ಥಾಪಿಸಿ ಬೆಳೆಸಿದ ಸಂಸ್ಥೆಯ ವೇದಿಕೆಯಲ್ಲಿ ನಾಟಕ ಪ್ರದರ್ಶನ ನಡೆಯುತ್ತಿರುವುದು ಸಂತೋಷದ ಸಂಗತಿ. ಹಿರಿಯರು ಹಾಕಿಕೊಟ್ಟ ಮಾರ್ಗದಲ್ಲಿ ಸಂಸ್ಥೆಯ ಚಟುವಟಿಕೆಗಳನ್ನು ಮುಂದುವರಿಸಿಕೊಂಡು ಹೋಗುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.ವಿಧಾನ ಪರಿಷತ್ ಸದಸ್ಯ ಮಧು ಜಿ. ಮಾದೇಗೌಡ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಾಟಕಗಳ ಬಗ್ಗೆ ತಮಗೆ ಅಪಾರ ಆಸಕ್ತಿಯಿದ್ದು, ಸಮಯದ ಅಭಾವದಿಂದ ಇಂತಹ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ಆದರೂ ಕನ್ನಡ ರಂಗಭೂಮಿ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಬಗ್ಗೆ ವಿಶೇಷ ಒಲವಿದೆ ಎಂದರು.
ಸಮಾಜಮುಖಿ ಕಾರ್ಯಗಳಿಗೆ ಸದಾ ಪ್ರೋತ್ಸಾಹ ಮತ್ತು ಸಹಕಾರ ನೀಡಲು ಸಿದ್ಧನಿದ್ದು, ಇಂತಹ ಕಾರ್ಯಕ್ರಮಗಳು ಮುಂದಿನ ದಿನಗಳಲ್ಲಿಯೂ ಹೆಚ್ಚಾಗಿ ನಡೆಯಬೇಕು. ಮಂಡ್ಯದಲ್ಲಿ ಆಯೋಜಿಸಿರುವ ನಾಟಕೋತ್ಸವಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ನಾಟಕಾಭಿಮಾನಿಗಳು ಭಾಗವಹಿಸಿರುವುದು ಸಂತಸ ತಂದಿದೆ. ಕನ್ನಡ ರಂಗಭೂಮಿ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ಹೆಚ್ಚಿನ ಪ್ರೋತ್ಸಾಹ ದೊರೆಯಬೇಕು ಎಂದರು.ಪತ್ರಕರ್ತ ಡಿ.ಎನ್.ಶ್ರೀಪಾದು ಮಾತನಾಡಿ, ಸಿ.ಜಿ.ಕೆ.ಅವರ ಜೀವನದ ಕೊನೆಯ ದಿನಗಳ ಕುರಿತು ಪುಸ್ತಕದಲ್ಲಿ ಓದುವಾಗ ಕಣ್ಣೀರು ಬಂತು. ಅಷ್ಟೊಂದು ನೋವು ಮತ್ತು ಸಂಕಷ್ಟಗಳ ನಡುವೆಯೂ ಅವರು ಬದುಕಿನಲ್ಲಿ ತೋರಿದ ಧೈರ್ಯ ಹಾಗೂ ಸಾಧನೆ ಸ್ಮರಣೀಯ. ದೈಹಿಕ ಸಂಕಷ್ಟಗಳ ನಡುವೆಯೂ ಜೀವನದಲ್ಲಿ ಮುನ್ನಡೆಯಲು ಪ್ರಯತ್ನಿಸಿದ ಅವರಿಗೆ ಅನೇಕ ಕಷ್ಟಗಳು ಎದುರಾಗಿದ್ದವು. ಇಂತಹ ಸಂದರ್ಭದಲ್ಲಿ ಅವರ ಬೆನ್ನಿಗೆ ನಿಂತು ಆತ್ಮಸ್ಥೈರ್ಯ ತುಂಬಿದವರ ಸಹಕಾರವೂ ಮಹತ್ವದ್ದಾಗಿತ್ತು. ಅವರ ಬದುಕು ಮತ್ತು ಸಾಧನೆ ಇಂದಿನ ಪೀಳಿಗೆಗೆ ಸ್ಫೂರ್ತಿಯಾಗಬೇಕು ಎಂದರು.
ಮಂಡ್ಯಕ್ಕೆ ನಾಟಕ ಕ್ಷೇತ್ರದಲ್ಲಿ ವಿಶೇಷ ಪರಂಪರೆಯಿದೆ. ಈ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುವ ಜವಾಬ್ದಾರಿ ಇಲ್ಲಿನ ಜನರ ಮೇಲಿದೆ. ಪ್ರತಿವರ್ಷ ನಾಟಕೋತ್ಸವ ಆಯೋಜಿಸುವ ಮೂಲಕ ರಂಗಭೂಮಿಯ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಬೇಕು. ಉತ್ತಮ ನಾಟಕಗಳನ್ನು ಪ್ರದರ್ಶಿಸುವ ಮೂಲಕ ಜನರಲ್ಲಿ ರಂಗಾಸಕ್ತಿಯನ್ನು ಬೆಳೆಸಬೇಕು ಎಂದರು.ಕಾರ್ಯಕ್ರಮದಲ್ಲಿ ಸಿ.ಜಿ.ಕೆ. ಅವರ ಧರ್ಮಪತ್ನಿ ಬೆಂಗಳೂರಿನ ಜಯಲಕ್ಷ್ಮಿ ಕೃಷ್ಣಸ್ವಾಮಿ ಅವರಿಗೆ ರಂಗಗೌರವ ಸಲ್ಲಿಸಲಾಯಿತು. ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಜಿಲ್ಲಾಧ್ಯಕ್ಷ ಎಂ.ವಿ. ಧರಣೇಂದ್ರಯ್ಯ, ಭೂಮಿ ಬೆಳಗು ಸಾಂಸ್ಕೃತಿಕ ಸಂಘದ ಅಧ್ಯಕ್ಷ ಮಂಗಲ ಎಂ. ಯೋಗೀಶ್, ಕರ್ನಾಟಕ ಸಂಘದ ಪ್ರಧಾನ ಕಾರ್ಯದರ್ಶಿ ಚಂದಗಾಲು ಲೋಕೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.