ಸಾರಾಂಶ
ಲಕ್ಷ್ಮೇಶ್ವರ: ಪ್ರತಿ ಮಗು ತನ್ನ ಕಲಿಕಾ ಹಿನ್ನೆಲೆ ಲೆಕ್ಕಿಸದೆ ಉತ್ತಮ ಸಾಧನೆ ಮಾಡಲು ಸಮಾನ ಅವಕಾಶ ಸೃಷ್ಟಿಸುವುದೇ ಶಿಕ್ಷಣ ಎಂದು ಬಿಇಓ ಎಚ್.ಎನ್. ನಾಯ್ಕ ಹೇಳಿದರು.
ಸೋಮವಾರ ಪಟ್ಟಣದ ಬಿ.ಸಿ.ಎನ್ ವಿದ್ಯಾ ಸಂಸ್ಥೆಯಲ್ಲಿ ಹಿರಿಯ ಪ್ರಾಥಮಿಕ ಶಾಲೆಗಳ ಗಣಿತ ಮತ್ತು ಸಮಾಜವಿಜ್ಞಾನ ಬೋಧಿಸುವ ಶಿಕ್ಷಕರಿಗಾಗಿ ಹಮ್ಮಿಕೊಳ್ಳಲಾದ ಮರುಸಿಂಚನ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಮಗುವಿನ ಬೆಳವಣಿಗೆಯಲ್ಲಿ ಶಿಕ್ಷಣ ಪಾತ್ರ ಪ್ರಮುಖವಾಗಿದೆ. ಮಗುವಿನ ಶೈಕ್ಷಣಿಕ ಹಿನ್ನೆಲೆ ನೋಡದೆ ಆ ಮಗುವಿಗೆ ಉತ್ತಮ ಅವಕಾಶ ಸೃಷ್ಟಿಸುವ ಕಾರ್ಯ ಶಿಕ್ಷಣ ಮಾಡುತ್ತದೆ. ಪ್ರತಿಯೊಂದು ಮಗುವಿನಲ್ಲಿ ಒಂದಿಲ್ಲೊಂದು ವಿಶೇಷಗುಣ ಅಡಗಿರುತ್ತದೆ. ಮಗುವಿನಲ್ಲಿನ ಪ್ರತಿಭೆ ಹೊರ ತರುವ ಕಾರ್ಯ ಶಿಕ್ಷಕರಿಂದ ಆಗಬೇಕು. ಶಿಕ್ಷಕರು ತಾವು ಪಡೆದ ತರಬೇತಿ ತರಗತಿಯ ಮಟ್ಟಕ್ಕೆ ಇಳಿಸಿ ವಿದ್ಯಾರ್ಥಿಗಳಲ್ಲಿ ಪ್ರಗತಿ ಕಾಣುವಂತೆ ಮಾಡುವುದು ನಮ್ಮೆಲ್ಲರ ಧ್ಯೇಯವಾಗಿದೆ ಎಂದು ಹೇಳಿದರು.
ಈ ವೇಳೆ ಪ್ರಾಸ್ತಾವಿಕವಾಗಿ ಬಿಆರ್‌ಸಿ ಈಶ್ವರ ಮೆಡ್ಲೇರಿ ಮಾತನಾಡಿ, ಗುಣಮಟ್ಟದ ಶಿಕ್ಷಣ ಸಾಧ್ಯವಾಗಿಸಲು ಸರ್ಕಾರ ಹಲವಾರು ಉಪಕ್ರಮ ಕೈಗೊಳ್ಳುತ್ತಿದ್ದು, ಅದರಲ್ಲಿ ಮರು ಸಿಂಚನ ಬಹಳಷ್ಟು ಮಹತ್ವದ್ದು. ಇದರ ಮುಖಾಂತರ ವಿದ್ಯಾರ್ಥಿಗಳ ಕಲಿಕಾ ನ್ಯೂನತೆ ಹೋಗಲಾಡಿಸಿ ಅವರಲ್ಲಿ ಕಲಿಕೆ ದೃಢಪಡಿಸುವ ಬಹು ಪ್ರಮುಖ ಗುರಿ ಹೊಂದಲಾಗಿದೆ ಎಂದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ಬಿಸಿಎನ್ ವಿದ್ಯಾಸಂಸ್ಥೆಯ ಆಡಳಿತ ಅಧಿಕಾರಿ ನಾಗರಾಜ್ ಯಂಡಿಗೇರಿ, ಇಂತಹ ಕಾರ್ಯಕ್ರಮಗಳ ಮುಖಾಂತರ ಶಿಕ್ಷಣದ ಎಲ್ಲ ಸ್ಥರ ತಲುಪಲು ಸಾಧ್ಯವಾಗುತ್ತಿದೆ.ಇಂತಹ ಕಾರ್ಯಕ್ರಮಗಳಿಗೆ ನಮ್ಮ ವಿದ್ಯಾಸಂಸ್ಥೆ ಯಾವಾಗಲೂ ಪೂರಕವಾಗಿ ನಿಲ್ಲುತ್ತದೆ ಎಂದರು.
ಸಭೆಯಲ್ಲಿ ಸಿಆರ್ ಪಿ ಚಂದ್ರಶೇಖರ ವಡಕಣ್ಣವರ, ಸತೀಶ ಭೋಮಲೆ, ಜ್ಯೋತಿ ಗಾಯಕವಾಡ, ಸಂಪನ್ಮೂಲ ಶಿಕ್ಷಕ ವೈ.ಬಿ.ಪಾಟೀಲ, ನವೀನ ಅಂಗಡಿ, ವೈ.ಎನ್ ಬಾಲಣ್ಣವರ, ಪಿ.ಎಂ. ಹೊಸಂಗಡಿ, ಎಲ್.ಬಿ. ಮತ್ತೂರ, ಸಚಿನ್ ಮಣ್ಣೂರ ಶ್ರೀಕಾಂತ್ ಬಾರ್ಕಿ, ಶ್ರೀಶೈಲ ಭಿಕ್ಷಾವೃತ್ತಿಮಠ, ನಂದೀಶ ಮಂಟೂರ, ನಾಗರಾಜ ಮಜ್ಜಿಗುಡ್ಡ, ಆರ್. ಮಹಾಂತೇಶ, ವಾಸು ದೀಪಾಲಿ, ವೀರೇಶ ಕಮ್ಮಾರ ಇದ್ದರು.ಸಿ.ಆರ್.ಪಿ ಉಮೇಶ ನೇಕಾರ ನಿರೂಪಿಸಿದರು. ಕೆ.ಪಿ. ಕಂಬಳಿ ಪ್ರಾರ್ಥಿಸಿದರು. ಎನ್.ಎನ್. ಸಾವಿರಕುರಿ ವಂದಿಸಿದರು. ಲಕ್ಷ್ಮೇಶ್ವರ ಹಾಗೂ ಶಿರಹಟ್ಟಿ ತಾಲೂಕುಗಳ 80 ಶಿಕ್ಷಕರು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.